Advertisement

ಇನ್ನೂ ಮುಕ್ತಿ ಕಾಣದ ಪೊಲೀಸ್‌ ಸಮಸ್ಯೆಗಳು

06:00 AM Sep 07, 2018 | |

ಬೆಂಗಳೂರು: ಹಿರಿಯ ಅಧಿಕಾರಿಗಳಿಂದ ನಿಂದನೆ, ಕಡ್ಡಾಯ ವಾರದ ರಜೆ ನೀಡಲು ಮೀನ-ಮೇಷ, ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಇನ್ನೂ ಸಿಗದ ಪ್ರತ್ಯೇಕ ಶೌಚಾಲಯ… ಈ ರೀತಿಯ ಸಾಲು ಸಾಲು ಸಮಸ್ಯೆಗಳಿಂದ ಕೆಳಹಂತದ ಸಿಬ್ಬಂದಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.

Advertisement

ಕಳೆದ ಎರಡು ವರ್ಷಗಳ ಹಿಂದೆ ಮೂಲ ಸೌಕರ್ಯಗಳು ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಕೆಳಹಂತದ ಸಿಬ್ಬಂದಿಯಿಂದ ರಾಜ್ಯಾದ್ಯಂತ ಎದ್ದಿದ್ದ ಪ್ರತಿಭಟನೆಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದ ನಿಕಟಪೂರ್ವ ಕಾಂಗ್ರೆಸ್‌ ಸರ್ಕಾರ, ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ನೀಡಿದ್ದ ಭರವಸೆ ಹುಸಿಯಾಗಿದೆ. ಸಮ್ಮಿಶ್ರ ಸರ್ಕಾರ ಅವಧಿಯಲ್ಲೂ, ಗೃಹ ಸಚಿವರಾಗಿ ಅಧಿಕಾರದಲ್ಲಿರುವ ಜಿ.ಪರಮೇಶ್ವರ್‌ ಅವಧಿಯಲ್ಲೇ ಮತ್ತೆ ಪೊಲೀಸ್‌ ಸಿಬ್ಬಂದಿ ಸಮಸ್ಯೆಗಳು ಮುಂದುವರಿದಿವೆ. ಕೆಳಹಂತದ ಸಿಬ್ಬಂದಿಯ ಕೌನ್ಸೆಲಿಂಗ್‌ ವೇಳೆ ಈ ವಿಚಾರ ಬಯಲಾಗಿದೆ. ತಾವು ಅನುಭವಿಸುತ್ತಿರುವ ಸಾಲು ಸಾಲು ಸಮಸ್ಯೆಗಳ ಬಗ್ಗೆ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ಹಿರಿಯ ಅಧಿಕಾರಿಗಳು ಸಾರ್ವಜನಿಕರ ಎದುರಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಜತೆಗೆ ಕಡ್ಡಾಯ ವಾರದ ರಜೆ ನೀಡಲು ಮೀನ-ಮೇಷ ಎಣಿಸುತ್ತಾರೆ. ಆರೋಪಗಳು ಬಂದಾಗ ಮಾಹಿತಿ ಪಡೆಯದೇ ಅಮಾನತಿಗೆ ಶಿಫಾರಸು ಮಾಡುತ್ತಾರೆ. ಕರ್ತವ್ಯ ಹಂಚಿಕೆಯಲ್ಲೂ ತಾರತಮ್ಯ ಮಾಡುತ್ತಿದ್ದು, ಇದರಿಂದ ಮಾನಸಿಕವಾಗಿ ತೊಂದರೆ, ಕುಟುಂಬ ಸದಸ್ಯರೂ ಘಾಸಿ ಅನುಭವಿಸುವಂತಾಗಿದೆ ಎಂದು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ.

ಜತೆಗೆ, ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಠಾಣೆಗಳಲ್ಲಿ ಪ್ರತ್ಯೇಕ ಶೌಚಾಲಯ ಇಲ್ಲದೆ ಕಿರಿ-ಕಿರಿ ಅನುಭವಿಸುವಂತಾಗಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್ಎಸ್‌ಎಲ್‌ ತಜ್ಞರನ್ನು ಭೇಟಿ ಮಾಡಿದ ಸಂಧರ್ಭಗಳಲ್ಲಿ ಅತ್ಯಂತ ಕೀಳಾಗಿ ಕಾಣುತ್ತಾರೆ. ಆರೋಪಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ದಾಗ ಅಲ್ಲಿನ ವೈದ್ಯಾಧಿಕಾರಿಗಳು ವಿನಾಕಾರಣ ನಿಂದಿಸುತ್ತಾರೆ. ಯೂನಿಫಾರಂ, ಸೆಲ್ಯೂಟ್‌ ವಿಚಾರವಾಗಿಯೂ ದೂರುವುದಾಗಿ ಬೆದರಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಗೃಹ ಸಚಿವರೇ ಟೀಕೆಗೆ ಗುರಿಯಾಗಿದ್ದರು
ಸೆ.4ರಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಬೆಂಗಳೂರು ನಗರ ಪ್ರದಕ್ಷಿಣೆ ವೇಳೆ  ಕೊಳಚೆ ಪ್ರದೇಶವೊಂದರಲ್ಲಿ ಅವರ ಬೂಟಿಗೆ ಅಂಟಿದ್ದ ಕೆಸರನ್ನು ಬೆಂಗಾವಲಿನ ಪೊಲೀಸ್‌ ಸಿಬ್ಬಂದಿಯೊಬ್ಬರು ಸ್ವಚ್ಚಗೊಳಿಸಿದ್ದರು. ಇದು ಪೊಲೀಸ್‌ ವಲಯದಲ್ಲಿ ತೀವ್ರ ಇರಿಸುಮುರಿಸು ಉಂಟುಮಾಡಿತ್ತು.

Advertisement

ಸಮನ್ವಯತೆ ಇಲ್ಲ:
ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಕೆಳಹಂತದ ಸಿಬ್ಬಂದಿ ನಡುವೆ ಸಮನ್ವಯತೆ ಮೂಡುತ್ತಿಲ್ಲ ಸಿಬ್ಬಂದಿ ಸಂಕಷ್ಟ ಆಲಿಸಿರುವ ಯೋಗ ಕ್ಷೇಮ ಅಧಿಕಾರಿಗಳು ಹೇಳು ತ್ತಾರೆ. ಅಧಿಕಾರಿಗಳ ಈ ವರ್ತನೆ ಮತ್ತು ಅಧಿಕ ಕಾರ್ಯದೊತ್ತಡದಂತಹ ಸಮಸ್ಯೆಗಳಿಂದ ಸಿಬ್ಬಂದಿ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದಾರೆ. ಇದರಿಂದ ಆತ್ಮಹತ್ಯಾ ಪ್ರವೃತ್ತಿ ಹೆಚ್ಚುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಇವುಗಳ ಪರಿಹಾರಕ್ಕಿರುವ ಮಾರ್ಗೋಪಾಯಕ್ಕೆ ವರದಿ ಸಿದ್ಧಪಡಿಸಿ ರಾಜ್ಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೆ ಕಳುಹಿಸಿಕೊಟ್ಟಿರುವ ಬಗ್ಗೆ ಉದಯವಾಣಿ|ಗೆ ಮಾಹಿತಿ ಲಭ್ಯವಾಗಿದೆ.

ಸಿಬ್ಬಂದಿ ಅಳಲು ಹಾಗೂ ಬೇಡಿಕೆಗಳೇನು? 
*ವಾರದ ರಜೆ ಸಮಸ್ಯೆ 
*ಮೇಲಾಧಿಕಾರಿಗಳಿಂದ ನಿಂದನೆ 
* 12 ಗಂಟೆ ಅವಧಿಯ ಕರ್ತವ್ಯವನ್ನು 8 ಗಂಟೆಗೆ ಇಳಿಸಿ 
* ಒಂದು ರೈನ್‌ ಕೋಟ್‌, 4 ಜತೆ ಸಮವಸ್ತ್ರ, ಎರಡು ಜತೆ ಶೂ, ಎರಡು ಲಾಠಿ
*ಬೈಕ್‌ ಹೊಂದಿದ ಸಿಬ್ಬಂದಿಗೆ  ಪೆಟ್ರೋಲ್‌ ಕಾರ್ಡ್‌  ನೀಡಿ 
* ಬೆಂಗಾವಲು ಆರೋಪಿಗಳಿಗೆ ಪ್ರಥಮ ಆದ್ಯತೆ ನೀಡಲು ನ್ಯಾಯಾಲಯಗಳಿಗೆ ಮನವಿ ಮಾಡಿ 
* ಮಕ್ಕಳ ಮದುವೆಗೆ ಹೆಚ್ಚುವರಿ ರಜೆ ನೀಡಿ 
* ಕ್ಯಾಂಟೀನ್‌ ಊಟ ರಿಯಾಯಿತಿ ಹೆಚ್ಚಿಸಿ 
* ಬಟ್ಟೆ ಹೊಲಿಗೆ ವೆಚ್ಚ 500 ರೂಗಳಿಂದ 1200ರೂ ಹೆಚ್ಚಿಸಬೇಕು. 
*ಒಂದು ದಿನದ 1000 ರೂ. ನೀಡಿ ರಜಾದಿನದ ಸಂಭಾವನೆ 
*ಮಹಿಳಾ ಸಿಬ್ಬಂದಿಗೆ ಇನ್ನೂ ಸಿಕ್ಕಿಲ್ಲ ಶೌಚಾಲಯ ವ್ಯವಸ್ಥೆ
*50 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಕವಾಯತು ವಿನಾಯಿತಿ.

– ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next