Advertisement

Chittapur: ಮೊಹರಂ ಮೆರವಣಿಗೆ ವೇಳೆ ಕಲ್ಲು ತೂರಾಟ: ಹತ್ತು ಜನ ಆಸ್ಪತ್ರೆಗೆ ದಾಖಲು

09:36 AM Jul 30, 2023 | Team Udayavani |

ವಾಡಿ: ಮೊಹರಂ ಹಬ್ಬದ ಅಲಾಯಿ ಪೀರಗಳ ಮೆರವಣಿಗೆ ವೇಳೆ ಎರಡು ಕುಟುಂಬಗಳ ಮಧ್ಯೆ ಜಗಳ ಸಂಭವಿಸಿದ್ದು, ಕಲ್ಲು ತೂರಾಟ ಹಾಗೂ ಬಡಗಿಗಳಿಂದ ಹೊಡೆದಾಟ ನಡೆದು ಹತ್ತಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾದ ಘಟನೆ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಸಂಭವಿಸಿದೆ.

Advertisement

ಶನಿವಾರ ಸಂಜೆ ಇಂಗಳಗಿ ಗ್ರಾಮದಲ್ಲಿ ಮೊಹರಂ ದೇವರುಗಳ ಮೆರವಣಿಗೆ ಶುರುವಾಗುತ್ತಿದ್ದಂತೆ ಗ್ರಾಮದ ಕುರುಬ ಸಮುದಾಯಕ್ಕೆ ಸೇರಿದ ಗೋಳ ಕುಟುಂಬ ಹಾಗೂ ಹನುಗುಂಟೆ ಕುಟುಂಬದ ಮಧ್ಯೆ ಹಳೆಯ ಜಗಳ ಭುಗಿಲೆದ್ದಿದೆ.

ಪರಸ್ಪರ ಮಾತಿನ ಚಕಮಕಿಗೆ ತಿರುಗಿದ ಹಳೆಯ ಜಗಳ ಮಾತಿನ ವಿಕೋಪಕ್ಕೆ ಏರಿ ಕೈ ಕೈ ಮಿಸಲಾಯಿಸುವ ಹಂತಕ್ಕೆ ತಲುಪಿದೆ. ಪರಿಸ್ಥಿತಿ ಕೈ ಮೀರಿ ಪರಸ್ಪರ ಕಲ್ಲು ತೂರಾಟಕ್ಕೆ ತೊಡಗಿರುವ ಎರಡು ಕುಟುಂಬಗಳ ಸದಸ್ಯರು ಹೊಡೆದಾಡಿದ್ದಾರೆ.

ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದೇ ಪರದಾಡಿದರು. ಮೊಹರಂ ಅಲೈ ಬೀರಗಳ ಮೆರವಣಿಗೆಯಲ್ಲಿ ಸೇರಿದ ಸಾವಿರಾರು ಜನ ದಿಕ್ಕೆಟ್ಟು ಓಡಿದ ಪ್ರಸಂಗ ನಡೆದಿದೆ.

Advertisement

ಸ್ಥಳಕ್ಕೆ ಆಗಮಿಸಿದ ಸಿಪಿಐ ಪ್ರಕಾಶನೂರ ಎರಡು ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆಯುವ ಮೂಲಕ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯಲ್ಲಿ ಎರಡು ಕುಟುಂಬದ ಸದಸ್ಯರಿಗೆ ರಕ್ತ-ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಕುಟುಂಬಗಳಿಂದ ಪರಸ್ಪರ ವಾಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸರು, ಈ ಘಟನೆ ಎರಡು ಕುಟುಂಬಗಳ ಹಳೆಯ ವೈಷ್ಯಮ್ಯದ ಜಗಳವಾಗಿದ್ದು, ಮೋಹರಂ ಹಬ್ಬಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next