Advertisement

ಕಲ್ಲು ಗಣಿಗಾರಿಕೆ, ಜೆಲ್ಲಿ ಕ್ರಷರ್‌ನಿಂದ ಪರಿಸರಕ್ಕೆ ಹಾನಿ

07:47 AM Mar 03, 2019 | |

ದೇವನಹಳ್ಳಿ: ತಾಲೂಕಿನ ಮುದ್ದನಾಯಕನಹಳ್ಳಿ ಹಾಗೂ ಇತರೆಡೆ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜೆಲ್ಲಿ ಕ್ರಷರ್‌ಗಳಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದೆ ಎಂದು ಆರೋಪಿಸಿ ತಾಲೂಕು ರೈತಸಂಘದ ಕಾರ್ಯಕರ್ತರು ಮುದ್ದನಾಯಕನಹಳ್ಳಿ, ಸೊಣ್ಣೇನಹಳ್ಳಿ ಬಂಡೆಗಳಲ್ಲಿ ಪ್ರತಿಭಟನೆ ನಡೆಸಿದರು.

Advertisement

ಮುದ್ದನಾಯಕನಹಳ್ಳಿ ಗ್ರಾಮದ ಸರ್ವೆ ನಂ.112, ತೈಲಗೆರೆ ಸರ್ವೇ ನಂ 110 ಪಿ32, ಸೊಣ್ಣೆನಹಳ್ಳಿ, ಮಾಯಸಂದ್ರ, ಮೀಸಗಾನಹಳ್ಳಿಗಳಲ್ಲಿ ಅಕ್ರಮ ಗಣಿಗಾರಿಕೆ ಜೆಲ್ಲಿ ಕ್ರಷರ್‌ಗಳಿಂದ ಬರುವ ಧೂಳಿನಿಂದ ಬೆಳೆ ನಾಶವಾಗುತ್ತದೆ. ಸಿಡಿಮದ್ದು ಸಿಡಿಸುವುದರಿಂದ ಮನೆಗಳ ಗೋಡೆಗಳು ಬಿರುಕು, ಸಿಡಿಮದ್ದಿನ ವಾಸನೆಯಿಂದ ಅನಾರೋಗ್ಯ, ಜಾನುವಾರುಗಳಿಗೆ ಮೇವಿನ ಕೊರತೆ ಹಲವಾರು ಸಮಸ್ಯೆಗಳು ಗ್ರಾಮಗಳಲ್ಲಿ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ರೈತರು ಪ್ರತಿಭಟನೆ ನಡೆಸಿದರು.

ಅಧಿಕಾರಿಗಳು ವಿಫ‌ಲ: ರೈತ ಮುಖಂಡ ರಮೇಶ್‌ ಮಾತನಾಡಿ, ತೈಲಗೆರೆ ಸರ್ವೆ ನಂ. 110 ಸೇರಿದಂತೆ ವಿವಿಧ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಗ್ರಾಮಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜೆಲ್ಲಿ ಕ್ರಷರ್‌ಗಳ ಮೂಲಕ ಕೆಲಸವಾಗುತ್ತಿದ್ದು, ಕಲ್ಲು ಗಣಿಗಾರಿಕೆಗಳಲ್ಲಿ ಅಪಾರ ಪ್ರಮಾಣದ ಕಲ್ಲುಗಳನ್ನು ಸಿಡಿಸುತ್ತಾರೆ.

ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಕ್ರಷರ್‌ಗಳು ಮತ್ತು ಕಲ್ಲು ಗಣಿಗಾರಿಕೆಯಲ್ಲಿ ಸಿಡಿಸುವ ಸಿಡಿಮದ್ದಿನಿಂದ ಬರುವ ಧೂಳು ಜಮೀನುಗಳಲ್ಲಿ ಬೆಳೆದ ಬೆಳೆಗಳ ಮೇಲೆ ಆವರಿಸುವುದರಿಂದ ಬೆಳೆಗಳು ನಾಶವಾಗುತ್ತಿವೆ. ಶಾಲಾ ಮಕ್ಕಳು ಈ ಧೂಳಿನಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂಬ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫ‌ಲರಾಗಿದ್ದಾರೆ ಎಂದು ದೂರಿದರು. 

ಗಣಿ ಮಾಫಿಯಾಗೆ ಆದ್ಯತೆ: ಪೊಲೀಸ್‌ ಠಾಣೆಗೆ ಹೋದರೆ ತಹಶೀಲ್ದಾರ್‌ ಮೇಲೆ ಹೇಳುತ್ತಾರೆ. ತಹಶೀಲ್ದಾರ್‌ ಬಳಿ ಹೋದರೆ ಪೊಲೀಸರ ಮೇಲೆ ಹೇಳುತ್ತಾರೆ. ಜಿಲ್ಲಾಧಿಕಾರಿಗಳ ಬಳಿ  ಹೋದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಮನಕ್ಕೆ ತನ್ನಿ ಎನ್ನುತ್ತಾರೆ. ಪ್ರಭಾವಿ ಗಣಿ ಮಾಫಿಯಾಗೆ ಹೆಚ್ಚು ಒತ್ತು ನೀಡುತ್ತಾರೆಂದು ಆರೋಪಿಸಿದರು. 

Advertisement

ಉಗ್ರ ಪ್ರತಿಭಟನೆ ಎಚ್ಚರಿಕೆ: ರಾಜ್ಯ ರೈತ ಸಂಘದ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ಮುದ್ದನಾಯಕನಹಳ್ಳಿ ಹಾಗೂ ಇತರೆ ಕಡೆ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಜನರು ಹಾಗೂ ರೈತರು ತತ್ತರಿಸಿ ಹೋಗಿದ್ದಾರೆ. ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕು.

ಯಾವ ಜಾಗದಲ್ಲಿ ಕಲ್ಲು ಗಣಿಗಾರಿಕೆ ಮಾಡಬೇಕು. ಎಷ್ಟು ಜನರಿಗೆ ಅನುಮತಿ ನೀಡಿದ್ದಾರೆ ಎಂಬುವುದರ ಮಾಹಿತಿ ನೀಡಬೇಕು. ಜಿಲ್ಲಾಡಳಿತ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಕಣ್ಣು ಮಚ್ಚಿಕೊಂಡು ಕುಳಿತಿದ್ದಾರೆ. ಅಕ್ಕ ಪಕ್ಕ ರೈತರ ಜಮೀನಿನ ಪರಿಸ್ಥಿತಿ ಏನಾಗಬೇಕು. ಶೀಘ್ರದಲ್ಲಿಯೇ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 

ರೈತ ಜಯದೇವ ಒಡೆಯರ್‌ ಮಾತನಾಡಿ, ತೈಲಗೆರೆ ಸರ್ವೆ ನಂ. 110 ಪಿ 32ನಲ್ಲಿ 4 ಜನ ರೈತರು 4 ಎಕರೆ ಜಾಗವನ್ನು ಹೊಂದಿದ್ದೇವೆ. ಕೆಲವು ಪ್ರಭಾವಿ ವ್ಯಕ್ತಿಗಳು ನಮ್ಮ ಜಾಗದ ಪಕ್ಕದಲ್ಲಿಯೇ ಕಲ್ಲು ಗಣಿಗಾರಿಕೆ ಮಾಡುತ್ತಿರುವುದರಿಂದ ನಮ್ಮ ಜಾಗವನ್ನು ಆಕ್ರಮಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ರೈತ ರಾಮಾಂಜನಪ್ಪ ಮಾತನಾಡಿದರು. ಈ ವೇಳೆ ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಿದಲೂರು ರಮೇಶ್‌, ರೈತರಾದ ಮಾರೇಗೌಡ, ಪಿಳ್ಳಪ್ಪ, ನರಸಿಂಹ ಮೂರ್ತಿ, ರಮೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next