ಮದ್ದೂರು: ತಾಲೂಕಿನ ಕೊಪ್ಪ ಹೋಬಳಿಯ ಸೀನಪ್ಪನದೊಡ್ಡಿ ಗ್ರಾಮದ ಸರ್ವೆ. ನಂ.74ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸಂಬಂಧ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೀಳಘಟ್ಟ ಗ್ರಾಮದ ಸರ್ವೆ.ನಂ. 74ರ 26 ಎಕರೆ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಇದರಿಂದಾಗಿ ಗ್ರಾಮದ ದೇವಾಲಯ, ಶಾಲಾ ಕಟ್ಟಡಗಳು, ಅಂಗನವಾಡಿ, ಹಾಗೂ ವಾಸದ ಮನೆ ಗೋಡೆಗಳು ಬಿರುಕು ಬಿಡುತ್ತಿರುವ ಸಂಬಂಧ ಸ್ಥಳೀಯ ಗ್ರಾಮಸ್ಥರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಕೆಲ ಪ್ರಭಾವಿಗಳು ಹಾಗೂ ರಾಜಕೀಯ ಮುಖಂಡರು ಕಳೆದ ಹಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಲಾಗಿತ್ತು. ಆದರೆ ಯಾವುದೇ ಪ್ರಯೋಜವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಹೈಕೋರ್ಟಿನಲ್ಲಿ ಕಲ್ಲು ಗಣಿಗಾರಿಕೆ ತಡೆ ಸಂಬಂಧ ಅರ್ಜಿ ಸಲ್ಲಿಸಿದ್ದು, ಕೋರ್ಟ್ ನಿರ್ದೇಶನದಂತೆ ಸ್ಥಳೀಯವಾಗಿ ಅನುಮತಿ ಪಡೆದ ಗಣಿ ಗುತ್ತಿಗೆದಾರರಿಗೆ ಅಗತ್ಯ ದಾಖಲಾತಿಗಳೊಡನೆ ಸ್ಥಳದಲ್ಲಿ ಹಾಜರಿರುವಂತೆ ನೋಟಿಸ್ ನೀಡುವ ಜತೆಗೆ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಶುಕ್ರವಾರ ಸ್ಥಳಕ್ಕಾಗಮಿಸಿದ ಗಣಿ ಇಲಾಖೆ ಅಧಿಕಾರಿಗಳ ಬಳಿ ಸ್ಥಳೀಯರು ಅಕ್ರಮ ಗಣಿಗಾರಿಕೆ ತಡೆಗೆ ಆಗ್ರಹಿಸಿದರು.
ಮನವಿ ಆಲಿಸಿ ಸ್ಥಳ ಪರಿಶೀಲನೆ ಬಳಿಕ ಮಾತನಾಡಿದ ಹಿರಿಯ ಭೂ ವಿಜ್ಞಾನಿ ಟಿ.ವಿ. ಪುಷ್ಪಾ ಹೈಕೋರ್ಟ್ ಆದೇಶ ದನ್ವಯ ಪರಿಶೀಲಿಸಿದ್ದು, ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು. ಅಧಿಕಾರಿಗಳಾದ ಟಿ. ನಾಗೇಶ್, ಶ್ವೇತಾ, ಪ್ರಸನ್ನಕುಮಾರ್ ಸೇರಿದಂತೆ ಸ್ಥಳೀಯರು ಹಾಜರಿದ್ದರು.