ಕುಂಬಳೆ: ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ ಹೇರೂರು ಬಜ್ಪೆಕಡವು ರಸ್ತೆ ಬದಿಯ ತಡೆಗೋಡೆ ಕುಸಿದು ಸಂಚಾರಕ್ಕೆ ತಡೆಯಾಗಿದೆ.
ಈ ರಸ್ತೆಯನ್ನು 2011ರಲ್ಲಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಸಡಕ್ ಯೋಜನೆಯಲ್ಲಿ ಒಳಪಡಿಸಿ ರಸ್ತೆ ಡಾಮರೀಕಣ ಕೈಗೊಳ್ಳಲಾಗಿತ್ತು. ಬಳಿಕ ಕೆಟ್ಟುಹೋಗಿ ಕಳೆದ 4 ತಿಂಗಳ ಹಿಂದೆ ಕೋಟಿಗಟ್ಟಲೆ ನಿಧಿ ಬಳಸಿ ಮೆಕ್‌ಡ್ಯಾಂ ಡಾಮರೀಕರಣ ಕಾಮಗಾರಿ ನಡೆದಿತ್ತು. ಯೋಜನೆಯಲ್ಲಿ ಕೆಲವು ಕಡೆ ರಸ್ತೆಯನ್ನು ಎತ್ತರ ಮತ್ತು ಅಗಲಗೊಳಿಸಲಾಗಿದೆ. ಇದರಂತೆ ಚಿನ್ನಮೊಗರು ಮಸೀದಿ ಬಳಿಯ ಕೆರೆಯ ಪಕ್ಕದಲ್ಲಿ ರಸ್ತೆಗೆ ಮಣ್ಣು ಹಾಕಿ ಎತ್ತರಗೊಳಿಸಿ ರಸ್ತೆ ಬದಿಗೆ ಕಲ್ಲು ಕಟ್ಟಲಾಗಿದೆ. ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಗೆ ಜು. 26ರಂದು ಬೆಳಗ್ಗೆ ಈ ರಸ್ತೆ ಬದಿಗೆ ಕಟ್ಟಿದ್ದ ತಡೆಗೋಡೆಯ ಕಲ್ಲುಗಳು ಪಕ್ಕದ ಆಳದ ಕೆರೆಗೆ ಕುಸಿದು ಬಿದ್ದಿವೆ.
ಇದರಿಂದ ರಸ್ತೆಯ ಡಾಮರಿನ ಒಂದು ಭಾಗವೂ ಒಡೆದು ನಿಂತಿದೆ. ಇದರಿಂದಾಗಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಸಂಪೂರ್ಣ ತಡೆಯಾಗಿದೆ. ಒಟ್ಟು 5.200 ಕಿ.ಮೀ. ಉದ್ದದ ರಸ್ತೆಯಲ್ಲಿ 4 ಕಿ.ಮೀ. ದೂರದ ಪ್ರದೇಶ ದ್ವೀಪವಾಗಿದೆ. ಸ್ಥಳೀಯ ಮಸೀದಿ, ಹೇರೂರು ಪಾರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ, ಹೇರೂರು ಶ್ರೀ ಮಹಾವಿಷ್ಣು ಕ್ಷೇತ್ರಕ್ಕೆ ತೆರಳಲು ತಡೆಯಾಗಿದೆ. ಸುಮಾರು 800ರಷ್ಟು ಮನೆಯವರಿಗೆ ರಸ್ತೆ ಸಂಪರ್ಕ ಇಲ್ಲವಾಗಿದೆ. ಕೃಷಿಕರೇ ಅಧಿಕವಾಗಿರುವ ಪ್ರದೇಶದ ರಸ್ತೆಯಲ್ಲಿ ವಾಹನಗಳನ್ನು ಸಂಚರಿಸದಂತೆ ರಸ್ತೆ ಮಧ್ಯದಲ್ಲಿ ಕಲ್ಲುಗಳನ್ನು ಇರಿಸಿ ಬಂದ್ ಮಾಡಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಮೂರು ಖಾಸಗಿ ಬಸ್ಸುಗಳ ಯಾನವನ್ನು ಒಂದು ವಾರದಿಂದ ರದ್ದು ಗೊಳಿಸಲಾಗಿದೆ. ಈ ಕಾರಣ ಜನರು 4 ಕಿ.ಮೀ. ಪಾದಯಾತ್ರೆಯ ಮೂಲಕ ಬಂದ್ಯೋಡು ಧರ್ಮತ್ತಡ್ಕ ಪ್ರಧಾನ ರಸ್ತೆಗೆ ಸಂಪರ್ಕಿಸಬೇಕಾಗಿದೆ.
ಹಿಂದಿನ ಕಾಮಗಾರಿಯ ಕಲ್ಲುಗಳನ್ನು ಕಟ್ಟಿದ ಕಟ್ಟದ ಮೇಲೆಯೇ ಮತ್ತೆ ಕಲ್ಲುಗಳನ್ನು ಕಟ್ಟಿರುವುದರಿಂದ ಸುಮಾರು 50 ಮೀಟರ್ ಉದ್ದಕ್ಕೆ ಕಲ್ಲುಗಳು ಕುಸಿಯಲು ಕಾರಣವಾಗಿದೆ.ಕಾಸರಗೋಡು ಜಿಲ್ಲಾ ಪಂಚಾಯತ್ ಅಧೀನದ ರಸ್ತೆಯಾಗಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಕಂದಾಯ ಅಧಿಕಾರಿಗಳು ಭೇಟಿ ನೀಡಿ ರಸ್ತೆಯಲ್ಲಿ ವಾಹನ ಸಂಚರಿಸದಂತೆ ಆದೇಶ ನೀಡಿದ್ದಾರೆ. ಆದರೆ ಈ ಪ್ರದೇಶದ ಜನರು ಸಂಕಷ್ಟವನ್ನು ಅನುಭವಿಸಬೇಕಾಗಿದೆ. ಕುಸಿದ ತಡೆಗೋಡೆಯನ್ನು ಕಟ್ಟಲು ಕೊಳದಲ್ಲಿ ನೀರು ತುಂಬಿರುವುದರಿಂದ ತೊಡಕಾಗಿದೆ. ರಸ್ತೆಯ ಅಡಿಭಾಗದಲ್ಲಿ ತೋಟದಿಂದ ಒರತೆ ನೀರು ಹರಿದು ಕೆರೆಗೆ ಸೇರುತ್ತಿದೆ. ಇದರಿಂದ ತತ್ಕಾಲದ ಪರಿಹಾರ ಕ್ರಮಕ್ಕೂ ತೊಡಕಾಗಿದೆ. ಇಲಾಖೆಗೆ ತಲೆಬಿಸಿಯಾಗಿದೆ. ಪ್ರಸ್ತುತ ಸ್ಥಳದ ರಸ್ತೆ ಪಕ್ಕದಲ್ಲಿ ವಿದ್ಯುತ್ ಕಂಬವೊಂದು ವಾಹನ ಸಂಚಾರಕ್ಕೆ ತೊಡಕಾಗಿದೆ. ಇದನ್ನು ಪಕ್ಕಕ್ಕೆ ಸರಿಸಲು ಅಡಿಕೆ ತೋಟ ಅಡ್ಡಿಯಾಗಿದೆ.
ತುರ್ತು ಕ್ರಮ
ಜಿಲ್ಲಾಧಿಕಾರಿ,ಕಂದಾಯ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರಲ್ಲಿ ತುರ್ತು ಪರಿಹಾರ ಕ್ರಮಕ್ಕೆ ಸೂಚಿಸಿರುವೆ. ಆದರೆ ಕೊಳದಲ್ಲಿ ಮಳೆ ನೀರು ತುಂಬಿ ಕಾಮಗಾರಿಗೆ ತೊಡಕಾಗಿದೆ.
-ಪ್ರಸಾದ್ ರೈ ಕಯ್ನಾರು. ಸದಸ್ಯರು, ಮಂಜೇಶ್ವರ ಬ್ಲಾ.ಪಂ.
ತಪ್ಪಿದ ದುರಂತ
ಮಳೆಗಾಲ ಮತ್ತು ಬೇಸಗೆಯಲ್ಲಿ ನಿತ್ಯಸಂಜೆ ಹೊತ್ತು ಹತ್ತಿಪ್ಪತ್ತು ಮಂದಿ ಯುವಕರು ಕುಸಿದ ರಸ್ತೆಯ ಪಕ್ಕದ ತಡೆಗೋಡೆಯ ಮೇಲ್ಭಾಗದಿಂದ ಕೆರೆಗೆ ಹಾರಿ ಈಜುತ್ತಿದ್ದರು. ಆದರೆ ಬೆಳಗ್ಗಿನ ಹೊತ್ತಿನಲ್ಲಿ ತಡೆಗೋಡೆ ಕುಸಿದಿರುವುದರಿಂದ ಸಂಭವನೀಯ ದುರಂತ ತಪ್ಪಿದಂತಾಗಿದೆ.