ಔರಾದ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮನೆ ಹಾಗೂ ವಾರ್ಡ್‌ಗಳಲ್ಲಿ ಸ್ವತ್ಛತೆ ಕಾಪಾಡುವಂತೆ ಅರಿವು ಮೂಡಿಸುವ ಆರೋಗ್ಯ ಇಲಾಖೆ ಅಧಿಕಾರಿಗಳ ಕಚೇರಿ ಹಾಗೂ ಆಸ್ಪತ್ರೆ ಸುತ್ತಮುತ್ತಲು ಅಸ್ವತ್ಛತೆಯಿಂದ ಕೂಡಿದೆ.
ಇದು ಔರಾದ ತಾಲೂಕು ಕೇಂದ್ರ ಸ್ಥಾನದಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿರುವ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಪಕ್ಕದ ಮೂತ್ರ ವಿಸರ್ಜನೆ ಸ್ಥಳದ ದುಸ್ಥಿತಿ.
ತಾಲೂಕು ಕೇಂದ್ರ ಸ್ಥಾನದಲ್ಲಿ ಸರ್ಕಾರ ಉತ್ತಮ ರೀತಿಯಲ್ಲಿ ಕಟ್ಟದ ನಿರ್ಮಿಸಿದೆ. ಆಸ್ಪತ್ರೆಗೆ ಪ್ರತಿಯೊಂದು ರೋಗಿಗಳಿಗೆ ವೈದ್ಯರು ಸರಿಯಾದ ರೀತಿಯಲ್ಲಿ ನಿತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಆಸ್ಪತ್ರೆ ಸುತ್ತಲು ಅಸ್ವತ್ಛತೆಯಿಂದ ಕೂಡಿದೆ. ಮೂತ್ರ ವಿಸರ್ಜನೆ ಕಟ್ಟಡದಲ್ಲಿ ಮರದ ಎಲೆಗಳು ಬಿದ್ದು ಕೊಳೆತು ದುರ್ನಾತ ಬೀರುತ್ತಿದೆ.
ಎರಡು ವರ್ಷಗಳ ಹಿಂದೆ ಮೂತ್ರ ವಿಸರ್ಜನೆ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಿಸಿದ ದಿನದಿಂದ ಇಂದಿನವರೆಗೂ ಒಮ್ಮೆಯೂ ಸ್ವತ್ಛತೆ ಮಾಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಪ್ರತಿಯೊಬ್ಬರು ಮನೆ ಸೇರಿದಂತೆ ಬಡಾವಣೆಯಲ್ಲಿ ಸ್ವತ್ಛತೆ ಕಾಪಾಡಿಕೊಳ್ಳುವ ಮೂಲಕ ರೋಗ ಮುಕ್ತ ಜೀವನ ಸಾಗಿಸಲು ಮುಂದಾಗಬೇಕು ಎಂದು ಸಲಹೆ ನೀಡುವ ಆರೋಗ್ಯ ಅಧಿಕಾರಿಗಳ ಕಚೇರಿ ಹಿಂಭಾಗದಲ್ಲಿಯೇ ದುರ್ನಾತ ಬಿರುತ್ತಿದ್ದರೂ ಸ್ವತ್ಛತೆಗೆ ಕ್ರಮ ತೆಗೆದುಕೊಳ್ಳಲು ಆಸ್ಪತ್ರೆ ಅಧಿಕಾರಿಗಳು ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂತ್ರ ವಿಸರ್ಜನೆ ಸ್ಥಳ ದುರ್ನಾತ ಬಿರುತ್ತಿದೆ. ಆರೋಗ್ಯ ಅಧಿಕಾರಿಗಳು ಸ್ವತ್ಛತೆ ಮಾಡಿ ಸಾರ್ವಜನಿಕರಲ್ಲಿ ಎದುರಾಗಿರುವ ಸಾಂಕ್ರಾಮಿಕ ರೋಗದ ಭಯ ದೂರ ಮಾಡಲು ಮುಂದಾಗಬೇಕು.
ಮಹೇಶ ಏಂಡೆ, ಸ್ಥಳೀಯ ನಿವಾಸಿ.
ಆಸ್ಪತ್ರೆ ಹಿಂಭಾಗದಲ್ಲಿರುವ ಮೂತ್ರ ವಿಸರ್ಜನೆ ಕಟ್ಟಡವನ್ನು ನಾಳೆಯೇ ಸ್ವತ್ಛ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡುತ್ತೇನೆ. ಇದು ನಮ್ಮ ಗಮನಕ್ಕೂ ಬಂದಿಲ್ಲ. ನಾನೂ ಅಸ್ವತ್ಛವಾಗದಂತೆ ನೋಡಿಕೊಳ್ಳುತ್ತೇನೆ.
ಡಾ| ಕಲ್ಲಪ್ಪ ಮಜಿಗೆ, ತಾಲೂಕು ಆರೋಗ್ಯಾಧಿಕಾರಿ ಔರಾದ
ರವೀಂದ್ರ ಮುಕ್ತೇದಾರ