ಮುಂಬೈ: ಜಾಗತಿಕ ವಿದ್ಯಮಾನಗಳ ನಡುವೆ ಮಂಗಳವಾರ (ಸೆ.24) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆ*ಕ್ಸ್ ಆರಂಭಿಕ ವಹಿವಾಟಿನಲ್ಲಿ ಭಾರೀ ಏರಿಕೆಯೊಂದಿಗೆ ಮೊದಲ ಬಾರಿಗೆ ಸಾರ್ವಕಾಲಿಕ ದಾಖಲೆಯ 85,000 ಅಂಕಗಳ ಮಟ್ಟ ತಲುಪಿದೆ.
ಎನ್ ಎಸ್ ಇ (NSE) ನಿಫ್ಟಿ ಕೂಡ ದಾಖಲೆಯ 26,000 ಅಂಕಗಳ ಸನಿಹಕ್ಕೆ ತಲುಪಿದೆ. ನಾಲ್ಕು ದಿನಗಳ ಹಿಂದಷ್ಟೇ ಸಂವೇದಿ ಸೂಚ್ಯಂಕ ದಾಖಲೆಯ 84,000 ಅಂಕಗಳ ಗಡಿ ದಾಟಿತ್ತು. ಸೆಪ್ಟೆಂಬರ್ 12ರಂದು 83,000 ಅಂಕಗಳ ಗಡಿ ದಾಟಿತ್ತು. ಆಗಸ್ಟ್ 1ರಂದು 82, 000 ಅಂಕ ದಾಟಿತ್ತು. ಇದೀಗ 12 ವಾರಗಳೊಳಗೆ ಸಾರ್ವಕಾಲಿಕ ದಾಖಲೆಯ 85,000 ಅಂಕಗಳ ಗಡಿ ಮುಟ್ಟಿದೆ.
ಷೇರು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ಲಾಭವಾಗಿದೆ. ಟಾಟಾ ಸ್ಟೀಲ್, ಜೆಎಸ್ ಡಬ್ಲ್ಯು ಸ್ಟೀಲ್ ಮತ್ತು ಪವರ್ ಗ್ರಿಡ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್, ಬಜಾಜ್ ಫೈನಾನ್ಸ್ ಷೇರುಗಳು ಕುಸಿತ ಕಂಡಿದೆ.
ಮಧ್ಯಾಹ್ನ 12ಗಂಟೆ ವೇಳೆಗೆ ಷೇರುಪೇಟೆ ಸಂವೇದಿ ಸೂಚ್ಯಂಕ 90.05 ಅಂಕಗಳ ಇಳಿಕೆಯೊಂದಿಗೆ 84,838.43 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ನಿಫ್ಟಿಯೂ ಅಲ್ಪ ಇಳಿಕೆಯೊಂದಿಗೆ ವಹಿವಾಟು ನಡೆಸಿದೆ.