ಮುಂಬಯಿ: ವೆಸ್ಟ್ ಇಂಡೀಸ್ ವಿರುದ್ಧದ 4ನೇ ಏಕದಿನ ಪಂದ್ಯವನ್ನು ಸೋಲಲು ಮಹೇಂದ್ರ ಸಿಂಗ್ ಧೋನಿ ಅವರ ನಿಧಾನ ಗತಿಯ ಬ್ಯಾಟಿಂಗೇ ಕಾರಣ ಎಂಬುದಾಗಿ ತರ್ಕಿಸಲಾಗುತ್ತಿದೆ. ಆದರೆ ಈ ಸೋಲಿಗೆ ಧೋನಿಯನ್ನು ಹೊಣೆಗಾರನನ್ನಾಗಿ ಮಾಡುವುದು ತಪ್ಪು ಎಂಬುದಾಗಿ ಮಾಜಿ ಕ್ರಿಕೆಟಿಗರಾದ ಸುನೀಲ್ ಗಾವಸ್ಕರ್ ಮತ್ತು ಕೀಪರ್ ಕಿರಣ್ ಮೋರೆ ಹೇಳಿದ್ದಾರೆ.
“ಸೋಲಿಗೆ ಧೋನಿಯನ್ನೇಕೆ ದೂರಬೇಕು? ಅಗ್ರ ಸರದಿಯ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಏನಾಗಿತ್ತು? ಅವರ ಜವಾಬ್ದಾರಿ ಏನು? ಯಾರು ಕೂಡ ಧೋನಿಯ ಉದ್ದೇಶವನ್ನು ಪ್ರಶ್ನಿಸುವಂತಿಲ್ಲ. ಯಶಸ್ಸು-ವೈಫಲ್ಯ ಕ್ರೀಡೆಯ ಅಂಗಗಳೇ ಆಗಿವೆ. ಧೋನಿ ಇದಕ್ಕೂ ಹಿಂದಿನ ಪಂದ್ಯದಲ್ಲಿ ಕ್ಲಿಕ್ ಆಗಿದ್ದರು, ಈ ಬಾರಿ ವಿಫಲರಾಗಿದ್ದಾರೆ. ಕ್ರಿಕೆಟ್‌ನಲ್ಲಿ ಇದೆಲ್ಲ ಸಹಜ…’ ಎಂದು ಕಿರಣ್ ಮೋರೆ ಟೀಕಾಕಾರರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದರು.
“ನಿಮಗೆ ನೆನಪಿರಲಿ, ಈ ಪಂದ್ಯದಲ್ಲಿ ಧೋನಿ ವಿಫಲರಾಗಿಲ್ಲ. ಅವರು ಅರ್ಧ ಶತಕ ಬಾರಿಸಿದ್ದಾರೆ. ಅಜಿಂಕ್ಯ ರಹಾನೆ ಹೊರತುಪಡಿಸಿದರೆ ತಂಡದ ಗರಿಷ್ಠ ಗಳಿಕೆ ಧೋನಿ ಅವರದೇ ಆಗಿದೆ…’ ಎಂದು ಮೋರೆ ಹೇಳಿದರು.
ರವಿವಾರದ ಪಂದ್ಯದಲ್ಲಿ ಧೋನಿ ಅರ್ಧ ಶತಕ ಪೂರೈಸಲು 108 ಎಸೆತಗಳನ್ನು ತೆಗೆದುಕೊಂಡಿದ್ದರು. ಇದು ಭಾರತದ ಏಕದಿನ ಚರಿತ್ರೆಯಲ್ಲೇ 2ನೇ ಅತ್ಯಂತ ನಿಧಾನ ಗತಿಯ ಫಿಫ್ಟಿ ಎನಿಸಿತ್ತು. ಕೀನ್ಯಾ ವಿರುದ್ಧದ 1999ರ ನೈರೋಬಿ ಪಂದ್ಯದಲ್ಲಿ ಎಸ್. ರಮೇಶ್ ಅರ್ಧ ಶತಕಕ್ಕೆ 116 ಎಸೆತ ಎದುರಿಸಿದ್ದು ಭಾರತೀಯ ದಾಖಲೆ.
ಮತ್ತೂಬ್ಬ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಕೂಡ ಧೋನಿ ಆಟದಲ್ಲೇನೂ ದೋಷ ಇಲ್ಲ ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಧೋನಿಯನ್ನು ದೂರುವುದನ್ನು ಮೊದಲು ನಿಲ್ಲಿಸಿ. ಇದು ಧೋನಿ ವೈಫಲ್ಯದಿಂದ ಎದುರಾದ ಸೋಲಲ್ಲ, ತಂಡದ ಬ್ಯಾಟಿಂಗ್ ವಿಭಾಗದ ವೈಫಲ್ಯದಿಂದ ಎದುರಾದ ಸೋಲು. ಆದರೆ ಟೀಮ್ ಇಂಡಿಯಾದ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಚಿಂತೆಪಡುವ ಅಗತ್ಯವಿಲ್ಲ…’ ಎಂದಿದ್ದಾರೆ ಗಾವಸ್ಕರ್.
ಅಂತಿಮ ಹಾಗೂ 5ನೇ ಪಂದ್ಯ ಗುರುವಾರ ಕಿಂಗ್‌ಸ್ಟನ್‌ನಲ್ಲಿ ನಡೆಯಲಿದೆ.