Advertisement

ಸ್ಟಾಕ್‌ ಮಾರ್ಕೆಟ್‌ FOR DUMMIES

10:26 AM Aug 13, 2019 | Sriram |

ನಿಮ್ಮ ಬಳಿ ಉಳಿತಾಯದ ಹಣವಿದ್ದರೆ ಮತ್ತು ಸದ್ಯದಲ್ಲಿ ನಿಮಗೆ ಅದರ ಅವಶ್ಯಕತೆ ಇಲ್ಲದಿದ್ದರೆ ಮಾತ್ರ ಶೇರು ಮಾರುಕಟ್ಟೆ ಪ್ರವೇಶಿಸಿ. ಸಾಲ ಮಾಡಿ ಹೂಡಿಕೆ ಮಾಡಿದರೆ ಅದು ಹೂಡಿಕೆ ಹೇಗಾದೀತು? ಶೇರು ಮಾರುಕಟ್ಟೆಯಲ್ಲಿನ ಹೂಡಿಕೆ ಸಾಮಾನ್ಯವಾಗಿ ದೀರ್ಘಾವಧಿಯದ್ದು. ಇಂದು, ಹೂಡಿಕೆ ಮಾಡಿ ನಾಳೆಯೋ ಅಥವಾ ವಾರದಲ್ಲೋ ಮಾರಿ ಹಣ ಮಾಡಬೇಕೆನ್ನುವ ಮನಸ್ಥಿತಿಯಿಂದ ಮಾರುಕಟ್ಟೆ ಪ್ರವೇಶಿಸಬೇಡಿ.

Advertisement

ಬಹಳ ಹಿಂದೆ, ವರ್ತಕರು ತಮ್ಮ ಹಣದಿಂದ ವ್ಯಾಪಾರ ಮಾಡುತ್ತಿದ್ದರು. ಒಂದು ಪ್ರದೇಶದಲ್ಲಿ ಹೆಚ್ಚಾಗಿ ಮತ್ತು ಕಡಿಮೆ ಬೆಲೆಗೆ ಸಿಗುತ್ತಿದ್ದ ವಸ್ತುವನ್ನು ಅದು ಹೆಚ್ಚಾಗಿ ಸಿಗದಿದ್ದ ಪ್ರದೇಶಕ್ಕೆ ಹೆಚ್ಚಿನ ಬೆಲೆಯಲ್ಲಿ ಮಾರುತ್ತಿದ್ದರು. ಇದು ಬಹಳಷ್ಟು ವರ್ಷ ನಡೆಯಿತು. ಕೆಲವೊಮ್ಮೆ ವರ್ತಕರಿಗೆ ತಮ್ಮ ಬಳಿ ಇರುವ ಹಣಕ್ಕಿಂತ ಬಹಳಷ್ಟು ಹೆಚ್ಚಿನ ಮೊತ್ತ ಬೇಕಾಗುತ್ತಿತ್ತು. ಈ ಹಣಕ್ಕೆ ತಮ್ಮ ಪ್ರದೇಶದ ಸಾಹುಕಾರನ ಬಳಿ ಕೈಯೊಡ್ಡಬೇಕಾಗುತ್ತಿತ್ತು. ಆತನ ಮನಸ್ಥಿತಿ ಮೇಲೆ ವರ್ತಕರ ಬೇಕು ಬೇಡ ಪೂರೈಕೆಯಾ­ಗುತ್ತಿತ್ತು. ಇನ್ನೂ ಹೆಚ್ಚಿನ ಹಣ ಬೇಕೆನಿಸಿದರೆ, ಈ ವರ್ತಕರು ರಾಜನನ್ನು ಆಶ್ರಯಿಸಬೇಕಾಗುತ್ತಿತ್ತು. ಇಲ್ಲಿಯೂ ರಾಜನ ಸಮ್ಮತಿ ಅಥವಾ ಅಸಮ್ಮತಿ ವರ್ತಕರ ಹಣೆಬರಹ ನಿರ್ಧರಿಸುತ್ತಿತ್ತು. ಹೀಗೆ, ಸಾಹುಕಾರನಿಂದ ಅಥವಾ ರಾಜನಿಂದ ಹಣವಿಲ್ಲ ಎನಿಸಿಕೊಂಡು ಬರಿಗೈಲಿ ಹಿಂದಿರುಗಿದ, ಆದರೆ ಸೋಲೊಪ್ಪಲು ಸಿದ್ಧವಿಲ್ಲದ ವರ್ತಕರು ತಮ್ಮ ವ್ಯಾಪಾರದಲ್ಲಿ ನಂಬಿಕೆಯಿಟ್ಟ ಹಲವು ಸಮಾನ­ಮನಸ್ಕ ಸಹವರ್ತಕರು ಅಥವಾ ಬಂಧುಗಳ ಬಳಿ ಸಾಧ್ಯವಾದಷ್ಟು ಹಣವನ್ನು ಕೇಳಿ ಪಡೆದು, ತಮ್ಮ ಕಾರ್ಯಸಾಧನೆಯಾದ ನಂತರ, ಮೂಲ ಹಣದ ಜೊತೆಗೆ ಲಾಭದ ಒಂದಷ್ಟು ಅಂಶವನ್ನು ಅವರಿಗೆ ನೀಡುತ್ತಿದ್ದರು. ಅದೇ ಸ್ಟಾಕ್‌ ಎಕ್ಸ್‌ಚೇಂಜ್‌, ಶೇರುಪೇಟೆಯ ಹುಟ್ಟಿಗೆ ನಾಂದಿಯಾಯಿತು. ಇಂಥ ಕ್ರಿಯೆಗೆ ‘ಟ್ರೇಡಿಂಗ್‌’ ಎಂದು ಕರೆಯುತ್ತಾರೆ.

ಸ್ಟಾಕ್‌ ಮಾರುಕಟ್ಟೆ ಕಲ್ಪನೆಯ ಹರಿಕಾರ
ಕ್ರಿಸ್ತಶಕ 1400-1500ರಲ್ಲೇ ಬೆಲ್ಜಿಯಂ ನಲ್ಲಿ ಈ ರೀತಿಯ ಹೂಡಿಕೆ ನಡೆಯುತ್ತಿತ್ತು. ಇದು ಮುಕ್ಕಾಲು ಪಾಲು ಇಂದಿನ ಶೇರು ಮಾರುಕಟ್ಟೆಯನ್ನೇ ಹೋಲುತ್ತಿತ್ತು. ಬಹು ಮುಖ್ಯ ವ್ಯತ್ಯಾಸವೆಂದರೆ, ಇದನ್ನು ಕೊಂಡ ಜನ ಇನ್ನೊಬ್ಬರಿಗೆ ಮಾರುತ್ತಿರಲಿಲ್ಲ. ಕೊನೆಯ ವರೆಗೂ ಅದು ಅವರ ಬಳಿಯೇ ಇರುತ್ತಿತ್ತು. ಅಂದರೆ, ಶೇರು ಮಾರುವಿಕೆ- ಕೊಳ್ಳುವಿಕೆ ಒಂದು ಸಲದ ಕ್ರಿಯೆಯಾಗಿತ್ತು. ಟ್ರೇಡಿಂಗ್‌ ಅಲ್ಲಿರಲಿಲ್ಲ .

ಅಧಿಕೃತವಾಗಿ ತೆರೆದಿದ್ದು ಡಚ್ಚರು
1602ರಲ್ಲಿ ಡಚ್ ಈಸ್ಟ್‌ ಇಂಡಿಯಾ ಕಂಪನಿ ಪ್ರಥಮ ಬಾರಿಗೆ ಹೀಗೊಂದು ಮುದ್ರಿತ ಮುಚ್ಚಳಿಕೆ ಹೊರಡಿಸಿತ್ತು. ‘ಡಚ್ ಈಸ್ಟ್‌ ಇಂಡಿಯಾ ಕಂಪನಿಯಲ್ಲಿ ಹಣ ಹೂಡಿದರೆ ಇಂತಿಷ್ಟು ಅವಧಿಯ ನಂತರ ಮೂಲ ಹಣದ ಜೊತೆಗೆ ಹೆಚ್ಚುವರಿಯಾಗಿ ಸ್ವಲ್ಪ ಹಣವನ್ನು ನೀಡಲಾಗುತ್ತದೆ. ಅದು ಲಾಭದ ಸ್ವಲ್ಪ ಅಂಶ. ಅಂದರೆ, ನೀವು ಕೇವಲ ಹೂಡಿಕೆದಾರರಲ್ಲ. ಡಚ್ ಈಸ್ಟ್‌ ಇಂಡಿಯಾ ಕಂಪನಿಗೆ ನೀವು ಹೂಡಿದ ಹಣದ ಭಾಗದ ಮಾಲೀಕರು ಅಥವಾ ಪಾಲುದಾರರು ಎನ್ನುವ ಹೊಸ ಅರ್ಥವನ್ನು ಜನರ ಮುಂದೆ ಇಟ್ಟಿತ್ತು. ತಮ್ಮ ಹಣವನ್ನು ಬಡ್ಡಿಗೆ ಅಥವಾ ಹೆಚ್ಚಿನ ಹಣ ಗಳಿಸುವ ಆಶಯದಿಂದ ಸಾಲದ ರೂಪದಲ್ಲಿ ನೀಡುತ್ತಿದ್ದ ಜನರಿಗೆ, ತಾವು ಕಂಪನಿಯ ಭಾಗ ಎಂದು ಅನ್ನಿಸುತ್ತಿರಲಿಲ್ಲ. ಈ ಹೊಸ ವ್ಯಾಖ್ಯೆಯಿಂದ ಜನರ ಮನಸ್ಸಿನಲ್ಲಿ ‘ತಾವು ಈಸ್ಟ್‌ಇಂಡಿಯಾ ಕಂಪನಿಯ ಮಾಲೀಕ/ ಪಾಲುದಾರ’ ಎನ್ನುವ ಭಾವನೆ ಉಂಟಾಯಿತು. ಆಮ್‌ಸ್ಟರ್‌ಡ್ಯಾಮ್‌ ಸ್ಟಾಕ್‌ ಎಕ್ಸ್‌ಚೇಂಜ್‌, ಯಶಸ್ಸು ಕಂಡ ತಕ್ಷಣ, ಇದನ್ನು ಇಂಗ್ಲೆಂಡ್‌, ಫ್ರಾನ್ಸ್, ಬೆಲ್ಜಿಯಂ ಮತ್ತು ನೆದರ್‌ಲೆಂಡ್‌ ದೇಶಗಳು ತಮ್ಮದಾಗಿಸಿಕೊಂಡವು.

ಭಾರತದಲ್ಲಿ ಷೇರು ಮಾರುಕಟ್ಟೆ
9 ಜುಲೈ 1875ರಲ್ಲಿ ಮುಂಬೈನ ದಲಾಲ್ ಸ್ಟ್ರೀಟ್‌ನಲ್ಲಿ ಶುರುವಾದ ‘ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌’ ಭಾರತದ ಮೊದಲ ಶೇರು ಮಾರುಕಟ್ಟೆ. ಇಂದಿಗೂ ಇಂದು BSE ಹೆಸರಿನಿಂದ ಕಾರ್ಯ ನಿರ್ವಹಿಸುತ್ತಿದೆ. 1992ರಲ್ಲಿ ನ್ಯಾಷನಲ್ ಸ್ಟಾಕ್‌ ಎಕ್ಸ್‌ಚೇಂಜ್‌ ಸಂಸ್ಥೆ ಕಾರ್ಯ ಶುರು ಮಾಡಿತ್ತು. ಜಗತ್ತಿನ ಇತರ ಸ್ಟಾಕ್‌ ಎಕ್ಸ್‌ಚೇಂಜ್‌ ಕಾರ್ಯ ನಿರ್ವಹಿಸುವ ರೀತಿಯಲ್ಲಿ ಇದು ಕೂಡ ಕಾರ್ಯ ನಿರ್ವಹಿಸುವ ಕ್ಷಮತೆ ಹೊಂದಿದೆ. ಶೇರು ವ್ಯವಹಾರದಲ್ಲಿ ತೊಡಗುವವರು ಮೊದಲು ಯಾವುದೇ ಬ್ಯಾಂಕಿನಲ್ಲಿ ಉಳಿತಾಯ ಖಾತೆಯ ಜೊತೆಗೆ ಡಿಮ್ಯಾಟ್ ಅಕೌಂಟ್ ಅನ್ನು ತೆರೆಯಬೇಕು. ಈ ಡಿಮ್ಯಾಟ್ ಖಾತೆಯ ಮೂಲಕ ಷೇರುಗಳ ಕೊಡು- ಕೊಳ್ಳುವಿಕೆಯನ್ನು ಯಾರು ಬೇಕಾದರೂ ಮಾಡಬಹುದಾಗಿದೆ. ಈ ಖಾತೆಯನ್ನು ತೆಗೆಯುವುದು ಕೂಡ ಅತ್ಯಂತ ಸುಲಭದ ಕೆಲಸ. ಇದನ್ನು ಸಬ್‌ ಬ್ರೋಕರ್‌ಗಳ(ಶೇರ್‌ ಖಾನ್‌, ಮೋತಿಲಾಲ್ ಇತ್ಯಾದಿ ಸಂಸ್ಥೆಗಳು…) ಮೂಲಕವೂ ತೆಗೆಯಬಹದು . ಈ ಖಾತೆಯಿಲ್ಲದೆ ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸಲು ಸಾಧ್ಯವಿಲ್ಲ.

Advertisement

ಷೇರು ಮಾರುಕಟ್ಟೆ ಪ್ರವೇಶಿಸುವ ಮುನ್ನ…
– ನಿಮ್ಮ ಬಳಿ ಉಳಿತಾಯದ ಹಣವಿದ್ದರೆ ಮತ್ತು ಸದ್ಯದಲ್ಲಿ ನಿಮಗೆ ಅದರ ಅವಶ್ಯಕತೆ ಇಲ್ಲದಿದ್ದರೆ ಮಾತ್ರ ಶೇರು ಮಾರುಕಟ್ಟೆ ಪ್ರವೇಶಿಸಿ. ಸಾಲ ಮಾಡಿ ಹೂಡಿಕೆ ಮಾಡಿದರೆ ಅದು ಹೂಡಿಕೆ ಹೇಗಾದೀತು?
– ಶೇರು ಮಾರುಕಟ್ಟೆಯಲ್ಲಿನ ಹೂಡಿಕೆ ಸಾಮಾನ್ಯವಾಗಿ ದೀರ್ಘಾವಧಿಯದ್ದು. ಇಂದು, ಹೂಡಿಕೆ ಮಾಡಿ ನಾಳೆಯೋ ಅಥವಾ ವಾರದಲ್ಲೋ ಮಾರಿ ಹಣ ಮಾಡಬೇಕೆನ್ನುವ ಮನಸ್ಥಿತಿಯಿಂದ ಮಾರುಕಟ್ಟೆ ಪ್ರವೇಶಿಸಬೇಡಿ.
– ವೇಳೆ ಎನ್ನುವುದು ಬಹಳ ಮುಖ್ಯ. ಆದರೆ ಇದೇ ಸರಿಯಾದ ವೇಳೆ ಎಂದು ನಿರ್ಧರಿಸುವರು ಯಾರು? ಇದಕ್ಕೆ ಅಂಥ ಯಾವುದೇ ಫಾರ್ಮುಲಾ ಇಲ್ಲ. ಇಲ್ಲಿ ಕೆಲಸ ಮಾಡಬೇಕಿರುವುದು ನಿಮ್ಮ ಸಾಮಾನ್ಯ ಜ್ಞಾನ.
-ನೀವು ಕೊಳ್ಳಬೇಕಿರುವ ಶೇರಿನ ಕಂಪನಿಯ ಅಧ್ಯಯನ ಮಾಡಬೇಕು. ಎಲ್ಲಕ್ಕೂ ಮುಖ್ಯ ಕಂಪನಿ ತೊಡಗಿಸಿಕೊಂಡಿರುವ ಕಾರ್ಯ ಮುಂಬರುವ ದಿನಗಳಲ್ಲಿ ಪ್ರಸ್ತುತವಾಗುತ್ತದೆಯೇ ಎನ್ನುವುದನ್ನು ಮುಖ್ಯವಾಗಿ ತಿಳಿದಿರಲೇಬೇಕು.
– ಎಷ್ಟೆಲ್ಲಾ ವೈಜ್ಞಾನಿಕವಾಗಿ ವಿಶ್ಲೇಷಿಸಿಕೊಂಡರೂ ಕೆಲವೊಮ್ಮೆ ಹೂಡಿದ ಹಣ ಮರಳಿ ಬರದೆ ಹೋಗಬಹದು. ಇದೊಂಥರ ಬಿಝಿನೆಸ್‌ ಮಾಡಿದಂತೆಯೇ. ಆದರೆ, ಕೊಳ್ಳುವ ಮೊದಲು ಕಂಪನಿಯ ಆಡಳಿತ ಮಂಡಳಿಯ ಸ್ಥೂಲ ಪರಿಚಯ ನಿಮಗಿರಬೇಕು. ಪ್ರಮೋಟರ್, ಇನ್ನೂ ಅದೇ ಕಂಪನಿಯಲ್ಲಿ ಉಳಿದುಕೊಂಡಿದ್ದಾರಾ ಅಥವಾ ಪ್ರಮೋಟರ್ ಹೋಗಿ ಅಲ್ಲಿಗೆ ಬಂದಿರುವ ಜನರೆಲ್ಲಾ ಹೊಸಬರಾ ಎಂಬುದನ್ನು ಚೆಕ್‌ ಮಾಡಿ. ಪ್ರಮೋಟರ್ ತಾವು ಹುಟ್ಟು ಹಾಕಿದ ಕಂಪನಿಯಲ್ಲಿ ಧೀರ್ಘಾವಧಿ ಉಳಿದುಕೊಂಡರೆ ಅದು ಶುಭ ಸಂಕೇತ.
– ಶೇರು ಮಾರುಕಟ್ಟೆ ಮನುಷ್ಯನ ಸೆಂಟಿಮೆಂಟ್‌ ಮೇಲೂ ನಿಂತಿದೆ. ಹೆಚ್ಚಿನವರು ಎಲ್ಲೋ ಏನೋ ಆದರೆ, ಶೇರು ಕುಸಿತಗೊಳ್ಳುವ ಭಯದಿಂದ ಮಾರುತ್ತಾರೆ. ಇದು ಸರಿಯಲ್ಲ.
– ನೀವು ಕೊಳ್ಳುವ ಮತ್ತು ಮಾರುವ ಕ್ರಿಯೆಯ ಮೇಲೆ ಒಂದಷ್ಟು ಅಂಶವನ್ನು ನಿಮಗೆ ಸೇವೆ ನೀಡುವ ಸಂಸ್ಥೆ ಕಮಿಷನ್‌ ರೂಪದಲ್ಲಿ ಪಡೆಯುತ್ತದೆ ಇದು ಎಷ್ಟು? ಬೇರೆಯ ಕಂಪನಿಗಳು ಎಷ್ಟು ಚಾರ್ಜ್‌ ಮಾಡುತ್ತಿವೆ ಎಂಬುದು ತಿಳಿದಿರಲಿ. ಗಳಿಕೆಯ ಮೇಲೆ ತೆರಿಗೆ ಕೂಡ ಇರುತ್ತದೆ. ಇವೆಲ್ಲಾ ಕಳೆದು ಉಳಿದದ್ದೇನು? ನೀವು ತೆಗೆದು ಕೊಳ್ಳುತ್ತಿರುವ ರಿಸ್ಕ್ ಅದಕ್ಕೆ ಸರಿಯಾಗಿದೆಯಾ ಎಂಬುದನ್ನು ಅರಿತುಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next