ಪರ್ಥ್: ಟಿ20 ವಿಶ್ವಕಪ್‌ನ ಸೂಪರ್-12 ಹಂತದ ಮಂಗಳವಾರದ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ, ಎದುರಾಳಿ ಶ್ರೀಲಂಕಾವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಸೋತಿದ್ದ ಆಸೀಸ್‌ಗೆ ಈ ಗೆಲುವು ಸಮಾಧಾನ ನೀಡಿದೆ. ಗುಂಪು-1ರ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 157 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ಆಸ್ಟ್ರೇಲಿಯ ಕೇವಲ 16.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಪೂರ್ಣ ಬ್ಯಾಟಿಂಗ್ ಕುಸಿತ ಅನುಭವಿಸಿತು. ಆರಂಭಿಕ ಪಾಥುಮ್ ನಿಸ್ಸಂಕ ನಿಧಾನವಾಗಿ ಆಡಿ 40 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಚರಿಥ ಅಸಲಂಕ ಅಜೇಯ 38 ರನ್ ಗಳಿಸಿದರು. ಆಸೀಸ್ ತಂಡ ಸಂಘಟಿತವಾಗಿ ಬೌಲಿಂಗ್‌ನಲ್ಲಿ ಯಶಸ್ಸು ಗಳಿಸಿತು.
ಸ್ಪರ್ಧಾತ್ಮಕ ಗುರಿಯನ್ನು ಬೆನ್ನುಹತ್ತಿದ ಆಸೀಸ್ ಎಲ್ಲೂ ಆತಂಕಕ್ಕೊಳಗಾಗಲಿಲ್ಲ. ನಾಯಕ ಏರಾನ್ ಫಿಂಚ್ 31 ರನ್ ಗಳಿಸಿದರೆ, ಮಾರ್ಕಸ್ ಸ್ಟಾಯಿನಿಸ್ ಸ್ಫೋಟಕ ಆಟವಾಡಿ ಬರೀ 18 ಎಸೆತಗಳಲ್ಲಿ 59 ರನ್ ಚಚ್ಚಿದರು. ಇದರಲ್ಲಿ 4 ಬೌಂಡರಿ, 6 ಸಿಕ್ಸರ್‌ಗಳು ಸೇರಿದ್ದವು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ 20 ಓವರ್, 157/6 (ಪಾಥುಮ್ ನಿಸ್ಸಂಕ 40, ಅಸಲಂಕ 38, ಮಿಚೆಲ್ ಸ್ಟಾರ್ಕ್ 23ಕ್ಕೆ 1). ಆಸೀಸ್ 16.3 ಓವರ್, 158/3 (ಸ್ಟಾಯಿನಿಸ್ 59, ಏರಾನ್ ಫಿಂಚ್ 31, ಕರುಣಾರತ್ನೆ 21ಕ್ಕೆ 1).