ನವದೆಹಲಿ: ದೇಶಾದ್ಯಂತ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು, ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದು, ಗುರುವಾರ (ಡಿಸೆಂಬರ್ 30) ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ ಅಲ್ಪ ಪ್ರಮಾಣದ ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಕಾಂಗ್ರೆಸ್ ಗೆ 25 ವರ್ಷ ಆದ್ಮೇಲೆ ಗಂಡು ಮಗು ಹುಟ್ಟಿದ ಸಂಭ್ರಮ: ಈಶ್ವರಪ್ಪ ವ್ಯಂಗ್ಯ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 12.17 ಅಂಕಗಳ ಅಲ್ಪ ಪ್ರಮಾಣದ ಕುಸಿತದೊಂದಿಗೆ 57,794.32 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 9.55 ಅಂಕಗಳಷ್ಟು ಇಳಿಕೆಯಾಗಿದ್ದು, 17,203.95 ಅಂಕಗಳ ಮಟ್ಟಕ್ಕೆ ತಲುಪಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಮಾರುತಿ, ಬಜಾಜ್ ಫೈನಾನ್ಸ್, ಸನ್ ಫಾರ್ಮಾ ಮತ್ತು ಎಸ್ ಬಿಐ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಎನ್ ಟಿಪಿಸಿ, ಎಚ್ ಸಿಎಲ್ ಟೆಕ್, ಇಂಡಸ್ ಇಂಡ್ ಬ್ಯಾಂಕ್, ಟೈಟಾನ್, ವಿಪ್ರೋ ಮತ್ತು ಡಾ.ರೆಡ್ಡೀಸ್ ಷೇರುಗಳು ಲಾಭಗಳಿಸಿದೆ.
ಜಾಗತಿಕವಾಗಿ ಶಾಂಘೈ ಮತ್ತು ಹಾಂಗ್ ಕಾಂಗ್ ಷೇರುಪೇಟೆಯ ಸೆನ್ಸೆಕ್ಸ್ ಏರಿಕೆಯೊಂದಿಗೆ ವಹಿವಾಟು ನಡೆಸಿದ್ದು, ಸಿಯೋಲ್ ಮತ್ತು ಟೋಕಿಯೋ ಷೇರುಪೇಟೆಯ ಸೆನ್ಸೆಕ್ಸ್ ಇಳಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.