ಬೆಳಗಾವಿ: ಪರೀಕ್ಷೆಯಲ್ಲಿ ಅನೇಕ ಬಾರಿ ಅನುತ್ತೀರ್ಣಗೊಂಡಿದ್ದಕ್ಕೆ ನೊಂದ ಯುವಕನೊಬ್ಬ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ನುಗ್ಗಿ ತನ್ನದೇ ಕಾಲೇಜು ವಿದ್ಯಾರ್ಥಿಗಳ 300 ಅಂಕಪಟ್ಟಿ ಹಾಗೂ ಎರಡು ಸ್ಕಾನರ್ ಕಳವು ಮಾಡುವಾಗ ಸಿಕ್ಕಿ ಬಿದ್ದಿದ್ದಾನೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ಬಸಪ್ಪ ಶಿವಲಿಂಗಪ್ಪ ಹೊನವಾಡ (23) ಬಂಧಿತ ಯುವಕ. ಜಮಖಂಡಿ ತಾಲೂಕಿನ ಹುನ್ನೂರ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಬಿಕಾಂ ಐದನೇ ಸೆಮಿಸ್ಟರ್‌ನಲ್ಲಿ ಪದೇಪದೆ ಅನುತ್ತೀರ್ಣಗೊಂಡಿದ್ದಕ್ಕೆ ಹತಾಶೆಗೊಂಡು ಈ ಕಳ್ಳತನ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಐದನೇ ಸೆಮಿಸ್ಟರ್‌ನ ಕೆಲವು ವಿಷಯಗಳಲ್ಲಿ ಬಸಪ್ಪ ಹೊನವಾಡ ಅನುತ್ತಿರ್ಣನಾಗಿದ್ದ. ಮರು ಪರೀಕ್ಷೆ ಬರೆದರೂ ಪಾಸಾಗಿರಲಿಲ್ಲ. ಇದರಿಂದ ನೊಂದಿದ್ದ ಈತ ಶುಕ್ರವಾರ ರಾತ್ರಿ ಬೆಳಗಾವಿಗೆ ಬಂದು ವಿಶ್ವವಿದ್ಯಾಲಯ ಹಾಸ್ಟೆಲ್‌ನಲ್ಲಿ ತನ್ನ ಗೆಳೆಯರ ಕೋಣೆಯಲ್ಲಿ ವಾಸವಿದ್ದು, ಮರುದಿನ ಮೌಲ್ಯಮಾಪನ ಕುಲಸಚಿವರ ಬಳಿ ಹೋಗಿ ತನ್ನನ್ನು ಪಾಸ್ ಮಾಡುವಂತೆ ಅಂಗಲಾಚಿ ಬೇಡಿಕೊಂಡಿದ್ದಾನೆ.
ಬಳಿಕ ಜಗಳ ಕೂಡ ಮಾಡಿದ್ದಾನೆ. ಮರು ಮೌಲ್ಯಮಾಪನಕ್ಕೆ ಹಾಕುವಂತೆ ಸಲಹೆ ನೀಡಿದ್ದರೂ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಕುಲಸಚಿವರ ಕಚೇರಿಯಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ ಈತ, ಶನಿವಾರ ರಾತ್ರಿ ಕಿಟಕಿ ಮೂಲಕ ಒಳ ನುಗ್ಗಿ ಎರಡು ಸ್ಕಾನರ್ ಹಾಗೂ ತನ್ನ ಕಾಲೇಜಿನ ವಿದ್ಯಾರ್ಥಿಗಳ ಅಂಕ ಪಟ್ಟಿಗಳನ್ನು ಕಳವು ಮಾಡಿದ್ದಾನೆ.
ಕಚೇರಿಯಿಂದ ಪರಾರಿಯಾಗುವಾಗ ಸೆಕ್ಯೂರಿಟಿ ಗಾರ್ಡ್ ಈತನನ್ನು ಗಮನಿಸಿ, ಹೊರಗಿನಿಂದ ಕೀಲಿ ಹಾಕಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಕಾಕತಿ ಠಾಣೆ ಇನ್ಸ್‌ಪೆಕ್ಟರ್ ಶ್ರೀಶೈಲ ಕೌಜಲಗಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.