ಕಾರವಾರ: ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಕಾರವಾರ ಸಮೀಪದ ಹೆದ್ದಾರಿ ಪಕ್ಕದ ಜಿ.ಕೆ. ರಾಮ್ ಕಲ್ಲು ಕ್ವಾರಿ ಕ್ರಶರ್‌ನ್ನು ಕಂದಾಯ ಅಧಿಕಾರಿಗಳು ಶನಿವಾರ ವೀಕ್ಷಿಸಿದ್ದು, ಲೀಜ್‌ಗೆ ಸಂಬಂಧಿಸಿದ ದಾಖಲೆಗಳನ್ನು ಅರಣ್ಯ ಇಲಾಖೆ ಈತನಕ ಜಿಲ್ಲಾಧಿಕಾರಿಗಳಿಗಾಗಲಿ, ಸಹಾಯಕ ಕಮಿಷನರ್ ಕಚೇರಿಗಾಗಲಿ ತಲುಪಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ರಾಹೆ 66ನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಆರಂಭವಾದ ನಂತರ ಕ್ರಶರ್ ಇರುವ ಸ್ಥಳದ ಪ್ರಕರಣ ಹಲವು ದಿನಗಳಿಂದ ಕ್ರಶರ್ ಮಾಲಿಕರ ಹಾಗೂ ರಾಹೆ ಅಧಿಕಾರಿಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಚತುಷ್ಟಥ ಹೆದ್ದಾರಿ ಹಾದು ಹೋಗುವ ಒಂದು ಬದಿಗೆ ಐಎನ್‌ಎಸ್ ಕದಂಬ ನೌಕಾನೆಲೆ, ಇನ್ನೊಂದು ಬದಿಗೆ ಕಲ್ಲು ಕ್ವಾರಿ ಕ್ರಶರ್ ಇದೆ. ಹೆದ್ದಾರಿ ವಿಸ್ತರಣೆಗೆ ಅನಿವಾರ್ಯವಾಗಿ ಕ್ವಾರಿ ಕ್ರಶರ್ ಯುನಿಟ್ ತೆರವುಗೊಳಿಸಲು ಈ ಹಿಂದೆಯೇ ಅಧಿಕಾರಿಗಳು ಮುಂದಾದಾಗ ಕ್ವಾರಿ ಕ್ರಶರ್ ಮಾಲಿಕರು ಕ್ವಾರಿ ಲೀಜ್ 2023 ರವರೆಗೆ ಇದೆ ಎಂದು ಹೇಳಿದ ಕಾರಣ ರಸ್ತೆ ಅಗಲೀಕರಣ ಕಾಮಗಾರಿ ತಡೆ ಹಿಡಿದಿದ್ದರು. ಜೊತೆಗೆ ರಾಜಕೀಯ ಒತ್ತಡಗಳು ಬರಲಾರಂಭಿಸಿದ ಮೇಲೆ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು.
ಕಲ್ಲು ಕ್ವಾರಿ ಕ್ರಶರ್ ಜಾಗ ಸ್ವಂತದ್ದು, ಕ್ರಶರ್ ಪಕ್ಕದಲ್ಲಿಯೇ ಬೇಕಾದಷ್ಟು ಅರಣ್ಯ ಇಲಾಖೆಯ ಜಾಗವಿದೆ. ಅಲ್ಲಿಂದ ರಸ್ತೆ ನಿರ್ಮಾಣ ಮಾಡಿ ಎಂಬುದು ಖಾಸಗಿ ಕ್ರಶರ್ ಮಾಲಿಕರ ವಾದವಾಗಿತ್ತು. ಕೊನೆಗೆ ಕೆಲ ಒತ್ತಡಗಳಿಗೆ ಮಣಿದ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಖಾಸಗಿ ಕಂಪನಿಯವರು ಕ್ರಶರ್ ಪಕ್ಕದಲ್ಲಿಯೇ ರಸ್ತೆ ನಿರ್ಮಾಣ ಮಾಡಲು ಮುಂದಾದರು. ಆಗ ನಕ್ಷೆಯಲ್ಲಿರುವ ಮಾರ್ಗದಿಂದ ರಸ್ತೆ ನಿರ್ಮಾಣ ಮಾಡದೇ, ಪಕ್ಕದ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸುವುದು ಹೆಚ್ಚುವರಿ ಹಣಕಾಸಿನ ಹೊರೆ ಎಂಬ ಅರಿವು ಐಆರ್‌ಬಿಗೆ ಬರುತ್ತಿದ್ದಂತೆ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನ ಸೆಳೆದರು. ಈ ಸಂಗತಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಎನ್‌ಎಚ್ಎ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂತು.
ಈ ಎಲ್ಲದರ ನಡುವೆ ರಾಹೆ ಪ್ರಾಧಿಕಾರ ಸರ್ಕಾರಕ್ಕೆ ಪತ್ರವೊಂದನ್ನು ಬರೆದು ಒಂದೆಡೆ ನೌಕಾನೆಲೆ ಇನ್ನೊಂದೆಡೆ ಅರಣ್ಯ ಇಲಾಖೆ ಜಾಗವಿರುವುದರಿಂದ ರಸ್ತೆ ವಿಸ್ತರಣೆಗೆ ತೊಂದರೆಯಾಗುತ್ತಿದೆ. ರಕ್ಷಣಾ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರವಾನಗಿ ಪಡೆಯುವುದು ಕಷ್ಟಸಾಧ್ಯವೆಂದು ತಿಳಿಸಿದ್ದರು. ಕಗ್ಗಾಂಟಾಗಿಯೇ ಉಳಿದಿದ್ದ ಈ ಹೆದ್ದಾರಿ ಅಗಲೀಕರಣ ವಿಚಾರ ರಾಜ್ಯದ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಚರ್ಚೆಯಾಗಿತ್ತು.
Advertisement
ಅರಣ್ಯ ಇಲಾಖೆಯದು ಎನ್ನಲಾದ ಜಾಗೆಯ ಸರ್ವೆ ನಂಬರ್‌ನಲ್ಲಿ ಸ್ವಲ್ಪ ಭಾಗ ಕ್ವಾರಿಗೆ ನೀಡಲಾಗಿದೆ ಎನ್ನಲಾಗುತ್ತಿದೆ. ಕ್ರಶರ್ ಲೀಜ್ ಅವಧಿ ಮುಗಿದಿದೆ. ಆದರೆ ಕ್ವಾರಿ ಲೀಜ್ ಮುಂದುವರಿದಿದೆ. ಅಲ್ಲದೇ ಕ್ವಾರಿಗೆ ತೆರಳುವ ರಸ್ತೆಯ ಭೂಮಿ ಸಹ ಲೀಜ್ ಮೇಲೆ ಖಾಸಗಿ ಸಂಸ್ಥೆ ಹೆಸರಿಗೆ ಇದೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಅರಣ್ಯ ನೀಡಬೇಕಾಗಿದೆ.
Related Articles
Advertisement
ಚತುಷ್ಪಥ ಹೆದ್ದಾರಿ ನಿರ್ಮಾಣ ವಿಳಂಬಕ್ಕೆ ಕೊನೆ ಹಾಡಲು ಮುಂದಾದ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹೆದ್ದಾರಿ ನಿರ್ಮಾಣಕ್ಕೆ ಅಡ್ಡಿಯಾಗಿರುವ ಖಾಸಗಿ ಕ್ರಶರ್‌ನ್ನು ತೆರವುಗೊಳಿಸುವಂತೆ ಏ.12 ರಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಅಭಿಜಿನ್ ಸ್ಥಳ ಭೇಟಿ ಮಾಡಿದರು. ಆಗ ಮುಚ್ಚಿಯೇ ಹೋಗಿದ್ದ ಅನೇಕ ಸಂಗತಿಗಳು ಬೆಳಕಿಗೆ ಬಂದಿವೆ.
ವಾಸ್ತವ ಸಂಗತಿ ಏನು:
ಅರಣ್ಯ ಇಲಾಖೆ ಡಿಸಿಎಫ್ ಸ್ಕೆಚ್ ಒಂದರಲ್ಲಿ ಕ್ವಾರಿ ಮತ್ತು ಕ್ರಶರ್ ಇರುವ ಜಾಗದಲ್ಲಿ ರಾ.ಹೆ. ಹಾದುಹೋಗುವಂತೆ ರಾ.ಹೆ. ಪ್ರಾಧಿಕಾರಕ್ಕೆ ಮಾರ್ಗ ಸೂಚಿಸಲಾಗಿತ್ತು. ಇದಕ್ಕೆ ಕೇಂದ್ರ ಪರಿಸರ ಅರಣ್ಯ ಮಂತ್ರಾಲಯದ ಅನುಮತಿ ಸಹ ಸಿಕ್ಕಿದೆ. ಗೊಂದಲ ಇರುವುದೆಂದರೆ 2013 ರಲ್ಲಿ ಅಂದಿನ ಡಿಸಿಎಫ್ ಮತ್ತು ಎಸಿಎಫ್ ಖಾಸಗಿ ಕ್ವಾರಿಗೆ ಸಾಗುವ ರಸ್ತೆ ಮಾರ್ಗದ ಭೂಮಿಯ ಲೀಜ್‌ನ್ನು ಸಹ ಮುಂದುವರಿಸಿದ್ದಾರೆ. ಕ್ವಾರಿಗೆ ಕೇಂದ್ರ ಅರಣ್ಯ ಪರಿಸರ ಮಂತ್ರಾಲಯದ ಅನುಮತಿ ಸಹ ಇದೆ ಎನ್ನಲಾಗಿದೆ. ಕ್ರಶರ್ ಲೀಜ್ ಅವಧಿ ನವೀಕರಣವಾಗಿಲ್ಲ. ಆದರೆ ಕ್ವಾರಿಗೆ ಸಾಗುವ ರಸ್ತೆಯಲ್ಲೇ ಹೆದ್ದಾರಿ ಚತುಷ್ಪಥ ಅಗಲೀರಣವಾಗಬೇಕಿದೆ. ಶೀತಲ ಸಮರ ಇರುವುದು ಅರಣ್ಯ ಇಲಾಖೆ ಮತ್ತು ಎನ್‌ಎಚ್ಎ ಮಧ್ಯೆ. ಕ್ವಾರಿ ಮಾಲೀಕರ ಹಿತ ಕಾಯಯಲು ಹೋದ ಅರಣ್ಯಾಧಿಕಾರಿಗಳು ಈಗ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಡಿಸಿಎಫ್ ನೀಡಿದ ರಸ್ತೆ ಅಗಲೀಕರಣದ ಸ್ಕೆಚ್-2 ರಸ್ತೆ ನಿರ್ಮಾಣದ ಸಂಸ್ಥೆಗೆ ವೆಚ್ಚದಾಯಕ ಆಗಿರುವ ಕಾರಣ ಹಾಗೂ ರಸ್ತೆಯ ಅಲೈನ್‌ಮೆಂಟ್ ವಾಹನಗಳ 80 ಕಿ.ಮೀ. ವೇಗಕ್ಕೆ ಸಹಕಾರಿಯಾಗುವುದಿಲ್ಲ ಎನ್ನುವ ಕಾರಣಕ್ಕೆ ಎನ್‌ಎಚ್ಎ ಕೈಬಿಟ್ಟಿದೆ. ಡಿಸಿಎಫ್ ಅವರು ಮೊದಲು ನೀಡಿದ ರಸ್ತೆ ಅಲೈನ್‌ಮೆಂಟ್ ಸ್ಕೆಚ್ -1ಕ್ಕೆ ಸಹಮತಿ ವ್ಯಕ್ತಪಡಿಸಿದೆ. ಸ್ಕೆಚ್ -1ಕ್ಕೆ ಕೇಂದ್ರ ಅರಣ್ಯ ಪರಿಸರ ಮಂತ್ರಾಲಾಯ ಅನುಮತಿ ನೀಡಿದ್ದು, ನಿಯೋಜಿತ ರಸ್ತೆ ಮಾರ್ಗದ ಅರಣ್ಯ ಭೂಮಿ ಎನ್‌ಎಚ್ಎಗೆ ಹಸ್ತಾಂತರ ಸಹ ಆಗಿದೆ. ವಾಸ್ತವವಾಗಿ ಅರಣ್ಯ ಇಲಾಖೆ ಮತ್ತು ಎನ್‌ಎಚ್ಎ ಸರ್ಕಾರದ ಅಧಿಧೀನ ಸಂಸ್ಥೆಗಳು. ಕ್ವಾರಿ ತೆರವಿಗೆ ಮಾತ್ರ ಜಿಲ್ಲಾಡಳಿತ ನೆರವು ಕೇಳುತ್ತಿರುವುದು ಹಾಸ್ಯಾಸ್ಪದ ಎಂದು ಹೆಸರು ಹೇಳಲು ಇಚ್ಛಿಸಿದ ಅಧಿಕಾರಿಗಳು ಹೇಳುವ ಸತ್ಯ ಸಂಗತಿ. ಹೆದ್ದಾರಿ ಅಗಲೀಕರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಅಂಗಳದಲ್ಲಿ ಚೆಂಡು ಬಿದ್ದಿದೆ. ಅವರು ಏನು ಮಾಡುತ್ತಾರೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಕಾದು ನೋಡುವಂತಾಗಿದೆ.