Advertisement

ರೈಲು ವಿಧ್ವಂಸಕ್ಕೆ ನಿರಂತರ ಯತ್ನ : ಹಳಿಯಲ್ಲಿತ್ತು 35 ಕೆಜಿ ಕಾಂಕ್ರೀಟ್‌ ತುಂಡು!

12:43 PM Aug 24, 2022 | Team Udayavani |

ಕಾಸರಗೋಡು : ಜಿಲ್ಲೆಯಲ್ಲಿ ರೈಲು ಹಳಿಗಳ ಮೇಲೆ ಕಲ್ಲುಗಳನ್ನು ಇರಿಸಿ ವಿಧ್ವಂಸಕ ಕೃತ್ಯ ಎಸಗುವ ಯತ್ನ ನಿರಂತರ ಮುಂದುವರಿದಿದೆ.

Advertisement

ಕಾಸರಗೋಡು ರೈಲು ನಿಲ್ದಾಣ ಸಮೀಪ ತಳಂಗರೆ ಪರಿಸರದಲ್ಲಿ ದುಷ್ಕರ್ಮಿಗಳು ಮಂಗಳವಾರ ಹಳಿಯಲ್ಲಿ ಕಲ್ಲುಗಳನ್ನಿರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ್ದಾರೆ. ಈ ಬಗ್ಗೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರವಿವಾರವೂ 3 ಕಡೆ ಯತ್ನ
ಜಿಲ್ಲೆಯ ತೃಕ್ಕನ್ನಾಡು, ಕುಂಬಳೆ, ಹೊಸದುರ್ಗದಲ್ಲಿ ರೈಲು ಹಳಿಯಲ್ಲಿ ಬೃಹತ್‌ ಗಾತ್ರದ ಕಲ್ಲುಗಳನ್ನು ಮತ್ತು ಕಬ್ಬಿಣದ ಸರಳುಗಳನ್ನಿರಿಸಿದ ಘಟನೆ ರವಿವಾರ (ಆ. 21) ನಡೆದಿದೆ.

ಕೋಟಿಕುಳಂ-ಬೇಕಲ ಮಧ್ಯೆ ತೃಕ್ಕನ್ನಾಡು ದೇಗುಲದ ಹಿಂದುಗಡೆಯಿರುವ ರೈಲು ಹಳಿಯಲ್ಲಿ ಕಬ್ಬಿಣದ ಸರಳುಗಳು ಒಳಗೊಂಡ ಬೃಹತ್‌ ಗಾತ್ರದ ಕಾಂಕ್ರೀಟ್‌ ತುಂಡುಗಳನ್ನಿರಿಸಿ ಆ ಮೂಲಕ ರೈಲುಗಳನ್ನು ಬೀಳಿಸುವ ಸಂಚು ನಡೆಸಲಾಗಿದೆ. ರೈಲ್ವೇ ಗಾರ್ಡ್‌ ಹಳಿಯಲ್ಲಿ ಕಾಂಕ್ರೀಟ್‌ ತುಂಡುಗಳನ್ನು ಇರಿಸಿರುವುದನ್ನು ಕಂಡು ಸಕಾಲದಲ್ಲಿ ಅದನ್ನು ಎತ್ತಿ ಬದಿಗೆ ಎಸೆದು ಸಂಭಾವ್ಯ ರೈಲು ದುರಂತವನ್ನು ತಪ್ಪಿಸಿದ್ದರು. ಸುಮಾರು 35 ಕಿಲೋ ತೂಕದ ಕಾಂಕ್ರೀಟ್‌ ತುಂಡನ್ನು ಹಳಿ ಮೇಲೆ ಇರಿಸಲಾಗಿತ್ತು. ಈ ಬಗ್ಗೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಂಬಳೆ ರೈಲು ನಿಲ್ದಾಣದ ಸುಮಾರು 400 ಮೀಟರ್‌ ಉತ್ತರ ಭಾಗದಲ್ಲಿ ಹಳಿಗಳ ಮೇಲೆ ಕಲ್ಲುಗಳನ್ನು ಇರಿಸಿ ಕೃತ್ಯಕ್ಕೆ ಯತ್ನಿಸಲಾಗಿದೆ. ಹಳಿಯ ಮೇಲೆ ಕಲ್ಲುಗಳನ್ನು ಇರಿಸಿರುವುದು ಸ್ಥಳೀಯರ ಗಮನಕ್ಕೆ ಬಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಬಗ್ಗೆ ರೈಲ್ವೇ ಸೆಕ್ಷನ್‌ ಆಫೀಸರ್‌ ರಂಜಿತ್‌ ಕುಮಾರ್‌ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಸದುರ್ಗದಲ್ಲಿ ರೈಲಿಗೆ ಕಲ್ಲು ಎಸೆಯಲಾಗಿದೆ. ಈ ಬಗ್ಗೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ಮೂರು ಘಟನೆಗಳನ್ನು ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್‌), ರೈಲ್ವೇ ಪೊಲೀಸರು ಮತ್ತು ಲೋಕಲ್‌ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next