ಶ್ರೀನಗರ: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಬಾಲಿವುಡ್ ನ ಇಮ್ರಾನ್ ಹಶ್ಮಿ ನಟನೆಯ “ಗ್ರೌಂಡ್ ಜೀರೋ” ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಬಂಧಿಸಲಾಗಿದೆ ಎಂದು ಮಂಗಳವಾರ (ಸೆ.20) ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಜಿಮ್ ಗಳಲ್ಲಿ ನೀಡುವ ಪ್ರೊಟೀನ್ ಪೌಡರ್ ಬ್ಯಾನ್ ಮಾಡಬೇಕು: ಸದನದಲ್ಲಿ ಭಾರಿ ಚರ್ಚೆ
ಕೆಲವು ಮಾಧ್ಯಮಗಳ ವರದಿ ಪ್ರಕಾರ, ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕಲ್ಲು ತೂರಾಟ ನಡೆಸಿದ ಪರಿಣಾಮ ಇಮ್ರಾನ್ ಹಶ್ಮಿ ಗಾಯಗೊಂಡಿರುವುದಾಗಿ ತಿಳಿಸಿದೆ.
ಸೆಪ್ಟೆಂಬರ್ 18ರಂದು ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡ ನಂತರ ವ್ಯಕ್ತಿಯೊಬ್ಬ ಸಿಬಂದಿಗಳತ್ತ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿರುವುದಾಗಿ ಅನಂತ್ ನಾಗ್ ಪೊಲೀಸರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಕಳೆದ ಎರಡು ವಾರಗಳಿಂದ ಕಾಶ್ಮೀರದಲ್ಲಿ ಇಮ್ರಾನ್ ಹಶ್ಮಿಯ ಗ್ರೌಂಡ್ ಜೀರೋ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.
ಈ ವರದಿ ಸತ್ಯಕ್ಕೆ ದೂರವಾದದ್ದು ಎಂದು ನಟ ಹಶ್ಮಿ ಪ್ರತಿಕ್ರಿಯಿಸಿದ್ದು, ಕಾಶ್ಮೀರದ ಜನರು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಶ್ರೀನಗರ ಮತ್ತು ಪಹಲ್ಗಾಮ್ ನಲ್ಲಿ ನಡೆದ ಚಿತ್ರೀಕರಣದಿಂದ ನಮಗೆಲ್ಲರಿಗೂ ಸಂತಸವಾಗಿದೆ. ಆದರೆ ಚಿತ್ರೀಕರಣದ ವೇಳೆ ನನ್ನ ಮೇಲೆ ಕಲ್ಲು ತೂರಾಟ ನಡೆದಿದೆ ಎಂಬುದು ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದ್ದಾರೆ.