ಬೆಳಗಾವಿ: ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್‌ದಿಂದ ಇದುವರೆಗೆ ಯಾವುದೇ ಹೆಸರನ್ನು ಶಿಫಾರಸು ಮಾಡಿಲ್ಲ. ಚರ್ಚೆಗಳು ಮಾತ್ರ ಆಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಭ್ಯರ್ಥಿಯ ಹೆಸರು ಅಂತಿಮಗೊಳಿಸುವ ಸಂಬಂಧ ಶನಿವಾರ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಅಲ್ಲಿ ಐದಾರು ಹೆಸರುಗಳು ಚರ್ಚೆಗೆ ಬಂದವು. ಆದರೆ ಇದುವರೆಗೆ ಪಕ್ಷದ ಹೈಕಮಾಂಡಿಗೆ ಯಾರ ಹೆಸರನ್ನೂ ಶಿಫಾರಸು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ತಮ್ಮ ಹೆಸರೂ ಸಹ ಪ್ರಸ್ತಾಪವಾಗಿದೆ. ಆದರೆ ವೈಯಕ್ತಿಕವಾಗಿ ನನಗೆ ಆಸಕ್ತಿ ಇಲ್ಲ. ಇದರಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು. ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಸಹ ಬೆಳಗಾವಿಯಿಂದ ಸ್ಪರ್ಧೆ ಮಾಡಲು ಟಿಕೆಟ್ ಕೇಳಿದ್ದಾರೆ. ಅವರ ಹೆಸರನ್ನು ಇನ್ನೂ ಶಿಫಾರಸು ಮಾಡಲು ಪರಿಗಣಿಸಿಲ್ಲ. ಈ ಸಂಬಂಧ ನಾಳೆ ಹುಬ್ಬಳ್ಳಿಯಲ್ಲಿ ಮತ್ತೂಂದು ಸಭೆ ನಡೆಯಲಿದ್ದು ಅಲ್ಲಿ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ:ಉನ್ನತ ಕಮಿಟಿಯಿಂದ ಮೂರುಸಾವಿರ ಮಠ ಹಾಳು
ತಮ್ಮ ಪುತ್ರ ಇನ್ನೂ ರಾಜಕೀಯ ಪ್ರವೇಶ ಮಾಡಿಲ್ಲ. ಅವರಿಗೆ ಮೊದಲು ಸಾಮಾಜಿಕ ಕಾರ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ರಾಜಕೀಯ ಕಲಿಯುವುದು ಬಹಳ ಸುಲಭ. ಆದರೆ ಸಾಮಾಜಿಕ ಸೇವೆಯ ಅನುಭವ ಬಹಳ ಮುಖ್ಯ. ಮುಂದೆ ಅವರೇ ನಮ್ಮ ಬಾವುಟ ಹಿಡಿದುಕೊಂಡು ಹೋಗಬೇಕಿರುವುದರಿಂದ ಎಲ್ಲ ರೀತಿಯ ತರಬೇತಿ ನೀಡಲಾಗುತ್ತಿದೆ ಎಂದರು.