Advertisement

ಉಡುಪಿಯಲ್ಲಿ ಈಗಲೂ ಓಡಾಡುತ್ತಿದೆ, ವಾಜಪೇಯಿ ಪ್ರಯಾಣಿಸಿದ ಕಾರು

12:28 AM Feb 04, 2020 | Sriram |

ಉಡುಪಿ: ಈ ಕಾರು ರಸ್ತೆಯಲ್ಲಿ ಓಡಾಡುತ್ತಿದ್ದರೆ ಎಲ್ಲರಿಗೂ ಕುತೂಹಲ. ಸುಮಾರು 40 ವರ್ಷ ಹಳೆಯ ಈ ಕಾರು ಹಳೆಯದು ಎಂಬ ಕಾರಣಕ್ಕೆ ಜನರನ್ನು ಆಕರ್ಷಿಸುವುದಷ್ಟೇ ಅಲ್ಲ, ದೇಶದ ಪ್ರಧಾನಿಯಾಗಿ ಖ್ಯಾತರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿಯವರು ಓಡಾಡಿದ್ದ ಕಾರು ಎಂಬ ಹೆಸರೂ ಇದಕ್ಕಿದ್ದು ಗಮನಸೆಳೆಯುತ್ತದೆ.

Advertisement

ಟೊಯೊಟಾ ತಯಾರಿಕೆ
ಆ ಕಾಲದಲ್ಲಿ ಅತ್ಯಂತ ಐಷಾರಾಮಿ ಕಾರು ಎಂಬ ಹೆಸರು ಈ ಕಾರಿಗಿತ್ತು. ಜಪಾನ್‌ನ ಟೊಯೊಟಾ ಕಂಪೆನಿ ಕ್ರೌನ್‌ ಸೂಪರ್‌ ಸೆಲೂನ್‌ ಹೆಸರಿನ ಕಾರು ತಯಾರಿಸಿದ್ದು 1971ರಲ್ಲಿ ಮೊದಲ ಬಾರಿಗೆ ಈ ಕಾರನ್ನು ಬಿಡುಗಡೆ ಮಾಡಿತ್ತು. 1973ರಲ್ಲಿ ಇದರ ಸುಧಾರಿತ ಆವೃತ್ತಿ ಹೊರಬಂದಿತ್ತು.

ಮಾಲಕರು ಯಾರು?
ಕಿನ್ನಿಮೂಲ್ಕಿಯ ರಾಕಿ ಡಯಾಸ್‌ ಇದರ ಮಾಲೀಕರು. 1980ರಲ್ಲಿ ಅಬುದಾಬಿಯ ದಾಸ್‌ಲ್ಯಾಂಡ್‌ನ‌ ಬಂದರ್‌ ಒಂದರಲ್ಲಿ ಪೋರ್ಟ್‌ ಕಂಟ್ರೋಲರ್‌ ಆಗಿ ಈಸ್ಟ್‌ ಇಂಡಿಯಾ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಕಿ ಡಯಾಸ್‌ ಅವರು ಅಲ್ಲಿ ಈ ಕಾರನ್ನು ಖರೀದಿ ಮಾಡಿದ್ದರು. ಆಗಿನ ಇದರ ಬೆಲೆ 20 ಸಾವಿರ ದಿನಾರ್‌. ಬಳಿಕ ಡಯಾಸ್‌ ಅವರು ಹಡಗಿನ ಮೂಲಕ ಈ ಕಾರನ್ನು ಮಂಗಳೂರಿಗೆ ತರಿಸಿಕೊಂಡು, ಉಡುಪಿಯ ನಿವಾಸಕ್ಕೆ ತಂದಿದ್ದರು.

ಆಚಾರ್ಯರ ಮೆಚ್ಚುಗೆ ಪಡೆದ ಕಾರು
ರಾಕಿ ಡಯಾಸ್‌ ಮತ್ತು ಡಾ| ವಿ.ಎಸ್‌. ಆಚಾರ್ಯ ಅವರು ಕಾಲೇಜಿನ ಸಮಯದಿಂದಲೇ ಸ್ನೇಹಿತರಾಗಿದ್ದರು. ಈ ಕಾರಿನ ಬಗ್ಗೆ ಆಚಾರ್ಯ ಅವರು ಹೆಚ್ಚಿನ ಒಲವನ್ನು ಹೊಂದಿದ್ದರಂತೆ. ಅನೇಕ ಬಾರಿ ವಿವಿಧ ಕಡೆಗೆ ಈ ಕಾರಿನಲ್ಲಿ ಒಟ್ಟಿಗೆ ತೆರಳುತ್ತಿದ್ದ ನೆನಪಗಳನ್ನು ಡಾಯಾಸ್‌ ಅವರು ಮೆಲುಕು ಹಾಕುತ್ತಾರೆ.

ಕಾರಿನ ವಿಶೇಷತೆ
ಒಟ್ಟು ಆರು ಸಿಲಿಂಡರ್‌ ಹೊಂದಿರುವ ಈ ಕಾರು 2,800ಸಿಸಿ ಸಾಮರ್ಥ್ಯವನ್ನು ಹೊಂದಿದೆ. ಎಡಬದಿಯ ಸ್ಟೇರಿಂಗ್‌ ಹೊಂದಿರುವ ಈ ಕಾರು ಆ ಕಾಲಕ್ಕೆ ಪವರ್‌ ಸ್ಟೇರಿಂಗ್‌, ಹವಾನಿಯಂತ್ರಣ ವ್ಯವಸ್ಥೆಯನ್ನು ಹೊಂದಿತ್ತು. ರಾಜ್ಯದಲ್ಲೇ ಈ ಮಾಡೆಲ್‌ ಕಾರು ಎಲ್ಲೂ ಇಲ್ಲವಂತೆ.

Advertisement

ವಾಜಪೇಯಿಗೆ ಚಾಲಕರಾಗಿದ್ದ
ಡಾ| ಆಚಾರ್ಯ
ವಾಜಪೇಯಿ ಅವರಿಗೆ ಉಡುಪಿಗೂ ಅವಿನಾಭಾವ ಸಂಬಂಧ. 1980ರಲ್ಲಿ ಉಡುಪಿಗೆ ಬಂದಾಗ ಅವರನ್ನು ಬೆಂಗಳೂರು, ಮೈಸೂರು, ಕೇರಳ, ಮಡಿಕೇರಿ ಮೊದಲಾದ ಭಾಗಕ್ಕೆ ಸುತ್ತಾಡಿಸಲೆಂದೇ ಡಯಾಸ್‌ ಅವರಿಂದ ಆಚಾರ್ಯರು ಈ ಕಾರನ್ನು ಪಡೆದು ಸುತ್ತಾಡಿ ಬಂದಿದ್ದರು. ಆಚಾರ್ಯರೇ ಚಾಲಕರಾಗಿ ಇಷ್ಟು ಸ್ಥಳಕ್ಕೆ ಭೇಟಿಕೊಟ್ಟಿರುವುದು ವಿಶೇಷ. ಈ ಕಾರಿನ ಬಗ್ಗೆ ವಾಜಪೇಯಿ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, 2ನೇ ಬಾರಿ ಉಡುಪಿಗೆ ವಾಜಪೇಯಿ ಅವರು ಭೇಟಿ ಕೊಟ್ಟಾಗ ಡಯಾಸ್‌ ಅವರನ್ನು ಖುದ್ದಾಗಿ ಕರೆದು ಒಟ್ಟಿಗೆ ಉಪಾಹಾರ ಸ್ವೀಕರಿಸಿ ಕಾರಿನ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು.

ಉತ್ತಮ ಕಂಡೀಷನ್‌
ಈ ಕಾರು ಈಗಲು ಉತ್ತಮ ಕಂಡಿಷನ್‌ನಲ್ಲಿ ಇದೆ. ಪ್ರತಿದಿನ ಬೆಳಗ್ಗೆ ಒಮ್ಮೆ ಈ ಕಾರಿನಲ್ಲಿ ಪೇಟೆ ಸುತ್ತಿ ಬರುತ್ತೇನೆ. ಜನರು ಕೂಡ ಕಾರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹಲವು ಮಂದಿ ಈ ಕಾರನ್ನು ಖರೀದಿಸುವ ಇಚ್ಛೆ ತೋರಿದ್ದಾರೆ. ಆದರೆ ಕಾರಿನೊಂದಿಗೆ ನಮಗಿರುವ ಅವಿನಾಭಾವ ಸಂಬಂಧ ಮತ್ತು ನೆನಪುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮೇಲಾಗಿ ವಾಜಪೇಯಿ ಅವರು ಓಡಾಡಿದ ಕಾರು ಇದು. ಇದನ್ನು ಮಾರಾಟ ಮಾಡುವ ಯೋಚನೆಯೇ ಇಲ್ಲ.
-ರಾಕಿ ಡಯಾಸ್‌,
ಕಾರಿನ ಮಾಲಕರು

Advertisement

Udayavani is now on Telegram. Click here to join our channel and stay updated with the latest news.

Next