Advertisement

ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್‌ ರೈಲುಗಳಿಗೆ ಕಲ್ಲು ತೂರಾಟ!

12:16 PM May 29, 2022 | Team Udayavani |

ಮುಂಬಯಿ: ಸೆಂಟ್ರಲ್‌ ರೈಲ್ವೇಯ ಎಸಿ ಲೋಕಲ್‌ ರೈಲುಗಳಿಗೆ ಕೆಲ ಕಿಡಿಗೇಡಿಗಳು ಕಲ್ಲುಗಳನ್ನು ಎಸೆದು ಕಿಟಕಿಗಳಿಗೆ ಹಾನಿ ಮಾಡುವ ನಿದರ್ಶನಗಳು ಹೆಚ್ಚಿರುವ ಸ್ಥಳಗಳಲ್ಲಿ ಸೆಂಟ್ರಲ್‌ ರೈಲ್ವೇ ಅಧಿಕಾರಿಗಳು ಇಂತವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ರೈಲ್ವೇ ರಕ್ಷಣಾ ಪಡೆಗೆ ಮನವಿ ಮಾಡಿದ್ದಾರೆ.

Advertisement

ಪಶ್ಚಿಮ ರೈಲ್ವೇ ವಿಭಾಗದಂತೆ ಸೆಂಟ್ರಲ್‌ ರೈಲ್ವೇ ಕೂಡಾ ಎಸಿ ರೈಲುಗಳನ್ನು ಓಡಿಸುತ್ತಿದ್ದು ಪ್ರಯಾಣಿಕರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧ್ಯೆ ಚಲಿಸುತ್ತಿರುವ ಹವಾನಿ ಯಂತ್ರಿತ ರೈಲುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟಗೈಯುತ್ತಿರುವ ಪ್ರಕರಣಗಳು ಅಧಿಕಗೊಳ್ಳುತ್ತಿರುವುದರಿಂದ ರೈಲಿನ ಕಿಟಕಿಗಳ ಹಾನಿಯನ್ನು ತಡೆಯಲು ಮತ್ತು ಪ್ರಯಾಣಿಕರಿಗೆ ಭದ್ರತೆಯನ್ನು ಹೆಚ್ಚಿಸಲು ರೈಲ್ವೇ ಅಧಿಕಾರಿಗಳು ರೈಲ್ವೇ ರಕ್ಷಣಾ ಪಡೆಯ ಮೊರೆ ಹೋಗಿದ್ದಾರೆ.

ಗುಡಿಸಲು ವಾಸಿಗಳಿಗೆ ಎಚ್ಚರಿಕೆ :

ಪ್ರಸ್ತುತ ಹಾರ್ಬರ್‌ ವಿಭಾಗದಲ್ಲಿ ಹಳಿಗಳ ಉದ್ದಕ್ಕೂ ಇರುವ ಗುಡಿಸಲು ವಾಸಿಗಳಿಗೆ ಇದರ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಹಾರ್ಬರ್‌ ವಿಭಾಗದಲ್ಲಿ ಓಡುತ್ತಿದ್ದ ಹವಾನಿಯಂತ್ರಿತ ರೈಲುಗಳನ್ನು ಕೇಂದ್ರ ರೈಲ್ವೇ ಅಧಿ ಕಾರಿಗಳು ಸ್ಥಗಿತಗೊಳಿಸಿ ಅವುಗಳನ್ನು ಮುಖ್ಯ ಮಧ್ಯ ರೈಲ್ವೇಗೆ ಸ್ಥಳಾಂತರಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌-ಕಲ್ಯಾಣ್‌ ಮಾರ್ಗದಲ್ಲಿರುವ ಅಕ್ರಮ ಗುಡಿಸಲುಗಳನ್ನು ಗುರುತಿಸುವುದಲ್ಲದೆ, ಅಲ್ಲಿನ ನಿವಾಸಿಗಳತ್ತ ಗಮನವನ್ನು ಕೇಂದ್ರೀಕರಿಸಲು ಆರ್‌ಪಿಎಫ್‌ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಪ್ರದೇಶಗಳಲ್ಲಿ ಅಧಿಕ ಪ್ರಕರಣ

Advertisement

ಮಧ್ಯ ರೈಲ್ವೇಯ ಕುರ್ಲಾ, ಸಯಾನ್‌, ಘಾಟ್ಕೊàಪರ್‌, ಥಾಣೆ, ಕಲ್ವಾ ಮತ್ತು ಮುಂಬ್ರಾ ಗಳಲ್ಲಿ ರೈಲು ಮಾರ್ಗಗಳ ಉದ್ದಕ್ಕೂ ಅಕ್ರಮ ಗುಡಿಸಲುಗಳಿವೆ. ಈ ಗುಡಿಸಲುಗಳಲ್ಲಿ ವಾಸಿಸು ವವರು ಎಸಿ ಸ್ಥಳೀಯ ರೈಲುಗಳ ಮೇಲೆ ಕಲ್ಲು ಗಳನ್ನು ಎಸೆಯುತ್ತಿದ್ದು, ಅದು ಕಿಟಕಿಗಳನ್ನು ಹಾನಿಗೊಳಿಸುತ್ತಿದೆ. ಹಾರ್ಬರ್‌ ವಿಭಾಗದಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಚೆಂಬೂರು, ವಡಾಲ, ಗೋವಂಡಿ ಮತ್ತು ಪನ್ವೇಲ್‌ನಲ್ಲಿ ಕಂಡು ಬರುತ್ತಿದೆ. ಈ ಭಾಗದಲ್ಲಿ ಪ್ರಯಾಣಿಕರ ಕಳಪೆ ಪ್ರತಿಕ್ರಿಯೆಯಿಂದಾಗಿ ಛತ್ರಪತಿ ಶಿವಾಜಿ ಟರ್ಮಿನಸ್‌-ಪನ್ವೆಲ್‌ ಮಾರ್ಗದಲ್ಲಿ ಹವಾನಿಯಂತ್ರಿತ ಸ್ಥಳೀಯ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

23 ಎಸಿ ರೈಲುಗಳ ಕಿಟಕಿಗಳಿಗೆ ಹಾನಿ :

ಜನವರಿಯಿಂದ ಇಲ್ಲಿಯವರೆಗೆ 23 ಹವಾನಿಯಂತ್ರಿತ ರೈಲುಗಳ ಕಿಟಕಿಗಳು ಕಲ್ಲು ತೂರಾಟದಿಂದ ಹಾನಿಗೊಳಗಾಗಿವೆ. ಇದರಿಂದ ದುರಸ್ತಿಗಾಗಿ ಈಗಾಗಲೇ 2.30 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ. ಎಸಿ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವಾಗ ರೈಲುಗಳಿಗೆ ಹಾನಿ ಮಾಡುವ ಪ್ರಯತ್ನಗಳು ಹೆಚ್ಚಾಗುತ್ತಿರುವುದು ವಿಷಾಧನೀಯ. ಹಾಳಾದ ಕಿಟಕಿಯನ್ನು ಬದಲಿಸಿದ ನಂತರ ಹೊಸದನ್ನು ಮರುಸ್ಥಾಪಿಸಲು 10,000 ರೂ. ಗಳು ಬೇಕಾಗುತ್ತದೆ. ರೈಲನ್ನು ರಿಪೇರಿಗಾಗಿ ಕಾರ್‌ ಶೆಡ್‌ಗೆ ಕೊಂಡೊಯ್ಯಲಾಗುತ್ತದೆ. ಇದು ಕೆಲವೊಮ್ಮೆ ಸಾಮಾನ್ಯ ದಿನದಲ್ಲಿ ಕಡಿಮೆ ಹವಾನಿಯಂತ್ರಿತ ರೈಲು ಸೇವೆಗಳ ಲಭ್ಯತೆಗೆ ಕಾರಣವಾಗುತ್ತದೆ. ಪ್ರಸ್ತುತ 5 ಎಸಿ ರೈಲುಗಳಿದ್ದು, ಇದರಲ್ಲಿ 4 ರೈಲುಗಳು ಪ್ರತಿದಿನ 56 ಸೇವೆಗಳನ್ನು ನಡೆಸುತ್ತಿವೆ. ಜೂನ್‌ ಅಥವಾ ಜುಲೈನಲ್ಲಿ ಎರಡು ಹೆಚ್ಚುವರಿ ಎಸಿ ರೈಲುಗಳನ್ನು ನಿರೀಕ್ಷಿಸಲಾಗಿದೆ.

 

ಮೋಜಿಗಾಗಿ ಕಲ್ಲು ತೂರಾಟ :

ಕಲ್ಲು ತೂರಾಟ ಮಾಡುವವರಲ್ಲಿ ಹೆಚ್ಚಿನವರು ಕುಡುಕರು ಅಥವಾ ಹತ್ತಿರದ ಸ್ಲಂಗಳಲ್ಲಿ ವಾಸಿಸುವ ಮಕ್ಕಳು ಸೇರಿದ್ದಾರೆ. ಆದರೆ ಕಲ್ಲು ತೂರಾಟದ ಹಿಂದೆ ಯಾವುದೇ ದುರುದ್ದೇಶ ಇರುವುದಿಲ್ಲ. ಎಸಿ ರೈಲುಗಳ ಗಾಜಿನ ಕಿಟಕಿಗಳ ಮೇಲೆ ಗುರಿ ಇಡುವುದನ್ನು ಮಕ್ಕಳು ಹೆಚ್ಚಾಗಿ ಆಟವಾಗಿ ತೆಗೆದುಕೊಳ್ಳುತ್ತಾರೆ ಎಂದು ಹಿರಿಯ ಆರ್‌ಪಿಎಫ್‌ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಮಕ್ಕಳ ಪೋಷಕರಿಗೆ ಸಲಹೆ ನೀಡಲಾಗುತ್ತಿದೆ. ಜತೆಗೆ ಸಂವೇದನಾ ಕಾರ್ಯಕ್ರಮದಡಿ, ರೈಲ್ವೇ ಹಳಿಗಳ ಸಮೀಪವಿರುವ ಶಾಲೆಗಳನ್ನು ಸಂಪರ್ಕಿಸಿ ಸಮಸ್ಯೆಯ ಬಗ್ಗೆ ತಿಳಿಸಲಾಗುತ್ತಿದೆ. ಸಮಾಲೋಚನೆ ಮತ್ತು ಜಾಗೃತಿ ಅಭಿಯಾನಗಳ ಹೊರತಾಗಿ ಅಪರಾಧಿಗಳ ವಿರುದ್ಧ ರೈಲ್ವೆ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ಸಹ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲು ತೂರಾಟದ ಘಟನೆಗಳು ನಡೆಯುತ್ತಿರುವ ಸ್ಥಳಗಳನ್ನು ಗುರುತಿಸಲು ಆರ್‌ಪಿಎಫ್‌ಗೆ ಮನವಿ ಮಾಡಲಾಗಿದೆ. ಅವರು ವಿದ್ವಂಸಕ ಕೃತ್ಯಗಳನ್ನು ಎಸಗುವವರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹವಾನಿಯಂತ್ರಿತ ಲೋಕಲ್‌ ರೈಲುಗಳನ್ನು ಸಾರ್ವಜನಿಕರ ಹಣವನ್ನು ಬಳಸಿ ಸಂಪಾದಿಸಲಾಗಿದೆ. ಎಸಿ ಸ್ಥಳೀಯ ರೈಲುಗಳ ಕಿಟಕಿಗಳಿಗೆ ಹಾನಿಯಾದಾಗ ಸಾರ್ವಜನಿಕ ಆಸ್ತಿಗೆ ಹಾನಿಯಾದಂತೆ. ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡದಂತೆ ಜನರನ್ನು ಒತ್ತಾಯಿಸುತ್ತೇನೆ.  ಶಲಭ್‌ ಗೋಯಲ್‌  ವ್ಯವಸ್ಥಾಪಕರು, ಮುಂಬಯಿ  ಕೇಂದ್ರ ರೈಲ್ವೇ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next