ಮಂಡ್ಯ: ಶ್ರೀರಂಗಪಟ್ಟಣದ ಕೆಆರ್ ಎಸ್ ಡ್ಯಾಂ ಬಳಿ ಕಲ್ಲುಗಳು ಕುಸಿತವಾಗಿರುವುದರಿಂದ ಆತಂಕ ಹೆಚ್ಚಾಗಿದೆ. ಮಂಡ್ಯ ಸಂಸದೆ ಸುಮಲತಾ ಅವರ ಕೆಆರ್ ಎಸ್ ಡ್ಯಾಂ ಬಿರುಕು ಹೇಳಿಕೆ ಹಸಿಯಾಗಿರುವಾಗಲೇ ಕಾವೇರಿ ಪ್ರತಿಮೆಗೆ ಹೋಗುವ ರಸ್ತೆಯ ತಳಹದಿಯ 30ಕ್ಕೂ ಹೆಚ್ಚು ಕಲ್ಲುಗಳು ಕುಸಿದಿದ್ದು ಆತಂಕ ಮೂಡಿಸಿದೆ.
ಕಳೆದ ಮೂರು ದಿನಗಳಿಂದ ಮಳೆ ಎಡೆ ಬಿಡದೆ ಸುರಿಯುತ್ತಿದ್ದು, ಅದರ ನಡುವೆ ಡ್ಯಾಂ ನಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿರುವ ಸಮಯದಲ್ಲೇ ಈ ರಸ್ತೆ ಕೆಳಗಿನ 30 ಕ್ಕೂ ಹೆಚ್ಚು ಕಲ್ಲುಗಳು ಕುಸಿದಿವೆ. ಡ್ಯಾಂ ಕೆಳಗಿರುವ ಈ ರಸ್ತೆ ಕಾವೇರಿ ಪ್ರತಿಮೆ ಬಳಿ ಹೋಗುವ ರಸ್ತೆಯಾಗಿದ್ದು, ಈ ರಸ್ತೆಯ ತಳಹದಿಗೆ ಈ ಕಲ್ಲುಗಳನ್ನು ಅಳವಡಿಸಿಲಾಗಿತ್ತು. ರಾತ್ರಿ ಮಳೆಯ ನಡುವೆ ಕಲ್ಲುಗಳು ಕುಸಿದು ಬಿದ್ದಿವೆ. ಡ್ಯಾಂನಲ್ಲಿ ಯಾವುದೇ ಬಿರುಕಿಲ್ಲ ಎನ್ನುತ್ತಿದ್ದ ಅಧಿಕಾರಿಗಳು ಇದೀಗ ಕಲ್ಲು ಕುಸಿತದಿಂದ ಆತಂಕಗೊಂಡಿದ್ದಾರೆ.
ಇನ್ನು ರಾತ್ರಿ ಡ್ಯಾಂ ಬಳಿ ಮಳೆಗೆ ಕಲ್ಲು ಕುಸಿದಿರುವ ಸುದ್ದಿ ತಿಳಿದು ನೀರಾವರಿ ನಿಗಮದ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡ್ಯಾಂ ಕೆಳಗಿನ ರಸ್ತೆಯ ಕಲ್ಲುಗಳು ಕುಸಿದಿದ್ದು, ಡ್ಯಾಂಗೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಕುಸಿದಿರುವ ಕಲ್ಲುಗಳನ್ನು ಮತ್ತೆ ಯಥಾಸ್ಥಿತಿಯಲ್ಲಿ ದುರಸ್ಥಿ ಕಾಮಗಾರಿಗೆ ಮುಂದಾಗಿದ್ದಾರೆ.
ಒಟ್ಟಾರೆ ಇದೇ ಮೊದಲ ಬಾರಿಗೆ ಡ್ಯಾಂ ನಲ್ಲಿ ಇಷ್ಟೊಂದು ಕಲ್ಲು ಕುಸಿದ ಪ್ರಕರಣ ನಡೆದಿರಲಿಲ್ಲ. ಇದೀಗ ಕಲ್ಲು ಕುಸಿದಿರುವುದರಿಂದ ಆತಂಕ ಸೃಷ್ಟಿ ಮಾಡಿರುವುದು ಸುಳ್ಳಲ್ಲ.