ಮುಂಬೈ: ಅಮೆರಿಕದ ಫೆಡರಲ್ ರಿಸರ್ವ್ ಫೆಡ್ (ಬಡ್ಡಿ) ದರವನ್ನು ಇಳಿಕೆ ಮಾಡಿದ ನಂತರ ಜಾಗತಿಕ ಷೇರುಪೇಟೆ ವಹಿವಾಟು ಧನಾತ್ಮಕವಾಗಿದ್ದು, ಶುಕ್ರವಾರ (ಸೆ.20) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 900ಕ್ಕೂ ಅಧಿಕ ಅಂಕಗಳ ಜಿಗಿತದೊಂದಿಗೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆ*ಕ್ಸ್ 915.64 ಅಂಕ ಏರಿಕೆಯಾಗಿದ್ದು, 84,100.44 ಅಂಕಗಳ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ವಹಿವಾಟು ಮುಂದುವರಿದಿದೆ. ಎನ್ ಎಸ್ ಇ ನಿಫ್ಟಿ ಕೂಡಾ 270 ಅಂಕ ಜಿಗಿತದೊಂದಿಗೆ 25,685.80 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಷೇರುಪೇಟೆ ಸೂಚ್ಯಂಕ, ನಿಫ್ಟಿ ಏರಿಕೆಯಿಂದ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ಈಚರ್ ಮೋಟಾರ್ಸ್ ಲಿಮಿಟೆಡ್, ಬೋಶ್ಚ್ ಲಿಮಿಟೆಡ್, ಹೀರೋ ಮೋಟೊಕಾರ್ಪ್ ಲಿಮಿಟೆಡ್ ಷೇರುಗಳು ಲಾಭಗಳಿಸಿದೆ. ಐಸಿಐಸಿಐ, ಎಚ್ ಡಿಎಫ್ ಸಿ, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಷೇರು ಲಾಭ ಗಳಿಸಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರ (ಸೆ.19) 236.57 ಅಂಕಗಳ ಏರಿಕೆಯೊಂದಿಗೆ 83,184.80 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು. ನಿಫ್ಟಿ 38.25 ಅಂಕಗಳ ಜಿಗಿತದೊಂದಿಗೆ 25,415.80 ಅಂಕಗಳ ಮಟ್ಟ ತಲುಪಿತ್ತು.