Advertisement

ಕಲ್ಲು ಗಣಿಗಾರಿಕೆ: ಕಾರ್ಮಿಕರ ಟೆಂಟ್‌ಗಳ ಮೇಲೆ ಕಲ್ಲುತೂರಾಟ

07:47 AM Mar 03, 2019 | |

ಚಿಂತಾಮಣಿ: ತಾಲೂಕಿನ ಮಡಬಳ್ಳಿ ಮತ್ತು ನೆರ್ನ್ನಕಲ್ಲು ಗ್ರಾಮಗಳ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ ಎಂದು ಮಡಬಳ್ಳಿ, ನೆರ್ನ್ನಕಲ್ಲು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಕಲ್ಲು ಗಣಿಗಾರಿಗೆ ಮಾಡುತ್ತಿದ್ದವರ ಟೆಂಟ್‌ಗಳ ಮೇಲೆ ಕಲ್ಲು ತೂರಿ ದಾಂಧಲೆ ನಡೆಸಿದ ಘಟನೆ ನಡೆದಿದೆ.

Advertisement

ಘಟನೆಯ ವಿವರ: ಹಲವು ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಗಣಿಗಾರಿಕೆಯಿಂದ ಶಬ್ದ ಮಾಲಿನ್ಯ ಒಂದೆಡೆಯಾದರೆ, ಗ್ರಾಮಗಳ ಸುತ್ತಮುತ್ತಲು ಇರುವ ದೇವಾಲಯಗಳು ನೀರಿನ ಟ್ಯಾಂಕ್‌ಗಳು ಮತ್ತು ಗ್ರಾಮ ಹೊರವಲಯದಲ್ಲಿರುವ ಶಾಲೆಗಳ ಕಟ್ಟಡಗಳಿಗೆ ಸೇರಿದಂತೆ ಗ್ರಾಮದ ಹಲವು ಮನೆಗಳಿಗೆ ತೊಂದರೆಯಾಗುತ್ತಿತ್ತು. 

ಇದರಿಂದ ಆತಂಕಕ್ಕೆ ಒಳಗಾಗಿದ್ದ ಸ್ಥಳೀಯರು, ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಅಧಿಕಾರಿಗಳಿಗೆ ಹಾಗೂ ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗದ ಪರಿಣಾಮ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಕಲ್ಲುಗಣಿಗಾರಿಕೆ ಬಳಿ ತೆರಳಿ ಕೂಲಿ ಕಾರ್ಮಿಕರ ಟೆಂಟ್‌ಗಳ ಮೇಲೆ ಕಲ್ಲು ತೂರಾಟ ಮಾಡಿ ಧ್ವಂಸ ಮಾಡಿದ್ದರು. ಈ ವೇಳೆ ಪರಿಸ್ಥಿತಿ ಕೈ ಮೀರುವ ವೇಳೆಗೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಗ್ರಾಮಸ್ಥರನ್ನು ಚದುರಿಸಿ ಗಲಾಟೆಯನ್ನು ಶಮನಗೊಳಿಸಿದ್ದರು. 

ಘಟನೆ ಹರಿತ ಶಾಸಕ ಜೆ.ಕೆ.ಕೃಷ್ಣಾರೆಡ್ಡಿರವರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಸಮಾಧಾನ ಮಾಡಿದರಾದರೂ ಸಮಾಧಾನಗೊಳ್ಳದ ಗ್ರಾಮಸ್ಥರು ಇನ್ನಷ್ಟು ರೊಚ್ಚಿಗೆದ್ದು, ಗಲಾಟೆ ಮಾಡಿದ ಪರಿಣಾಮ ಶಾಸಕರು ಸ್ಥಳದಿಂದ ಹೊರಡಲು ಪ್ರಯತ್ನಿಸಿದ ಪ್ರಸಂಗವೂ ನಡೆಯಿತು.

ಡಿಸಿ ಜೊತೆ ಮಾತುಕತೆ: ಶಾಸಕರು ಗಣಿಗಾರಿಕೆಗೆ ಪರವಾನಗಿ ಇರುವ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದರು. ದೂರವಾಣಿ ಮೂಲಕ ಜಿಲಾಧಿಕಾರಿಗಳು ಮಾಹಿತಿ ನೀಡಿದ ನಂತರ, ಶಾಸಕರು ಪರವಾನಗಿಯನ್ನು ಶೀಘ್ರವಾಗಿ ರದ್ದು ಮಾಡಿ ಸಾರ್ವಜನಿಕರ ಹಿತಕಾಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

Advertisement

ಅಧಿಕಾರಿಗಳ ವಿರುದ್ಧ ಆಕ್ರೋಶ: ಸುತ್ತಲೂ ಜನವಾಸವಿರುವ ಪ್ರದೇಶಕ್ಕೆ ಯಾವ ರೀತಿ ಪರವಾನಗಿ ನೀಡಿದರು ಎಂದು ಪ್ರಶ್ನಿಸಿದ ಗ್ರಾಮಸ್ಥರು, ಅಧಿಕಾರಿಗಳು ಗಣಿಗಾರಿಕೆ ಮಾಲೀಕರ ಕಮಿಷನ್‌ಗೆ ಆಸೆ ಪಟ್ಟು ಪರವಾನಗಿ ನೀಡಿ ಸಾರ್ವಜನಿಕರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು ಮಾತನಾಡಿ, ಈ ಸ್ಥಳದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಸರ್ಕಾರದಿಂದ ಪರವಾನಗಿ ಪಡೆದಿದ್ದಾರೆ. ಆದರೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಶೀಘ್ರವೇ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಸೂಚಿಸಲಾಗಿದೆ. ಶೀಘ್ರವೇ ಸಾರ್ವಜನಿಕರಿಗೆ ಅನುಕೂಲ ಮಾಡಲಾಗುವುದು ಎಂದರು. 

ಕಲ್ಲು ಗಣಿಗಾರಿಕೆ ಬಳಿ ಹಾಕಿದ್ದ ನಾಮಫ‌ಲಕವನ್ನು ನಿವಾಸಿಗಳು ಕಿತ್ತು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಹಿತಕರ ಘಟನೆಗಳು ಜರುಗದಂತೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next