ಮಂಗಳೂರು: ಸಮಾಜವು ತ್ವರಿತ ಗತಿಯಲ್ಲಿ ಬದಲಾವಣೆಗೊಳ್ಳುತ್ತಿದ್ದು, ಭವಿಷ್ಯತ್ತಿನ ಹೊಸ ಸವಾಲುಗಳನ್ನು ಎದುರಿಸಲು ಯುವಜನರು ಸಿದ್ಧರಾಗಬೇಕು ಎಂದು ಸಾಮಾಜಿಕ ಚಿಂತಕ ಹಾಗೂ ಕಾರ್ಪೊರೇಟ್ ಸಲಹೆಗಾರ ಟಿ.ವಿ. ಮೋಹನ್‌ದಾಸ್ ಪೈ ಹೇಳಿದರು.
ವಿಶ್ವ ಕೊಂಕಣಿ ಕೇಂದ್ರ ಪ್ರವರ್ತಿತ ವಿದ್ಯಾರ್ಥಿವೇತನ ನಿಧಿಯ ಫಲಾನುಭವಿಗಳಿಂದ ಸ್ಥಾಪನೆಯಾದ ವಿಶ್ವ ಕೊಂಕಣಿ ಅಲ್ಯುಮ್ನಿ ಅಸೋಸಿಯೇಶನ್ ಸœಳೀಯ ವಿದ್ಯಾರ್ಥಿಗಳು ಮತ್ತು ಯುವಜನರಿಗಾಗಿ ನಗರದ ಟಿ.ವಿ. ರಮಣ್ ಪೈ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ “ಪ್ರೇರಣಾ’ ಸಮಾವೇಶದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಜಾಗತೀಕರಣ ವಿರೋಧಿ ನಿಲುವು ಕಂಡು ಬರುತ್ತಿದ್ದು, ಅಮೆರಿಕ, ಬ್ರಿಟನ್ ಮತ್ತಿತರ ದೇಶಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ. ಇದರ ಜತೆಗೆ ಅಟೊಮೇಶನ್ ಮತ್ತು ರೋಬೊಟ್ ತಂತ್ರಜ್ಞಾನದ ಅನ್ವಯಿಸುವಿಕೆ ವ್ಯಾಪಕವಾಗಿ ನಡೆಯುತ್ತಿದೆ. ಇವೆಲ್ಲದರ ಪರಿಣಾಮವಾಗಿ ನಮ್ಮ ಯುವಜನರಿಗೆ ದೇಶದಲ್ಲಿ ಮತ್ತು ವಿದೇಶಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ ಎಂದು ವಿವರಿಸಿದ ಅವರು, ನಮ್ಮ ಯುವಕರು ತಮ್ಮ ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳಬೇಕಾದರೆ ಸ್ನಾತಕೋತ್ತರ ಪದವಿ
ಮತ್ತು ಪಿಎಚ್‌ಡಿಯಂತಹ ಉನ್ನತ ಶಿಕ್ಷಣ, ಪಠ್ಯ ಪುಸ್ತಕ ಹೊರತಾದ ಜ್ಞಾನ ಸಂಪಾದನೆ, ಆಧುನಿಕ ತಂತ್ರಜ್ಞಾನದ ತಿಳುವಳಿಕೆ, ಸಂವಹನ ಕೌಶಲ, ಸಮಸ್ಯೆ ಪರಿಹರಿಸುವ ಕೌಶಲ, ಆತ್ಮ ವಿಶ್ವಾಸ, ಪರಿಶ್ರಮ, ಅರ್ಪಣಾ ಮನೋಭಾವದ ಸೇವೆ ಇತ್ಯಾದಿ ಗುಣಗಳನ್ನು ಮೈಗೂಡಿಸಿಕೊಳ್ಳ ಬೇಕೆಂದು ಕರೆ ನೀಡಿದರು.
ಉನ್ನತ ಶಿಕ್ಷಣವನ್ನು ವಿದೇಶದಲ್ಲಿ ಪಡೆದರೆ ಉತ್ತಮ ಉದ್ಯೋಗಾವಕಾಶ ಹೊಂದಲು ಅವಕಾಶವಿದೆ. ಅಮೆರಿಕದಲ್ಲಿ ಉನ್ನತ ಶಿಕ್ಷಣ ತುಸು ದುಬಾರಿ. ಐರೋಪ್ಯ ದೇಶಗಳಲ್ಲಿ ಶಿಕ್ಷಣ ಶುಲ್ಕ ಕಡಿಮೆ ಎಂದು ವಿವರಿಸಿದರು. ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಬ್ರಿ| ಸಿ.ಎಂ.ಎಫ್. ಪ್ರಭು ಕಾರ್ಯಕ್ರಮವನ್ನು ಉದ್ಘಾಟಿಸಿದರು. “ನಾನು ಮಿಲಿಟರಿ ಕುಟುಂಬದಲ್ಲಿ ಹುಟ್ಟಿದವನು. ನನ್ನ ಅಜ್ಜ ಮತ್ತು ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಸೈನ್ಯಕ್ಕೆ ಸೇರುವಾಗ ಹೆಚ್ಚು ಓದಿರಲಿಲ್ಲ. ಆದರೆ ಸೇರ್ಪಡೆಗೊಂಡ ಬಳಿಕ ಬಹಳಷ್ಟು ಕಲಿತಿದ್ದೇನೆ. ಯಾವುದೇ ಕ್ಷೇತ್ರದಲ್ಲಿ ಕಠಿಣ ದುಡಿಮೆ ಅತ್ಯಗತ್ಯ;ಪರಿಶ್ರಮವು ನಮಗೆ ಪ್ರತಿಫಲವನ್ನು ಒದಗಿಸುತ್ತದೆ. ಮನೋಸ್ಥೈರ್ಯವು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಸ್ವೀಕೃತ ಮನೋಭಾವ, ಸ್ವಯಂ ಶಿಸ್ತು, ಪ್ರಾಮಾಣಿಕತೆ ಮತ್ತು ಕೌಶಲಗಳು ಯಶಸ್ಸಿಗೆ ಸೋಪಾನ’ ಎಂದು ಅವರು ತಮ್ಮ ಅನುಭವವನ್ನು ವಿವರಿಸಿದರು.
ಸಿಎನ್‌ಬಿಸಿ ಟಿವಿ 18ರ ಸಂಪಾದಕಿ ಸೋನಿಯಾ ಶೆಣೈ, ಐಎಫ್‌ಎಂಆರ್ ಕ್ಯಾಪಿಟಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕ್ಷಮಾ ಫೆರ್ನಾಂಸ್, ಕೊಕೋ ಕೋಲಾ ಸಂಸ್ಥೆಯ ಇಂಡಿಯಾ ಮತ್ತು ಸೌತ್ ವೆಸ್ಟ್ ಏಶಿಯಾ ವಿಭಾಗದ ಅಧ್ಯಕ್ಷ ವೆಂಕಟೇಶ್ ಕಿಣಿ, ಹೊಸ ದಿಲ್ಲಿಯ ಭರೋಸಾ ಕ್ಲಬ್‌ನ ಸ್ಥಾಪಕ ಪ್ರಕಾಶ್ ಪೈ, ಮಂಗಳೂರಿನ ಎ.ಜೆ. ಆಸ್ಪತ್ರೆಯ ಯುರಾಲಜಿ ವಿಭಾಗದ ಮುಖ್ಯಸ್ಥ ಡಾ| ಸುನಿಲ್ ಶೆಣೈ, ಇಂಡೊಕೊ ರೆಮಿಡೀಸ್ ಕಂಪೆನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಬಾಂಬೋಲ್ಕರ್ ಅವರು ತಮ್ಮ ಬದುಕಿನ ಅನುಭವಗಳನ್ನು ಯುವಜನರಿಗೆ ವಿವರಿಸಿದರು. ವಿಶ್ವ ಕೊಂಕಣಿ ಅಲ್ಯುಮ್ನಿ ಅಸೋಸಿಯೇಶನ್‌ನ ಅಧ್ಯಕ್ಷ ದಿನೇಶ್ ಕೆ. ಪೈ ಸ್ವಾಗತಿಸಿದರು. ಮಿಜಿ ಅಧ್ಯಕ್ಷರಾದ ಲೆನಿಟಾ ಮಿನೇಜಸ್, ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ. ಪ್ರದೀಪ್ ಜಿ. ಪೈ, ಸಂದೀಪ್ ಶೆಣೈ, ವೆಂಕಟೇಶ ಬಾಳಿಗಾ, ಗಿರಿಧರ್ ಕಾಮತ್, ಯೋಗೇಂದ್ರ ಪ್ರಭು, ಕೆ.ಬಿ. ಖಾರ್ವಿ, ಗುರುದತ್ ಬಾಳಿಗಾ ಬಂಟ್ವಾಳ್‌ಕರ್ ಮುಂತಾದವರು ಉಪಸ್ಥಿತರಿದ್ದರು. ವೈಭವ್ ಡಿ’ಸೋಜಾ ಮತ್ತು ನವಮಿ ಆರ್. ಕಿಣಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಮಹಾತ್ಮಾ ಗಾಂಧಿ ನನಗೆ ಪ್ರೇರಣೆ
ಮಹಾತ್ಮಾ ಗಾಂಧಿ ಅವರ ಬದುಕು ನನಗೆ ಸ್ಫೂರ್ತಿ ನೀಡಿದೆ. ನಾಯಕತ್ವ ಗುಣಕ್ಕೆ ಅವರು ಉತ್ತಮ ಉದಾಹರಣೆ. 3 ದಶ ಲಕ್ಷ ಜನರು ಮಹಾತ್ಮಾ ಗಾಂಧಿ ಅವರ ಕರೆಗೆ ಓಗೊಟ್ಟಿದ್ದರು. ಸತ್ಯ ಹಾಗೂ ಸರಳ ಜೀವನ ಮತ್ತು ಅಹಿಂಸಾ ತಣ್ತೀದ ಕಾರ್ಯತಂತ್ರದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡುವ ಧೈರ್ಯ ಪ್ರದರ್ಶಿಸಿದ್ದರು ಎಂದು ಟಿ.ವಿ. ಮೋಹನ್‌ದಾಸ್ ಪೈ ಹೇಳಿದರು.