ಮಂಗಳೂರು: ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಅವರ ಪಾರ್ಥಿವ ಶರೀರದ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿರುವುದನ್ನು ಹಾಗೂ ಘಟನೆಯ ಬಳಿಕ ಹಿಂದೂ ಸಂಘಟನೆಯ ಕಾರ್ಯಕರ್ತರನ್ನೇ ಗುರಿಯಾಗಿಸಿ ಬಂಧನ ಮಾಡಿರುವುದನ್ನು ಬಿಜೆಪಿ ದ.ಕ. ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕ್ಯಾ| ಬ್ರಿಜೇಶ್ ಚೌಟ ಹಾಗೂ ಕಿಶೋರ್ ರೈ ಅವರು ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮೆರವಣಿಗೆಯಲ್ಲಿ ಸಾವಿರಾರು ಸಾರ್ವಜನಿಕರು ಸ್ವ ಇಚ್ಚೆಯಿಂದ ಭಾಗವಹಿಸಿದ್ದರು. ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ ಶವಯಾತ್ರೆಯ ಮೇಲೆ ಕೂಡ ಸೇಡು ತೀರಿಸುವ ಮತಾಂಧತೆಯನ್ನು ತೋರಿಸಲಾಗಿದೆ ಎಂದರು.
ಡಾ | ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಭದ್ರತೆ ಒದಗಿಸಲು ಆಗ್ರಹ ಎಸ್‌ಡಿಪಿಐ ಮುಖಂಡ ಅಶ್ರಫ್ ಕೊಲೆಯಾದ ನಂತರ ಮಂಗಳೂರು ಮುಸ್ಲಿಂಸ್ ಅನ್ನುವ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿರುವ ಸದಸ್ಯ ತನ್ನ ಖಾತೆಯಲ್ಲಿ ಬರೆದಂತೆ ಆರ್‌ಎಸ್‌ಎಸ್‌ನ ಶರತ್‌ನ ಕೊಲೆಯಾಗಿದೆ. ಆರ್‌ಎಸ್‌ಎಸ್ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಕೊಲೆ ಮಾಡುವ ಬಗ್ಗೆ ಬರೆಯಲಾಗಿದೆ. ಹೀಗಾಗಿ ಜಿಲ್ಲಾಡಳಿತ ಡಾ| ಪ್ರಭಾಕರ ಭಟ್ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಬಿಜೆಪಿ ಆಗ್ರಹಿಸುತ್ತದೆ ಎಂದರು.
ಮಂಗಳೂರು ಮುಸ್ಲಿಂಸ್ ಫೇಸ್ ವಿರುದ್ಧ ಕ್ರಮ ಕೈಗೊಳ್ಳಿ: “ಮಂಗಳೂರು ಮುಸ್ಲಿಂಸ್’ ಫೇಸ್‌ಬುಕ್ ಸದಸ್ಯನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎಸ್‌ಡಿಪಿಐ, ಪಿಎಫ್ಐ, ಹಾಗೂ ಕೆಎಫ್ಡಿ ಸಂಘಟನೆಗಳಿಗೆ ನಿಷೇಧ ಹೇರಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರ್, ಕಾರ್ಯದರ್ಶಿ ನಮಿತಾ ಶ್ಯಾಂ, ಖಚಾಂಚಿ ಸಂಜಯ ಪ್ರಭು,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ,ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ರವಿಚಂದ್ರ , ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು, ಮಂ.ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಭಾಸ್ಕರಚಂದ್ರ ಶೆಟ್ಟಿ, ಗೋಸಂರಕ್ಷಣಾ ಪ್ರಕೋಷ್ಠದ ವಿನಯ ಎಲ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.