ನೆಲಮಂಗಲ: ಬೆಟ್ಟಗುಡ್ಡಗಳ ಜತೆ ಸುಂದರ ಪ್ರಕೃತಿ ಸಂಪತ್ತು ತುಂಬಿದ್ದ ಕಾಡುಕರೇನಹಳ್ಳಿಯ ಸುಂದರ ಪರಿಸರಕ್ಕೆ ಅಕ್ರಮ ಕಲ್ಲುಗಣಿಗಾರಿಕೆ ಪ್ರವೇಶವಾಗಿ ಬೆಟ್ಟಗುಡ್ಡಗಳು ಕರಗಿ ಹೋಗುತ್ತಿದ್ದು, ಅಧಿಕಾರಿಗಳು ಕಂಡರೂ ಕಾಣದಂತೆ ಜಾಣಕುರುಡು ಪ್ರದರ್ಶನ ತೋರಿಸು ತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಾಲೂಕಿನ ಕಸಬಾ ಹೋಬಳಿಯ ಮಹದೇವಪುರದ ಗಡಿಗ್ರಾಮ ಕಾಡುಕರೇನಹಳ್ಳಿಯಲ್ಲಿ ನೂರಾರು ಎಕರೆ ಪ್ರದೇಶ ಸಂಪೂರ್ಣ ಬೆಟ್ಟಗುಡ್ಡಗಳಿಂದ ಕೂಡಿದೆ. ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಹಗಲು-ರಾತ್ರಿ ಎನ್ನದೇ ನಿರಂತರವಾಗಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದ್ದರೂ, ಜಿಲ್ಲಾಡಳಿತ, ತಾಲೂಕು ಆಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಶಾಶ್ವತವಾಗಿ ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸುವ ಪ್ರಯತ್ನ ಮಾಡಿಲ್ಲ.
ಅನುಮತಿ ಬೇಡವಂತೆ!: ಮಹದೇವಪುರದಿಂದ ಮೋಟಗನಹಳ್ಳಿ ಮಾರ್ಗವಾಗಿ ಸಂಚರಿಸುವಾಗ ಅಕ್ರಮ ಕಲ್ಲುಗಣಿಗಾರಿಕೆ ಮಾಡುವುದು ರಾಜರೋಷವಾಗಿ ಕಾಣುತ್ತಿದ್ದರೂ ನಿಲ್ಲಿಸುವ ಪ್ರಯತ್ನ ವಾಗಿಲ್ಲ. ಅಕ್ರಮ ಕಲ್ಲುಗಣಿಗಾರಿಕೆ ಮಾಡುವ ಮಾಲೀಕರನ್ನು ಪ್ರಶ್ನೆ ಮಾಡಿದರೆ, ಅನುಮತಿ ಪಡೆದು ಕಲ್ಲುಗಣಿಗಾರಿಕೆ ಮಾಡಿದರೆ ನಾವು ಜೀವನ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ಭಾಗದ ಜಾಗದಲ್ಲಿ ನಾವು ಮಾಡುತ್ತಿದ್ದೇವೆ. ನಾವೇಕೆ ಅನುಮತಿ ಪಡೆಯಬೇಕು. ಅಧಿಕಾರಿಗಳು ಬರಲ್ಲ ಬಿಡಿ ಸರ್ ಎಂಬ ಬೇಕಾ ಬಿಟ್ಟಿ ಹೇಳಿಕೆ ನೀಡಿದ್ದು, ಅನುಮತಿಯೇ ಬೇಡವಂತೆ ಪ್ರತಿಕ್ರಿಯಿಸಿದ್ದಾರೆ.
ಕೋಟಿ ಕೋಟಿ ರೂ. ಹಣ ಸಂಪಾದನೆ: ಅಕ್ರಮ ಕಲ್ಲುಗಣಿಗಾರಿಕೆ ಮಾಡುತ್ತಿರುವ ಅನೇಕ ವ್ಯಕ್ತಿಗಳು ಪ್ರಭಾವಿಗಳಾಗಿದ್ದು, ಯಾವುದೇ ಅನುಮತಿಯಿಲ್ಲದೇ ಕಲ್ಲು ಒಡೆದು ಮನೆ ನಿರ್ಮಾಣಕ್ಕೆ ಸೈಸ್ ಕಲ್ಲು, ಬೋಡ್ರೊಸ್, ಜಲ್ಲಿಯನ್ನು ಸರಬರಾಜು ಮಾಡುತ್ತಿ ದ್ದಾರೆ. ಒಂದು ಲೋಡು ಸೈಸ್‌ಕಲ್ಲಿಗೆ 9ರಿಂದ 10 ಸಾವಿರ ಪಡೆಯುತ್ತಿದ್ದು, ದಿನಕ್ಕೆ ಹತ್ತಾರು ಲೋಡ್ ಸಾಗಿಸುತ್ತಿದ್ದಾರೆ. ಸಣ್ಣ ಜಲ್ಲಿ, ದಪ್ಪ ಜಲ್ಲಿಯನ್ನು ಲಕ್ಷಾಂತರ ಹಣಕ್ಕೆ ಮಾರಾಟ ಮಾಡುತ್ತಿದ್ದು, ತಿಂಗಳಿಗೆ ಕೋಟಿ ಕೋಟಿ ರೂಪಾಯಿ ವ್ಯವಹಾರವನ್ನು ಅಕ್ರಮವಾಗಿ ಮಾಡುತ್ತಿದ್ದರೂ, ಅಧಿಕಾರಿಗಳ ಮೌನ ಅನೇಕ ಅನುಮಾನಕ್ಕೆ ಕಾರಣವಾಗಿದೆ.
ಗಡಿಯಲ್ಲಿ ಅಕ್ರಮಗಳ ದಂಧೆ : ತಾಲೂಕಿನ ಗಡಿಗ್ರಾಮಗಳು ಹಾಗೂ ಗಡಿ ಪ್ರದೇಶದ ಬೆಟ್ಟಗುಡ್ಡಗಳಲ್ಲಿ ಅಕ್ರಮ ಕಲ್ಲುಗಣಿಗಾರಿಕೆ, ರೆಸಾರ್ಟ್ ಸೇರಿದಂತೆ ಅನೇಕ ಅಕ್ರಮ ದಂಧೆಗಳನ್ನು ಪ್ರಭಾವಿಗಳು, ರೌಡಿಶೀಟರ್, ಮುಖಂಡರು ನಡೆಸುತ್ತಿದ್ದು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಸ್ಥಳೀಯ ಗ್ರಾಮಲೆಕ್ಕಾಧಿಕಾರಿಗಳು, ಆರ್‌ಐ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದಂತೆ ಬೆದರಿಸುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಾನೇ ಬಂಡೆ ಒಡೆಯುತ್ತಿರುವುದು. ನಮ್ಮ ಹೊಲದ ಬಳಿ ಮಾಡುತ್ತಿದ್ದೇವೆ. ಅನುಮತಿ ಪಡೆದು ಮಾಡಲು ಹೋದರೆ ಭಾರತದಲ್ಲಿ ಜೀವನ ಮಾಡಲು ಆಗಲ್ಲ. ಬಂಡೆ ಒಡೆದು ಜೀವನ ಮಾಡುತ್ತೇವೆ ಬಿಡಿ.
– ಅಕ್ರಮ ಕಲ್ಲುಗಣಿಗಾರಿಕೆ ಮಾಡುತ್ತಿರುವ ವ್ಯಕ್ತಿ
ಅಕ್ರಮವಾಗಿ ಕಲ್ಲುಗಣಿಗಾರಿಕೆ ಮಾಡುವ ಮಾಹಿತಿ ಬಂದಾಗ ಪರಿಶೀಲನೆ ಮಾಡಿ ಕ್ರಮಕೈಗೊಂಡಿದ್ದೇವೆ. ಕಾಡುಕರೇನಹಳ್ಳಿ ಅನೇಕ ಬಾರಿ ಪ್ರಕರಣ ದಾಖಲಾಗಿದೆ. ಆದರೂ ಮತ್ತೆ ಮಾಡುತ್ತಿದ್ದರೆ ಕಾನೂನು ರೀತಿ ಕಠಿಣ ಕ್ರಮಕೈಗೊಳ್ಳಲಾಗುತ್ತದೆ.
– ಬಸವರಾಜು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ
ಗಡಿ ಕಾಡುಕರೇನಹಳ್ಳಿಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆಯ ಬಗ್ಗೆ ಮಾಹಿತಿ ಪಡೆದು ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ನಮ್ಮ ವ್ಯಾಪ್ತಿಯಲ್ಲಿ ಅಕ್ರಮ ನಡೆಯಲು ನಾವು ಬಿಡುವುದಿಲ್ಲ
– ಅರುಂಧತಿ, ನೆಲಮಂಗಲ ತಹಶೀಲ್ದಾರ್
ಕಾಡುಕರೇನಹಳ್ಳಿಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮಾಡುತ್ತಿದ್ದು, ಯಾರು ಯಾವ ಅನುಮತಿಯೂ ಪಡೆದಿಲ್ಲ. ಕಳೆದ ಕೆಲ ತಿಂಗಳ ಹಿಂದೆ ಎಚ್ಚರಿಕೆ ನೀಡಿ ನಿಲ್ಲಿಸಲಾಗಿತ್ತು. ಮತ್ತೆ ಆರಂಭ ಮಾಡಿದ್ದು, ಕಾನೂನು ಕ್ರಮಕೈಗೊಳ್ಳಲಾಗುತ್ತದೆ. –
ಅಶ್ವತ್ಥ್, ರಾಜಸ್ವ ನಿರೀಕ್ಷಕ ನೆಲಮಂಗಲ
ಆರ್.ಕೊಟ್ರೇಶ್