Advertisement

ಕಲ್ಲು ಗಣಿಗಾರಿಕೆಯಿಂದ ಸರಕಾರಕ್ಕೆ 321ಕೋಟಿ ರಾಜಧನ ಬಾಕಿ : ಗಣಿ ಇಲಾಖೆ ಉಪನಿರ್ದೇಶಕಿ ಮಾಹಿತಿ

01:23 PM Jan 19, 2021 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಯಿಂದ ಸರ್ಕಾರಕ್ಕೆ ಸುಮಾರು 321 ಕೋಟಿ ರೂ. ರಾಜಧನ ಬರಬೇಕಾಗಿದ್ದು, ಬಾಕಿ ಉಳಿದಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪುಷ್ಪಾ ಮಾಹಿತಿ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದೆ ಸುಮಲತಾ ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. 2008ರಿಂದಲೂ ಸುಮಾರು 321 ಕೋಟಿ ರೂ. ರಾಜಧನ ಬಾಕಿ ಉಳಿದಿದೆ. ಅದನ್ನು ವಸೂಲಿ ಮಾಡಲು ಕ್ರಮ ವಹಿಸಲಾಗುತ್ತಿದೆ. ಗಣಿಗಾರಿಕೆ ಬಗ್ಗೆ ಡ್ರೋಣ್‌ ಸರ್ವೆ ಮಾಡಿ ವರದಿ ತಯಾರಿಸಿ
ನಂತರ ರಾಜಧನ ಪಾವತಿಸುವಂತೆ ನೋಟಿಸ್‌ ನೀಡಲಾಗಿದ್ದು, ವಸೂಲಿ ಮಾಡಲಾಗುತ್ತಿದೆ ಎಂದರು.

57 ಅಕ್ರಮ ಗಣಿಗಾರಿಕೆ: ಜಿಲ್ಲೆಯಲ್ಲಿ ಸುಮಾರು 57 ಅಕ್ರಮ ಗಣಿಗಾರಿಕೆಗಳು ನಡೆಯುತ್ತಿದ್ದು, ಕ್ರಮ ಕೈಗೊಂಡು ದಂಡ ಪಾವತಿಗೆ ನೋಟಿಸ್‌ ನೀಡಲಾಗಿದೆ. ಇದರ ಬಗ್ಗೆಯೂ ಸದ್ಯದಲ್ಲಿಯೇ ಡ್ರೋಣ್‌ ಸರ್ವೆ ನಡೆಸಲಾಗುತ್ತಿದ್ದು, ವರದಿ ತಯಾರಿಸಿ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಈಗಾಗಲೇ ಜಿಲ್ಲೆಯಾದ್ಯಂತ 88 ಗಣಿಗಾರಿಕೆಗೆ ಹಾಗೂ 59 ಕ್ರಷರ್‌ಗಳಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಕಲ್ಲು ಕಟ್ಟಿರುವ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಬಾವಿಯಲ್ಲಿ ಪತ್ತೆ; ಕೊಲೆ ಶಂಕೆ

ಬೇಬಿಬೆಟ್ಟದ ಗಣಿಗಾರಿಕೆ ವಿರುದ್ಧ ಕ್ರಮ:
ಪಾಂಡವಪುರದ ಬೇಬಿಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದೆ. ಆದರೂ ಕೆಲವರು ರಾತ್ರಿ ವೇಳೆ ನ್ಪೋಟಕ ಬಳಸಿ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ 500 ಲಾರಿ, 50 ಹಿಟಾಚಿ ಸೇರಿದಂತೆ ಗಣಿಗಾರಿಕೆಗೆ ಬಳಸಲಾಗುತ್ತಿದ್ದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಅಲ್ಲದೆ, ಗಣಿಗಾರಿಕೆ
ತಡೆಗೆ 70ಕ್ಕೂ ಹೆಚ್ಚು ಕಂದಕ ನಿರ್ಮಿಸಲಾಗಿದೆ. 2 ಕಡೆ ಚೆಕ್‌ಪೋಸ್ಟ್‌ ನಿರ್ಮಿಸಿ, ತಪಾಸಣೆ ನಡೆಸಲಾಗುತ್ತಿದೆ. ಪೊಲೀಸ್‌ ಇಲಾಖೆಯ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

Advertisement

ರಾಜಧನ ವಸೂಲಿಗೆ ನಿರ್ಣಯಕ್ಕೆ ಆಗ್ರಹ: ಪಾಂಡವಪುರದ ಹೊನಗಾನಹಳ್ಳಿ ಗ್ರಾಪಂ 22.57 ಕೋಟಿ, ಚಿನಕುರಳಿ ಗ್ರಾಪಂನ 6.52 ಕೋಟಿ ರೂ. ಸೇರಿದಂತೆ ಒಟ್ಟು 29 ಕೋಟಿ ರೂ. ರಾಜಧನ ಬಾಕಿ ಉಳಿದಿದೆ. ರಾಜಕೀಯ ಪ್ರಭಾವಕ್ಕೆ ಒಳಗಾಗಿರುವ ಅಧಿಕಾರಿಗಳು ವಸೂಲಿ ಮಾಡಲು ಮುಂದಾಗಿಲ್ಲ ಅನಿಸುತ್ತಿದೆ. ಆ ಹಣ ಏನಾಗಿದೆ ಎಂದು ಇಲ್ಲಿಯವರೆಗೂ ಗೊತ್ತಿಲ್ಲ. ಕೂಡಲೇ
ವಸೂಲಿ ಮಾಡುವಂತೆ ಸಂಸದೆ ಸುಮಲತಾ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುಷ್ಪಾ, ರಾಜಧನ ಸರ್ಕಾರಕ್ಕೆ ಪಾವತಿಸಬೇಕು. ಬಳಕೆ ಮಾಡಿ ಕೊಳ್ಳಲು ಅಧಿಕಾರವಿಲ್ಲ. ಆದ್ದರಿಂದ
ಗ್ರಾಪಂನಿಂದ ಭೂ ಕಂದಾಯ ರೂಪದಲ್ಲಿ ವಸೂಲಿ ಮಾಡಬೇಕು ಎಂದು ತಾಪಂ ಇಒ ಅವರಿಗೆ ಪತ್ರ ಬರೆಯಲಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ಇಒ, ಎರಡು ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, 2018ರವರೆಗೆ ಪಾವತಿಸಲಾಗಿದೆ. ನಂತರ ಪಾವತಿಸಿಲ್ಲ. ಮತ್ತೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಸೂಲಾತಿಗೆ ಕ್ರಮ ವಹಿಸಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ, ಕೂಡಲೇ ರಾಜಧನ ವಸೂಲಿಗೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ನಿಮ್ಮಗಳ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಎಚ್ಚರಿಸಿದರು. ಜಿಪಂ ಸಿಇಒ ಎಸ್‌.ಎಂ.ಜುಲ್‌ μಖಾರ್‌ ಉಲ್ಲಾ, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಸಮಿತಿ ಸದಸ್ಯ ಅಂಕರಾಜು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next