ಮುಂಬಯಿ : ಐದು ದಿನಗಳ ನಿರಂತರ ಗೆಲುವಿನ ಓಟವನ್ನು ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲೂ ಮುಂದುವರಿಸಿದ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್, 44.15 ಅಂಕಗಳ ಏರಿಕೆಯನ್ನು ದಾಖಲಿಸಿ 33,606.70 ಅಂಕಗಳ ಮಟ್ಟವನ್ನು ತಲುಪಿತು.
ಟೆಕ್ನಾಲಜಿ, ಐಟಿ, ರಿಯಲ್ಟಿ, ಹೆಲ್ತ್ ಕೇರ್ ಶೇರುಗಳು ಇಂದು ಹೂಡಿಕೆದಾರರು ಮತ್ತು ವಹಿವಾಟುದಾರರ ಖರೀದಿ ಪಟ್ಟಿಯಲ್ಲಿ ಕಾಣಿಸಿಕೊಂಡವು. ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಸ್ವಲ್ಪ ಮಟ್ಟಿನ ತೇಜಿ ಕಂಡು ಬಂದಿರುವುದು ಕೂಡ ಮುಂಬಯಿ ಶೇರಿಗೆ ಹುರುಪು ತುಂಬಿತು.
ಕಳೆದ ಐದು ದಿನಗಳ ನಿರಂತರ ಗೆಲುವಿನ ಓಟದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ ಒಟ್ಟು 801.11 ಅಂಕಗಳನ್ನು ಸಂಪಾದಿಸಿರುವುದು ಗಮನಾರ್ಹವಾಗಿದೆ.
ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 34.90 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 33,596.70 ಅಂಕಗಳ ಮಟ್ಟದಲ್ಲೂ , ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 14.20 ಅಂಕಗಳ ಏರಿಕೆಯೊಂದಿಗೆ 10,356.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಸ್‌ಬಿಐ, ಎಕ್ಸಿಸ್ ಬ್ಯಾಂಕ್, ಇನ್‌ಫೋಸಿಸ್, ರಿಲಯನ್ಸ್, ಎಚ್ ಡಿ ಎಫ್ ಸಿ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.