Advertisement

ನಿಷೇಧಿತ ನೋಟುಗಳ ಜಾಲ ಪತ್ತೆ

12:30 AM Jan 27, 2019 | Team Udayavani |

ಮಹಾಲಿಂಗಪುರ: ನಿಷೇಧಿತ 500 ಹಾಗೂ 1000 ಮುಖಬೆಲೆಯ ಹಳೆಯ ನೋಟು ಕೊಟ್ಟು ಹೊಸ ನೋಟು ಪಡೆಯುವ ಹೊಸ ಜಾಲ ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಶನಿವಾರ ಪತ್ತೆಯಾಗಿದೆ. 29.40 ಲಕ್ಷ ರೂ. ಹಳೆಯ ನೋಟು ಹಾಗೂ ಒಂದು ಬೊಲೆರೋ ವಾಹನ ವಶಪಡಿಸಿಕೊಂಡು, ಮಹಿಳೆ ಸೇರಿ 7 ಜನರನ್ನು ಬಂಧಿಸಲಾಗಿದೆ.

Advertisement

2018ರಲ್ಲಿ ಹಳೆಯ ನೋಟಿಗೆ ಹೊಸ ನೋಟು ಕೊಡುವ ಜಾಲ ಬಾಗಲಕೋಟೆಯಲ್ಲೇ ಪತ್ತೆಯಾಗಿತ್ತು. ಆಗ ಎಸ್ಪಿ ಕಚೇರಿಯ ಸಿಬ್ಬಂದಿಯೊಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಪ್ರಬಲ ಆರೋಪ ಕೇಳಿ ಬಂದಿತ್ತು. ಆ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿರುವಾಗಲೇ ಮಹಾಲಿಂಗಪುರದಲ್ಲಿ ‘ಹಳೆ ನೋಟಿನ ಹೊಸ ವ್ಯವಹಾರ’ದ ಬೃಹತ್‌ ಜಾಲ ಪತ್ತೆಯಾಗಿದೆ. 500 ಹಾಗೂ 1 ಸಾವಿರ ಮುಖ ಬೆಲೆಯ ಹಳೆಯ ನೋಟು ನಿಷೇಧಗೊಂಡು ಮೂರು ವರ್ಷ ಕಳೆದರೂ ಇಂದಿಗೂ ಬಂಡಲ್‌ ಲೆಕ್ಕದಲ್ಲಿ ಹಳೆಯ ನೋಟು ಪತ್ತೆಯಾಗುತ್ತಿವೆ.

ಎಷ್ಟು ನೋಟು ವಶ?: ಬಂಧಿತರಿಂದ 1 ಸಾವಿರ ಮುಖ ಬೆಲೆಯ 22250 ಹಳೆಯ ನೋಟು (22.25 ಲಕ್ಷ), 500 ಮುಖ ಬೆಲೆಯ 1430 ನೋಟು (7.15 ಲಕ್ಷ) ಹಳೆಯ ನೋಟು ವಶಪಡಿಸಿಕೊಂಡಿದ್ದು, ಈ ವ್ಯವಹಾರ ನಡೆಸಲು ಬಳಸುತ್ತಿದ್ದ ಒಂದು ಬೊಲೆರೋ ವಾಹನ ವಶಪಡಿಸಿಕೊಳ್ಳಲಾಗಿದೆ

ಏನಿದು ವ್ಯವಹಾರ?: ಮಹಾಲಿಂಗಪುರ ಪಟ್ಟಣದಲ್ಲಿ ಶನಿವಾರ ಹಳೆಯ 500 ಹಾಗೂ 1 ಸಾವಿರ ಮುಖ ಬೆಲೆಯ ನೋಟು ಜನರಿಗೆ ಕೊಟ್ಟು, ಅವರಿಂದ ಹೊಸ ನೋಟು ಪಡೆದು ವಂಚಿಸುವ ವ್ಯವಹಾರದಲ್ಲಿ ತೊಡಗಿದ್ದ ಜಮಖಂಡಿ ತಾಲೂಕು ಟಕ್ಕಳಕಿಯ ಶಾಂತಪ್ಪ ಅಣ್ಣಪ್ಪ ನಾಂದ್ರೇಕರ, ಗಣಪತಿ ಶಿವಾಜಿ ಮಂಗಸೂಳಿ, ಜಮಖಂಡಿ ನಗರದ ಕೃಷ್ಣ ಅರ್ಜುನ ಪವಾರ, ಬೆಳಗಾವಿಯ ಬಸವರಾಜ ಅಂಬ್ರಪ್ಪ ಹಡಪದ, ಗೋಕಾಕನ ಹುಸೇನಸಾಬ ಗೆ„ಬುಸಾಬ ಮಲ್ಲಾಪುರೆ, ಮಮತಾಜ ಮಸ್ತಾನ ಸಾಬ ಪಟೇಲ, ರಬಕವಿ-ಬನಹಟ್ಟಿ ತಾಲೂಕಿನ ನಾಗರಾಳದ ಸಂಗೀತಾ ದುಂಡಪ್ಪ ಅಂಟಾಲಿ ಎಂಬ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಏಳು ಜನ ಆರೋಪಿಗಳು, ಬಾಗಲಕೋಟೆ, ಬೆಳಗಾವಿ ಸೇರಿದಂತೆ ವಿವಿಧೆಡೆ ನಿಷೇಧಿತ 1 ಲಕ್ಷ ಹಳೆಯ ನೋಟು ಜನರಿಗೆ ಕೊಟ್ಟು, ಜನರಿಂದ 1 ಲಕ್ಷಕ್ಕೆ 25 ಸಾವಿರ ರೂ. ಹೊಸ ನೋಟು ಪಡೆಯುತ್ತಿದ್ದರು. ‘ನಾವು 25 ಸಾವಿರ ಹೊಸ ನೋಟಿಗೆ 1 ಲಕ್ಷ ಹಳೆಯ ನೋಟು ಕೊಡುತ್ತೇವೆ. ನೀವು, ಮುಂಬೈ- ಪುಣೆಗೆ ಇಂತಹ ವಿಳಾಸಕ್ಕೆ ಹೋದರೆ, ಅಲ್ಲಿ 1 ಲಕ್ಷ ಹಳೆಯ ನೋಟಿಗೆ 50 ಸಾವಿರ ಹೊಸ ನೋಟು ಕೊಡುತ್ತಾರೆ. ಇದರಿಂದ ನಿಮಗೆ 25 ಸಾವಿರ ಲಾಭವಾಗುತ್ತದೆ’ ಎಂದು ನಂಬಿಸಿ ವಂಚಿಸುತ್ತಿದ್ದರು ಎನ್ನಲಾಗಿದೆ.

Advertisement

ಹಳೆ ನೋಟು ಬಂದದ್ದು ಎಲ್ಲಿಂದ?
ಬಂಧಿತರೆಲ್ಲರೂ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯವರಾಗಿದ್ದಾರೆ. ಅವರ ಬಳಿ 29.40 ಲಕ್ಷ ನಿಷೇಧಿತ ನೋಟುಗಳು ಸಿಕ್ಕಿದ್ದು, ಈ ನೋಟು ಎಲ್ಲಿಂದ ಬಂದವು, ಅವರ ಹಿಂದೆ ಯಾರಿದ್ದಾರೆ, ಈ ತಂಡ ಮುಂಬೈ-ಪುಣೆಯಲ್ಲೂ ವ್ಯವಹಾರ ಮಾಡಿತ್ತಾ, ಈ ಹಿಂದೆ ಬಾಗಲಕೋಟೆ ಯಲ್ಲಿ ಕಂಡು ಬಂದಿದ್ದ ಹಳೆಯ ನೋಟಿಗೆ ಹೊಸ ನೋಟು ಜಾಲದೊಂದಿಗೆ ಇವರಿಗೆ ಸಂಪರ್ಕ ಇದೆಯೇ, ಈ ಜಾಲ ಆರ್‌ಬಿಐ ಅಧಿಕಾರಿಗಳ ಸಂಪರ್ಕ ಇದೆ ಎಂದು ಹೇಳಿಕೊಂಡು ವಂಚನೆ ವ್ಯವಹಾರ ನಡೆಸುತ್ತಿತ್ತು. ನಿಜವಾಗಿಯೂ ಆರ್‌ಬಿಐ ಅಧಿಕಾರಿಗಳು, ಈ ಜಾಲದಲ್ಲಿ ಇದ್ದಾರಾ ಎಂಬೆಲ್ಲ ಪ್ರಶ್ನೆಗೆ ಉತ್ತರ ಹುಡುಕಲು ಪೊಲೀಸರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಸಿಕ್ಕಿ ಬಿದ್ದಿದ್ದು ಹೇಗೆ?
ಏಳು ಆರೋಪಿಗಳು ಶನಿವಾರ ಮಧ್ಯಾಹ್ನ ಬ್ಯಾಂಕೊಂದರ ಬಳಿ 25 ಸಾವಿರ ಹೊಸ ನೋಟು ಪಡೆದು 1 ಲಕ್ಷ ಹಳೆಯ ನೋಟು ಕೊಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಮಹಾಲಿಂಗಪುರ ಪೊಲೀಸರು ದಾಳಿ ನಡೆಸಿದ್ದು, ಬೊಲೆರೋ ವಾಹನದಲ್ಲಿದ್ದ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಅವ ರನ್ನು ಬೆನ್ನಟ್ಟಿ ವಶಕ್ಕೆ ಪಡೆದು ವಿಚಾರಣೆಗೆ ಒಳ ಪಡಿಸಿದ್ದಾರೆ. ಆಗ ಈ ಜಾಲ ಹಳೆಯ ನೋಟು ಕೊಟ್ಟು, ಹೊಸ ನೋಟು ಪಡೆದು ಜನರಿಗೆ ವಂಚಿಸುತ್ತಿರುವುದಾಗಿ ತಪ್ಪೊಪ್ಪಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next