Advertisement

ಇನ್ನೂ ನನಸಾಗಿಲ್ಲ ಸ್ವಂತ ಸೂರಿನ ಕನಸು!

08:25 AM May 21, 2019 | Suhan S |

ಶೃಂಗೇರಿ: ರಾಜ್ಯದಲ್ಲಿಯೇ ಸಣ್ಣ ತಾಲೂಕಾದ ಶೃಂಗೇರಿಯಲ್ಲಿ ನಿವೇಶನ ರಹಿತರ ಸಮಸ್ಯೆ ಹೆಚ್ಚಾಗಿದೆ. ತಾಲೂಕಿನಲ್ಲಿ 9 ಗ್ರಾಪಂ ಹಾಗೂ 1 ಪಪಂನಲ್ಲಿ 3500ಕ್ಕಿಂತ ಹೆಚ್ಚು ವಸತಿ ರಹಿತರಿದ್ದು, ಎರಡು ದಶಕ ಕಳೆದರೂ ನಿವೇಶನ ನೀಡದಿರುವುದರಿಂದ ಬಡವರು ಸ್ವಂತ ಮನೆ ಹೊಂದು ಕನಸು ಕನಸಾಗಿಯೇ ಉಳಿದಿದೆ.

Advertisement

ತಾಲೂಕಿನಲ್ಲಿ 443 ಕಿ.ಮೀ. ಪ್ರದೇಶ ಹೊಂದಿದ್ದು, ಶೇ.35ರಷ್ಟು ಭಾಗ ಸಾಗುವಳಿ ಭೂಮಿ ಹಾಗೂ ಶೇ.65ರಷ್ಟು ಭಾಗ ಅರಣ್ಯ ಪ್ರದೇಶ ಹೊಂದಿದೆ. ಭೌಗೋಳಿಕವಾಗಿ ತಾಲೂಕು ದೊಡ್ಡದಾಗಿದ್ದರೂ ವಸತಿ ಸಮಸ್ಯೆ ನೀಗಿಸುವಲ್ಲಿ ಸರ್ಕಾರ ವಿಫಲವಾಗಿದೆ.

ಬಹುತೇಕ ಸೊಪ್ಪಿನಬೆಟ್ಟ ಪ್ರದೇಶವಾಗಿದ್ದು, ಇರುವ ಕಂದಾಯ ಭೂಮಿ ಈಗಾಗಲೇ ಒತ್ತುವರಿಯಾಗಿದೆ. ಇದರಿಂದ ಕಂದಾಯ ಇಲಾಖೆಗೂ ಜಾಗವಿಲ್ಲದೆ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ ಪ್ರಕಾರ 94ಸಿ ಮತ್ತು 94ಸಿಸಿ ಅಡಿ ಸುಮಾರು 13000ಕ್ಕೂ ಹೆಚ್ಚು ಜನರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ನಿವೇಶನ ರಹಿತರಿಗೆ ಸರ್ಕಾರ ಇನ್ನೂ ಹಕ್ಕುಪತ್ರ ನೀಡಿಲ್ಲ.

ಪಪಂ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಸುಮಾರು 300ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ನಾಲ್ಕು ದಶಕಗಳಿಂದ ಆರ್ಥಿಕವಾಗಿ ಹಿಂದುಳಿದವರು ಇನ್ನೂ ಬಾಡಿಗೆ ಮನೆಯಲ್ಲೇ ವಾಸವಾಗಿದ್ದಾರೆ. ಅಷ್ಟೇ ಅಲ್ಲ, ವಸತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಇನ್ನೂ ಕಾಯುತ್ತಲೇ ಇದ್ದಾರೆ.

ಈ ಹಿಂದೆ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕಂದಾಯ ಭೂಮಿಯನ್ನು ಅರಣ್ಯೀಕರಣಕ್ಕೆ ನೀಡಿತ್ತು. ಅದರಲ್ಲಿ ಅಕೇಶಿಯಾ, ಕಾಡುಜಾತಿಯ ಮರಗಳನ್ನು ಬೆಳೆಸಲಾಯಿತು. ಬಳಿಕ ಬಂದ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಒಂದು ಎಕರೆಯಲ್ಲಿ 9 ಕ್ಕೂ ಹೆಚ್ಚು ಮರಗಳಿದ್ದರೆ ದಟ್ಟಾರಣ್ಯ ಪ್ರದೇಶ ಎಂದು ಅಂಗೀಕರಿಸಲಾಗುವುದು ಎಂಬ ಆದೇಶ ನೀಡಿತ್ತು. ಈ ಆದೇಶ ಮಲೆನಾಡು ಅಭಿವೃದ್ಧಿಗೆ ತೊಡಕ್ಕಾಗಿದೆ.

Advertisement

ಮಲೆನಾಡಿನಲ್ಲಿ ವಸತಿಗೆ ನೀಡುವ ಯಾವುದೇ ಕಂದಾಯ ಜಮೀನು ಇಲ್ಲದಿರುವುದು ಹಾಗೂ ವಸತಿ ಸೌಲಭ್ಯ ನೀಡಲು ಕಷ್ಟ ಸಾಧ್ಯ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿಂದೆ ಕಂದಾಯ ಹಾಗೂ ಅರಣ್ಯ ಇಲಾಖೆ ಸಮೀಕ್ಷೆ ಮಾಡಿ ನಕ್ಷೆ ತಯಾರಿಸಿ ಮೋಜಣಿದಾರರು ಸ್ಥಳ ಗುರುತಿಸಿದ ಬಗ್ಗೆ ವರದಿ ಸಲ್ಲಿಕೆಯಾಗಿದೆ. ಆದರೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಾಗವು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿರುವುದರಿಂದ ಅರಣ್ಯೇತರ ಚಟುವಟಿಕೆಗೆ ನೀಡಲು ಸಾಧ್ಯವಿಲ್ಲ ಎಂದು ಆರ್‌ಎಫ್‌ಒ ಮೇಲಧಿಕಾರಿಗಳಿಗೆ ಪತ್ರ ಬರೆದು ಕಂದಾಯ ಇಲಾಖೆ ಗುರುತಿಸಿದ ಜಾಗವನ್ನು ಪೂರ್ವ ಸ್ಥಿತಿಗೆ ತರದೆ ವಸತಿ ಹಾಗೂ ಇತರೆ ಅಭಿವೃದ್ಧಿಗೆ ನೀಡಲು ಅವಕಾಶ ಇಲ್ಲದಿರುವುದನ್ನು ಮುಂದಿನ ಕ್ರಮಕ್ಕಾಗಿ ಪತ್ರ ಬರೆದಿದ್ದಾರೆ. ಆದರೆ ಮುಂದಿನ ಕ್ರಮ ಕೈಗೊಳ್ಳುವವರು ಯಾರು ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ.

ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ತಾಲೂಕಿನಲ್ಲಿರುವ ಬಂಜರು ಭೂಮಿ ಗುರುತಿಸುವ ಪ್ರಕ್ರಿಯೆಯಲ್ಲಿ ತೊಡಗಬೇಕು. ಇದರಿಂದ ವಸತಿ ಸಮಸ್ಯೆಗಳು ನಿವಾರಣೆಯಾಗಬಹುದು ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

•ರಮೇಶ ಕರುವಾನೆ

Advertisement

Udayavani is now on Telegram. Click here to join our channel and stay updated with the latest news.

Next