Advertisement

ಇನ್ನೂ ನಡುಕ ಹುಟ್ಟಿಸುತ್ತಿದೆ ದಂಡುಪಾಳ್ಯ ಗ್ಯಾಂಗ್‌ ಕ್ರೌರ್ಯ

12:22 PM Jul 07, 2017 | Team Udayavani |

ಹುಬ್ಬಳ್ಳಿ: ಹದಿನಾರು ವರ್ಷಗಳ ಹಿಂದೆ ನಗರದಲ್ಲಿ ಹಣಕ್ಕಾಗಿ ನಡೆದಿದ್ದ ವೃದ್ಧರೊಬ್ಬರ ಹತ್ಯೆ ಬೆನ್ನಲ್ಲೇ ಮೂರು – ನಾಲ್ಕು ತಿಂಗಳ ಅವಧಿಯಲ್ಲಿ ಮತ್ತೆ ಮೂರು ವೃದ್ಧರ ಹತ್ಯೆ – ದರೋಡೆ ಪ್ರಕರಣಗಳೂ ವರದಿಯಾಗಿ ಹುಬ್ಬಳ್ಳಿಯ ಜನರನ್ನು ನಡುಗಿಸಿದ್ದವು. 

Advertisement

ಮಲ್ಲಿಕಾರ್ಜುನ ಡೇಕಣಿ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ದಂಡುಪಾಳ್ಯ ಗ್ಯಾಂಗಿನ ಮೂವರು ಸದಸ್ಯರು ಇದೀಗ ಹೈಕೋರ್ಟ್‌ನಿಂದ ಖುಲಾಸೆಯಾಗಿದ್ದಾರೆ. ಆದರೆ, ಆ ಅವಧಿಯಲ್ಲಿ ದಂಡುಪಾಳ್ಯ ಗ್ಯಾಂಗ್‌ ಹುಬ್ಬಳ್ಳಿಯಲ್ಲಿ ಸಕ್ರಿಯವಾಗಿತ್ತು. 

ಅಂಗಡಿ ಹಾಗೂ ಮನೆಗಳಲ್ಲಿ ಒಬ್ಬಂಟಿಯಾಗಿ ವಾಸಿಸುವ ಶ್ರೀಮಂತ ವೃದ್ಧರನ್ನೇ ಗುರಿಯಾಗಿಸಿಕೊಂಡು ಗ್ಯಾಂಗ್‌ ದಾಳಿ ಮಾಡುತ್ತಿತ್ತಲ್ಲದೆ,  ವೃದ್ಧರನ್ನು ಹತ್ಯೆಗೈದು ಹಣ-ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿತ್ತು. ಡೇಕಣಿ ಹತ್ಯೆ ಬಳಿಕವೂ ಹುಬ್ಬಳ್ಳಿಯಲ್ಲಿ ಇದೇ ಮಾದರಿಯ ಮೂರು ಕೊಲೆ- ದರೋಡೆಗಳು ನಡೆದಿದ್ದು, ಇವು ದಂಡುಪಾಳ್ಯ ಗ್ಯಾಂಗ್‌ನ ಕೃತ್ಯಗಳೇ ಆಗಿರಬೇಕು ಎಂಬುದು ಪೊಲೀಸ್‌ ಮೂಲಗಳ ಅಭಿಪ್ರಾಯ.  

ಹತ್ಯೆಗಳ ಸರಣಿ: ಫೆಬ್ರವರಿ 19, 2000ರಂದು ರಾತ್ರಿ ಮಹಿಳೆಯೂ ಇದ್ದ ದಂಡು ಪಾಳ್ಯ ಗ್ಯಾಂಗ್‌ನ ನಾಲ್ವರ ತಂಡ ಕೊಯಿನ್‌ ರಸ್ತೆಯ ಅಂಗಡಿಯಲ್ಲಿ ಮಲಗಿದ್ದ ಮಲ್ಲಿಕಾರ್ಜುನ ಎಸ್‌. ಡೇಕಣಿ (75) ಅವರ ಮುಖಕ್ಕೆ ಆಯುಧದಿಂದ ಬಲವಾಗಿ ಹೊಡೆದು ಗಾಯಗೊಳಿಸಿತ್ತು. ಕಿಸೆಯಲ್ಲಿದ್ದ 400 ರೂ. ನಗದು ದೋಚಿತ್ತು. 

ಗಂಭೀರವಾಗಿ ಗಾಯಗೊಂಡಿದ್ದ ಡೇಕಣಿ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಪಡೆದ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಹರ ಠಾಣೆ ಪೊಲೀಸರು ದಂಡು ಪಾಳ್ಯ ಗ್ಯಾಂಗ್‌ನ ನಾಲ್ವರ ವಿರುದ್ಧ ನಗರದ ನ್ಯಾಯಾಲಯದಲ್ಲಿ 2001ರ ಜುಲೈನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

Advertisement

ಈ ಘಟನೆ ನಡೆದ 2-3 ತಿಂಗಳ ಅವಧಿಯಲ್ಲಿ ದಂಡುಪಾಳ್ಯ ಗ್ಯಾಂಗ್‌ನ ತಂಡ ನಗರದ ದುರ್ಗದ ಬಯಲು ನಿವಾಸಿ ಡಾ| ಜೋಶಿ ಅವರ ಮನೆಗೆ ನುಗ್ಗಿ, ವೈದ್ಯ ಹಾಗೂ ಪುಣೆಯಿಂದ ಬಂದಿದ್ದ ಅವರ ಸಹೋದರಲ ಕೈ-ಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟಿಕ್‌ ಟೇಪ್‌ ಸುತ್ತಿ ಕೊಲೆ ಮಾಡಿ, ಹಣ ದೋಚಿ ಪರಾರಿಯಾಗಿತ್ತು.

ವೈದ್ಯರ ಮಗ ಎರಡು-ಮೂರು ದಿನ ಕಳೆದು ಮನೆಗೆ ಬಂದಾಗಲೇ ಜೋಡಿ ಕೊಲೆ ಬೆಳಕಿಗೆ ಬಂದಿತ್ತು. ಇದಲ್ಲದೆ ಈ ಅವಧಿಯಲ್ಲಿ ನಡೆದ ಇನ್ನೂ ಒಂದು ಹತ್ಯೆಯಲ್ಲಿ ದಂಡುಪಾಳ್ಯ ಗ್ಯಾಂಗಿನ ಕೈವಾಡವಿತ್ತೆಂದು ಪೊಲೀಸರು ಶಂಕಿಸಿದ್ದರು.  

ಬಾಯಿ ಬಿಟ್ಟಿದ್ದರು: ರಾಜ್ಯದ ಹಲವೆಡೆ ನಡೆದ ಕೊಲೆ-ದರೋಡೆ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ದಂಡುಪಾಳ್ಯ ಗ್ಯಾಂಗಿನವರನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಹುಬ್ಬಳ್ಳಿ ಸೇರಿದಂತೆ ಇತರೆಡೆ ತಾವು ದುಷ್ಕೃತ್ಯ ನಡೆಸಿದ್ದಾಗಿ ಬಾಯಿ ಬಿಟ್ಟಿದ್ದರು. ಆಗಲೇ ಹುಬ್ಬಳ್ಳಿಯಲ್ಲಿ ನಡೆದಿದ್ದ ನಾಲ್ಕು ಕೊಲೆಗಳ ವಿಚಾರ ಬೆಳಕಿಗೆ ಬಂದಿತ್ತು. ದರೋಡೆಗೆ ಬಂದಾಗ ಮನೆಯಲ್ಲಿದ್ದವರನ್ನು ನಿಷ್ಕರುಣೆಯಿಂದ ಕೊಲೆ ಮಾಡುತ್ತಿತ್ತು ಎಂಬುದು ಪೊಲೀಸರ ಹೇಳಿಕೆ. 

Advertisement

Udayavani is now on Telegram. Click here to join our channel and stay updated with the latest news.

Next