ಮುಂಬಯಿ : ನಿರಂತರ ನಾಲ್ಕನೇ ದಿನವೂ ಇಂದು ಗುರುವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ತನ್ನ ಏರು ಗತಿಯನ್ನು ಕಾಯ್ದುಕೊಂಡಿತಾದರೂ ಅಲ್ಪ ಗಳಿಕೆಗೆ ತೃಪ್ತಿ ಪಟ್ಟಿತು. ವಹಿವಾಟುದಾರರಿಂದ ನಡೆದ ಲಾಭ ನಗದೀಕರಣವೇ ಇದಕ್ಕೆ ಕಾರಣವಾಯಿತು.
ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 150 ಅಂಕಗಳ ಏರಿಕೆಯನ್ನು ದಾಖಲಿಸಿದ್ದ ಸೆನ್ಸೆಕ್ಸ್ ದಿನದ ವಹಿವಾಟನ್ನು 2.72 ಅಂಕಗಳ ಅಲ್ಪ ಏರಿಕೆಯೊಂದಿಗೆ 37,754.89 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 1.55 ಅಂಕಗಳ ಅಲ್ಪ ಏರಿಕೆಗೆ ತೃಪ್ತಿ ಪಟ್ಟು ದಿನದ ವಹಿವಾಟನ್ನು 11,343.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಡಾಲರ್ ಎದುರು ರೂಪಾಯಿ ಕೂಡ ಇಂದು ಅಲ್ಪ ಏರಿಕೆಗೆ ತೃಪ್ತಿ ಪಟ್ಟು 69.51 ರೂ. ಮಟ್ಟಕ್ಕೆ ಸೀಮಿತಗೊಂಡಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,861 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,236 ಶೇರುಗಳು ಮುನ್ನಡೆ ಸಾಧಿಸಿದವು; 1,480 ಶೇರುಗಳು ಹಿನ್ನಡೆಗೆ ಗುರಿಯಾದವು; 145 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.