ಮುಳಬಾಗಿಲು: ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಲ್ಯಾಂಕೋ ಕಂಪನಿ ನಡೆಸಿದ ಕಲ್ಲು ಗಣಿಗಾರಿಕೆ ಕ್ವಾರಿ ಮೃತ್ಯು ಕೂಪವಾಗಿ ಪರಿಣಮಿಸಿದ್ದು, ಶೀಘ್ರವಾಗಿ ಕಬ್ಬಿಣದ ಬೇಲಿ ಹಾಕಲು ಜಿಲ್ಲಾಧಿಕಾರಿಗಳು ಆದೇಶಿಸಿ ಕೆಲವು ತಿಂಗಳು ಕಳೆದರೂ,ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಕೂಗು ವ್ಯಾಪಕವಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ತಾಲೂಕಿನ ಆವಣಿ ಹೋಬಳಿ ದೇವರಾಯಸಮುದ್ರ ಗ್ರಾಪಂ ಕೇಂದ್ರ ಸ್ಥಾನದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿ ಸೌಕರ್ಯಗಳಿಂದ ವಂಚಿತಗೊಂಡಿರುವ 80 ದಲಿತ ಕುಟುಂಬಗಳು ವಾಸವಾಗಿರುವ ತಗ್ಗು ಪ್ರದೇಶವೇ ತಟ್ಟನಗುಂಟೆ, ಸುಮಾರು 2 ಸಾವಿರ ಎಕರೆ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಗ್ರಾಮದ ಸರಹದ್ದಿನಲ್ಲಿ ಕಲ್ಲುಬಂಡೆ, ಬೆಟ್ಟ, ಅರಣ್ಯ ಸೇರಿದಂತೆ ಬಹುತೇಕ ಸ್ವಾಭಾವಿಕ ಸಂಪನ್ಮೂಲಗಳು ಸಮೃದ್ಧಿಯಾಗಿವೆ.
ರೈತರಿಂದ ಗುತ್ತಿಗೆ ಪಡೆದ ಜಮೀನು: 2008ರಲ್ಲಿ ಅದೇ ಗ್ರಾಮಕ್ಕೆ ಚತುಷ್ಪಥ ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ ಬಂದ ಲ್ಯಾಂಕೋ ಕಂಪನಿಯು ದಲಿತ ಮಹಿಳೆ ಪಾಪಮ್ಮ ಎಂಬುವರಿಂದ ಸ.ನಂ.199ರ ಪೈಕಿ ಮೂರು ಎಕರೆ, ಗುಂಡಪ್ಪ ಎಂಬಾತನಿಂದ 2.17 ಎಕರೆ ಹಾಗೂ ಆಕೆಯ ಮಗಳಾದ ರತ್ನಮ್ಮಳ ಸ.ನಂ718 ರ ಪೈಕಿ 3 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದುಕೊಂಡಿದ್ದರು. ವರ್ಷಕ್ಕೆ 75 ಸಾವಿರ ಪರಿಹಾರ ನೀಡುವುದಾಗಿ ಪತ್ರ ಬರೆಸಿಕೊಂಡು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ಸಹಕಾರದೊಂದಿಗೆ ದೇವರಾಯಸಮುದ್ರ ಗ್ರಾಪಂ ನಿಂದ ಪರವಾನಗಿ ಪಡೆದುಕೊಂಡು, ಜಮೀನುಗಳಲ್ಲಿನ ಕ್ವಾರಿಯಲ್ಲಿ ಬಂಡೆ ಸ್ಫೋಟಿಸಿ ಅದನ್ನು ಕ್ರಷರ್‌ಗೆ ಹಾಕಿ ಕಲ್ಲಿನ ಪುಡಿಯನ್ನು ರಸ್ತೆ ಕಾಮಗಾರಿಗೆ ಬಳಸಿದ್ದಾರೆ.
7-8 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಹೊಂಡ: ಲ್ಯಾಂಕೋ ಕಂಪನಿಯು ಕಲ್ಲು ಪುಡಿ ತಯಾರಿಕೆಗಾಗಿ ಮಾಡಿಕೊಂಡಿದ್ದ ನೂರಾರು ಅಡಿಗಳ ಆಳದ ಬೃಹತ್ ಕ್ವಾರಿಯಲ್ಲಿ ಕಲ್ಲು ತೆಗೆದ ನಂತರ ಅದನ್ನು ಮಣ್ಣಿನಿಂದ ಮುಚ್ಚುವುದಾಗಿ ತಿಳಿಸಿದ್ದರು. ಆದರೆ, ಕಂಪನಿಯು ತಮ್ಮ ಕೆಲಸ ಮುಗಿಸಿಕೊಂಡ ನಂತರ ಜಮೀನಿನ ಮಾಲೀಕರಿಗೆ ಕೊಟ್ಟ ಮಾತು ಮರೆತು ಕೃಷಿ ಜಮೀನು ಹಾಳು ಮಾಡಿದ್ದಾರೆ. ಅಲ್ಲದೇ 7-8 ಎಕರೆ ಜಮೀನಿನಲ್ಲಿ ಉಂಟಾಗಿರುವ ಬೃಹತ್ ಹೊಂಡದಲ್ಲಿ ಮಳೆಗಾಲ ಸಮಯದಲ್ಲಿ ನೀರು ನಿಂತು ನೂರಾರು ಅಡಿಗಳ ಆಳದ ಸಣ್ಣ ಕೆರೆಯೆಂತೆ ನಿರ್ಮಾಣವಾಗಿದೆ. ಹೊಂಡದ ಸಮೀಪದಲ್ಲಿಯೇ ಇತರೇ ಕೃಷಿ ಜಮೀನುಗಳು, ಅರಣ್ಯ, ಬಂಡೆಗಳಿರುವುದರಿಂದ ಈ ಮಾರ್ಗವಾಗಿ ಜನರು ಸಂಚರಿಸುವಾಗ ಆಯ ತಪ್ಪಿ ಹಳ್ಳಕ್ಕೆ ಬಿದ್ದರೆ ಪ್ರಾಣ ಹಾನಿಯಾಗುವುದಂತೂ ಖಚಿತ. ಹೊಂಡದಲ್ಲಿ ಕೆಲ ವರ್ಷಗಳ ಹಿಂದೆ ಮಹಿಳೆಯೊಬ್ಬರು ಬಿದ್ದು ತೀವ್ರವಾಗಿ ಗಾಯಗೊಂಡಿದ್ದಲ್ಲದೇ, 10-15 ಕುರಿಗಳು ಬಿದ್ದು ಸಾವನ್ನಪ್ಪಿವೆ. ಇದರ ನಡುವೆಯೇ ಇತ್ತೀಚಿನ ವರ್ಷಗಳಲ್ಲಿ ಲ್ಯಾಂಕೋ ಕಂಪನಿಯು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹ ಕಾರ್ಯಕ್ಕೆ ತಿಲಾಂಜಲಿ ಹಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಶಕ್ಕೆ ಬಿಟ್ಟು ಹೋಗಿದ್ದಾರೆ.
ಜಿಲ್ಲಾಡಳಿತ ಇತ್ತ ಗಮನ ಹರಿಸಲಿ: ಹೆದ್ದಾರಿ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಮಾಡಿರುವ ಬೃಹತ್ ಹೊಂಡವನ್ನು ಲ್ಯಾಂಕೋ ಕಂಪನಿಯಾಗಲೀ ಅಥವಾ ಜಿಲ್ಲಾಡಳಿತವಾಗಲೀ ಮುಚ್ಚುವ ಕಾರ್ಯಕ್ಕೆ ಮುಂದಾಗಿಲ್ಲ. ಕಲ್ಲಿನ ಕ್ವಾರಿಗೆ ಜನವರಿ ತಿಂಗಳಿನಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಕಬ್ಬಿಣದ ಬೇಲಿ ಹಾಕಲು ಆದೇಶಿಸಿದ್ದರೂ, ಸ್ಥಳೀಯ ಅಧಿಕಾರಿಗಳು ಮಾತ್ರ ಕೆಲವು ತಿಂಗಳು ಕಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ರೀತಿ ಬಿಟ್ಟರೆ ಮುಂದೊಂದು ದಿನ ಮತ್ತಷ್ಟು ಪ್ರಾಣಹಾನಿಯಾಗುವ ಸಂಭವವಿರುವುದರಿಂದ ಜಿಲ್ಲಾಡಳಿತ ಇತ್ತ ಕಡೆ ಗಮನಹರಿಸಬೇಕಾಗಿದೆ.
ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಲ್ಯಾಂಕೋ ಕಂಪನಿಯು ಕೊರೆದಿರುವ ಕಲ್ಲಿನ ಕ್ವಾರಿಯ ಬೃಹತ್ ಹೊಂಡದಿಂದ ಮೃತ್ಯುಕೂಪವಾಗಿ ಪರಿಣಮಿಸಿರುವುದರಿಂದ ಸದರೀ ಹೊಂಡಕ್ಕೆ ತುರ್ತಾಗಿ ಕಬ್ಬಿಣದ ಬೇಲಿ ಹಾಕಬೇಕು.
– ಕೀಲುಹೊಳಲಿ ಸತೀಶ್, ಪರಶುರಾಮ್‌ಸೇನೆ ಸಂಸ್ಥಾಪಕ
ಅಧಿಕಾರಿಗಳೊಂದಿಗೆ ಚರ್ಚಿಸಿ ಲ್ಯಾಂಕೋ ಕಂಪನಿಯು ಹೆದ್ದಾರಿ ನಿರ್ಮಾಣಕ್ಕಾಗಿ ಕೊರೆಸಿರುವ ಕಲ್ಲಿನ ಕ್ವಾರಿಯ ಬೃಹತ್ ಹೊಂಡದ ಸುತ್ತ ಕಬ್ಬಿಣದ ಬೇಲಿ ಹಾಕಲು ಕ್ರಮ ತೆಗೆದುಕೊಳ್ಳಲಾಗುವುದು.
– ವೈ.ರವಿ, ತಹಶೀಲ್ದಾರ್
-ಎಂ.ನಾಗರಾಜಯ್ಯ