ತುಮಕೂರು: ಶೈಕ್ಷಣಿಕ ನಗರದಲ್ಲಿ ಇನ್ನು ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧ ಮಾಡಬೇಕೆಂದು ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಅಂಗಡಿಗಳಲ್ಲಿ ಶೇಖರಿಸಿಟ್ಟಿರುವ ಲೋಡುಗಟ್ಟಲೆ ಪ್ಲಾಸ್ಟಿಕ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡು ದಂಡ ಹಾಕುತ್ತಿದ್ದಾರೆ. ಇನ್ನು ಮುಂದೆ ನಾಗರಿಕರು ಪ್ಲಾಸ್ಟಿಕ್ ಕೈ ಚೀಲ ಹಿಡಿದು ಹೋಗುತ್ತಿದ್ದರೆ ಅವರಿಗೂ ದಂಡ ವಿಧಿಸುವ ಸಾಧ್ಯತೆ ಇದೆ.
ಎಚ್ಚರಿಕೆಯೂ ಕಡೆಗಣನೆ: ನಗರದ ಯಾವುದೇ ಅಂಗಡಿಯಲ್ಲೂ ಪ್ಲಾಸ್ಟಿಕ್ ಬಳಕೆ ಮಾಡಬಾರದು, ಪ್ಲಾಸ್ಟಿಕ್ ಮಾರಾಟ ಮಾಡಬಾರದು ಎಂದು ಹಲ ವಾರು ಬಾರಿ ವರ್ತಕರಿಗೆ ಎಚ್ಚರಿಕೆ ನೀಡಲಾಗಿದೆ. ಹಲವಾರು ಅಂಗಡಿ, ಹೋಟೆಲ್, ಬೇಕರಿಗಳ ಮೇಲೆ ದಾಳಿ ಮಾಡಿ ಸಾವಿರಾರು ಕ್ವಿಂಟಲ್ ಪ್ಲಾಸ್ಟಿಕ್ ವಶ ಪಡಿಸಿಕೊಂಡು ದಂಡ ವಿಧಿಸಲಾಗಿದೆ. ಆದರೂ ವರ್ತಕರೂ ಹಾಗೂ ನಾಗರಿಕರು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಇನ್ನು ನಿಲ್ಲಿಸಿಲ್ಲ.
ತುಮಕೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಮುಂದಾಗಿರುವ ತುಮಕೂರು ಮಹಾ ನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ನಗರದಲ್ಲಿ ಅಧಿಕಾರಿಗಳೊಂದಿಗೆ ಅಂಗಡಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ಲಾಸ್ಟಿಕ್ ಇದ್ದರೆ ಮಾಲೀಕರ ಅವರ ಮೇಲೆ ದಂಡ ವಿಧಿಸುವುದು ಮುಂದುವರೆದಿದೆ.
ಪ್ರಯೋಜನವಾಗದ ಜಾಗೃತಿ: ತುಮಕೂರು ನಗರವನ್ನು ಸುಂದರ ನಗರವನ್ನಾಗಿ ಮಾಡಲು ಮೊದಲು ಕಸಮುಕ್ತ ನಗರ ಮಾಡ ಬೇಕು. ನಗರದಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಆಟೋಗಳಿಗೆ ಕಸ ಹಾಕಿ ಎಂದು ಮಹಾ ನಗರ ಪಾಲಿಕೆ ಅಧಿಕಾರಿಗಳು ಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ ಸದಸ್ಯರು ವಾರ್ಡ್‌ಗಳಲ್ಲಿ ಜಾಗೃತಿ ಮೂಡಿಸು ತ್ತಿದ್ದರೂ ಜನರು ಮಾತ್ರ ಇವೆಲ್ಲವನ್ನೂ ಕಿವಿಗೆ ಹಾಕದೇ ರಸ್ತೆಗಳಲ್ಲಿ ಕಸ ಎಸೆದು ಹೋಗು ತ್ತಿರುವುದು ನಿಂತಿಲ್ಲ.
50 ಸಾವಿರ ರೂ. ದಂಡ: ನಗರದ ಮಂಡಿಪೇಟೆಯ ವಿವಿಧ ಸ್ಟೋರ್‌ಗಳಿಗೆ ಭೇಟಿ ನೀಡಿದಾಗ ಒಂದೂವರೆ ಟನ್ ಪ್ಲಾಸ್ಟಿಕ್ ಇದ್ದಿದ್ದು ಕಂಡು ಬಂದು ಎಲ್ಲಾ ಪ್ಲಾಸ್ಟಿಕ್ ವಶ ಪಡಿಸಿಕೊಂಡು ಪ್ಲಾಸಿಕ್ ಸ್ಟಾಕ್ ಮಾಡಿದ್ದ ಅಂಗಡಿ ಮಾಲೀಕರಿಗೆ 50 ಸಾವಿರ ರೂ. ದಂಡವನ್ನು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್, ಪರಿಸರ ಅಭಿಯಂತರರಾದ ಮೋಹನ್, ಕೃಷ್ಣಮೂರ್ತಿ ವಿಧಿಸಿ ಜಾಗೃತಿ ಮೂಡಿಸಿದ್ದಾರೆ.
● ಚಿ.ನಿ.ಪುರುಷೋತ್ತಮ್