ಮುಂಬಯಿ : ಮುಂಬಯಿ ಶೇರು ಪೇಟೆ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ನಿರಂತರ ಮೂರನೇ ದಿನವಾಗಿ 185 ಅಂಕಗಳ ಕುಸಿತಕ್ಕೆ ಗುರಿಯಾಯಿತು.
ರಿಯಲ್ಟಿ, ಪವರ್, ಪಿಎಸ್‌ಯು, ಮೆಟಲ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಶೇರುಗಳು ಮಾರಾಟದ ಒತ್ತಡಕ್ಕೆ ಗುರಿಯಾದವು. ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿ ತೋರಿಬಂದದ್ದು ಮತ್ತು ಇಂದು ಗುರುವಾರ ನವೆಂಬರ್ ತಿಂಗಳ ವಾಯಿದೆ ವಹಿವಾಟಿನ ಚುಕ್ತಾ ನಡೆಯಲಿಕ್ಕಿರುವುದು ಮುಂಬಯಿ ಶೇರು ಕುಸಿತಕ್ಕೆ ಕಾರಣವಾಯಿತು. ಸೆನ್ಸೆಕ್ಸ್ ಕಳೆದೆರಡು ದಿನಗಳ ವಹಿವಾಟಿನಲ್ಲಿ 121.68 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಡಾಲರ್ ಎದುರು ರೂಪಾಯಿ ಇಂದು 14 ಪೈಸೆಯಷ್ಟು ಕುಸಿದದ್ದು ಕೂಡ ಮುಂಬಯಿ ಶೇರು ಮಾರುಕಟ್ಟೆಗೆ ಅಪಥ್ಯ ಎನಿಸಿತು.
ಇಂದು ಗುರುವಾರ ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ 238.36 ಅಂಕಗಳ ನಷ್ಟದೊಂದಿಗೆ 33,364.40 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 70.60 ಅಂಕಗಳ ನಷ್ಟದೊಂದಿಗೆ 10,290.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಸ್‌ಬಿಐ, ಟಾಟಾ ಮೋಟರ್, ಎಕ್ಸಿಸ್ ಬ್ಯಾಂಕ್, ರಿಲಯನ್ಸ್ ಮತ್ತು ಎಚ್ ಡಿ ಎಫ್ ಸಿ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.