ಹೊಸದಿಲ್ಲಿ: ಐಪಿಎಸ್ ಅಧಿಕಾರಿಗಳಿಗೆ ಇದೊಂದು ಎಚ್ಚರಿಕೆಯ ಘಂಟೆ! ಮನೆಯಲ್ಲಿ ಪತ್ನಿಯೋ, ಅಮ್ಮನೋ ಚೆಂದ ಅಡುಗೆ ಮಾಡ್ತಾರೆ ಅಂತ ಅದೂ, ಇದೂ ಅಂತ ತಿಂದು ಹೊಟ್ಟೆ ಉಬ್ಬಿಸಿ ಕೊಳ್ಳಬೇಡಿ. ಹಾಗೆಯೇ ತೂಕವನ್ನು ಹೆಚ್ಚು ಮಾಡಿಕೊಳ್ಳಬೇಡಿ. ನೀವು ಎಷ್ಟು ಭಾರವಾದ ಹೊಟ್ಟೆ ಹೊಂದಿರುತ್ತೀರೋ ಅಥವಾ ಎಷ್ಟು ತೂಕ ಹೆಚ್ಚಿಸಿಕೊಳ್ಳುತ್ತೀರೋ ಅದೇ ಲೆಕ್ಕಾಚಾರದಲ್ಲಿ ಭಡ್ತಿ ದಿನಗಳೂ ದೂರವಾಗುತ್ತವೆ!
ಕೇಂದ್ರ ಸಿಬಂದಿ ಮತ್ತು ತರಬೇತಿ ಸಚಿ ವಾಲಯ ಗೃಹ ಇಲಾಖೆಯ ಸೂಚನೆ ಮೇರೆಗೆ ಇಂಥದ್ದೊಂದು ಕರಡು ನಿಯಮ ರೂಪಿಸಿದೆ. ಈಗಾಗಲೇ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಕರಡು ಪ್ರತಿಯನ್ನು ಕಳುಹಿಸಲಾಗಿದೆ. ಈ ಸಂಬಂಧ ಅಭಿಪ್ರಾಯಗಳನ್ನೂ ಕೋರಲಾಗಿದೆ.
ಈ ಕರಡು ನಿಯಮದ ಪ್ರಕಾರ, ಐಪಿಎಸ್ ಅಧಿಕಾರಿಗಳಿಗೆ ಫಿಟ್‌ನೆಸ್ ಆಧಾರದಲ್ಲಿ ಭಡ್ತಿ ನೀಡಲಾಗುತ್ತದೆ. ಅಂದರೆ, ಯಾವ ಅಧಿಕಾರಿ ಗಳು ಉತ್ತಮ ಫಿಟ್‌ನೆಸ್ ಹೊಂದಿರುತ್ತಾರೋ ಅವರಿಗಷ್ಟೇ ಭಡ್ತಿ ಸಿಗಲಿದೆ. ಯಾವ ರೀತಿಯಲ್ಲಿ ಫಿಟ್‌ನೆಸ್ ಇರಬೇಕು ಎಂಬುದನ್ನು ಕೇಂದ್ರ ಗೃಹ ಸಚಿವಾಲಯವೇ ರಾಜ್ಯಗಳಿಗೆ ಸಮಯಕ್ಕೆ ತಕ್ಕಂತೆ ಸೂಚನೆಗಳನ್ನು ನೀಡುತ್ತಿರುತ್ತದೆ. ಇದರ ಆಧಾರದ ಮೇಲೆಯೇ ಮುಂದೆ ಭಡ್ತಿ ಸಿಗುತ್ತದೆ ಎಂದು ಈ ನಿಯಮ ಹೇಳುತ್ತದೆ.
ಸದ್ಯ ದೇಶದಲ್ಲಿ ಫಿಟ್‌ನೆಸ್ ಆಧಾರದಲ್ಲಿ ಭಡ್ತಿ ನೀಡುವ ಅಥವಾ ಭಡ್ತಿಗೆ ಕತ್ತರಿ ಹಾಕುವ ನಿಯಮ ಇಲ್ಲ. ಈಗ ವಿವಿಧ ಹುದ್ದೆ, ಶ್ರೇಣಿ ಮತ್ತು ಗ್ರೇಡ್‌ಗಳಿಗೆ ಸೇವಾ ಹಿರಿತನದ ಆಧಾರದ ಮೇಲೆ ಭಡ್ತಿ ನೀಡಲಾಗುತ್ತದೆ. ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ “ಎ’ ಗ್ರೂಪ್ ಅಧಿಕಾರಿಗಳಂತೆಯೇ ಈ ಫಿಟ್‌ನೆಸ್ ಹೊಂದಿದ ಅಧಿಕಾರಿಗಳನ್ನು ಪರಿಗಣಿಸಲಾಗುತ್ತದೆ.
ಜತೆಗೆ ಐಪಿಎಸ್ ಅಧಿಕಾರಿಗಳು ವಿವಿಧ ರೀತಿಯ ಕಾರ್ಯಾಚರಣೆಯಲ್ಲೂ ಭಾಗಿ ಯಾಗಬೇಕಾಗುತ್ತದೆ. ಅಂದರೆ ಗುಪ್ತಚರ, ಆರ್ಥಿಕ ಅಪರಾಧ, ಸೈಬರ್ ಕ್ರೈಂ, ವಿಐಪಿ ಅಥವಾ ಕೈಗಾರಿಕೆಗಳ ಭದ್ರತೆ, ಉಗ್ರ ನಿಗ್ರಹ ಕಾರ್ಯತಂತ್ರ ಮತ್ತು ಭಯೋತ್ಪಾದನಾ ನಿಗ್ರಹ ಪಡೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ.
ಗೃಹ ಇಲಾಖೆಯ ಚಿಂತನೆ ಪ್ರಕಾರ, ಅಧಿಕಾರಿಗಳು ಡಿಐಜಿ, ಐಜಿ ಮತ್ತು ಎಡಿಜಿ ಹುದ್ದೆಗಳಿಗೆ ಭಡ್ತಿ ಪಡೆವ ಮುನ್ನ ಕನಿಷ್ಠ ಒಂದು ವಾರಗಳ ಕಾಲವಾದರೂ ಕನಿಷ್ಠ ಮೂರು ರೀತಿಯ ಕಾರ್ಯಾಚರಣೆಗಳಲ್ಲಿ ತರಬೇತಿ ಪಡೆಯಬೇಕು. ಸದ್ಯ ಗೃಹ ಇಲಾಖೆ 20 ರೀತಿಯ ಕಾರ್ಯಾಚರಣೆಗಳನ್ನು ಗುರುತಿ ಸಿದೆ. ಅಲ್ಲದೆ, ಐಪಿಎಸ್ ಅಧಿಕಾರಿಗಳು ನಿಗದಿತ ಸಮಯದಲ್ಲೇ ತರಬೇತಿ ಅವಧಿಯನ್ನೂ ಮುಗಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
ಹೀಗಾಗಿ ಎಲ್ಲ ರಾಜ್ಯಗಳು ಒಪ್ಪಿಗೆ ನೀಡಿ ಇದು ನಿಯಮವಾಗಿ ಜಾರಿಯಾದರೆ ಆಗ ಹಿರಿತನದ ಆಧಾರದಲ್ಲಿ ಪ್ರಮೋಷನ್ ಸಿಗುವುದು ಕಷ್ಟವಾಗಲಿದೆ. ಅಲ್ಲದೆ ಇಡೀ ರಾಜ್ಯಕ್ಕೆ ನಾನೇ ಹಿರಿಯ ಅಧಿಕಾರಿ, ಹಾಗಾಗಿ ನನಗೇ ಮಹಾ ನಿರ್ದೇಶಕರಂಥ ಹುದ್ದೆ ನೀಡಬೇಕು ಎಂಬ ಹೋರಾಟವೂ ಸ್ತಬ್ಧವಾಗಲಿದೆ.