ಆನಂದವನ ಎಂಬ ಕಾನನವು ಬಲು ಸುಂದರವಾಗಿತ್ತು. ಅಲ್ಲಿನ ಅರಳಿ ಮರದ ಮೇಲೆ ಬಲಿಜ ಮತ್ತು ಸಮುರ ಎಂಬ ಎರಡು ಪಕ್ಷಿಗಳು ಬೇರೆ ಬೇರೆ ಗೂಡುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದವು. ಎರಡೂ ಪಕ್ಷಿಗಳು ಅನ್ಯೋನ್ಯವಾಗಿ ಜೀವಿಸುತ್ತಿದ್ದವು. ಅವೆರಡೂ ಒಟ್ಟಿಗೆ ಆಹಾರ ಹುಡುಕಲು ತೆರಳುತ್ತಿದ್ದವು. ಬಲಿಜ ಮತ್ತು ಸಮುರ ಪಕ್ಷಿ ಎರಡರ ನಡುವೆ ಒಂದು ವ ಯತ್ಯಾಸವಿತ್ತು. ಸಮುರ ಪಕ್ಷಿಗೆ ಆಹಾರವನ್ನು ಕೂಡಿಡುವ ಅಭ್ಯಾಸವಿತ್ತು. ಆದರೆ ಬಲಿಜ ಪಕ್ಷಿ ಅಂದಿನ ದಿನಕ್ಕಾಗುವಷ್ಟು ಮಾತ್ರವೇ ಆಹಾರ ತರುತ್ತಿತ್ತು. ಮುಂದೇನಾದರೂ ತುರ್ತು ಸಂದರ್ಭ ಬಂದಾಗ ಬೇಕಾಗುತ್ತದೆ ಎಂದು ಸಮುರ ಆಹಾರವನ್ನು ಸಂಗ್ರಹಿಸುತ್ತಿತ್ತು. ಆದರೆ ಬಲಿಜ ಪಕ್ಷಿ “ಉಳಿತಾಯ ಮಾಡುವ ಅವಶ್ಯಕತೆ ಏನಿದೆ. ನಮಗೆ ಯಾವಾಗ ಬೇಕಾದರೂ ಆಹಾರ ಸಿಗುತ್ತಿದೆಯಲ್ಲವಾ!’ ಎಂದು ನಕ್ಕಿತ್ತು.
ಕೆಲವು ದಿನಗಳ ನಂತರ ಮಳೆಗಾಲ ಪ್ರಾರಂಭವಾಯಿತು. ಜೋರಾಗಿ ಗಾಳಿ ಬೀಸಿದ್ದರಿಂದ ಸಮುರ ಸಂಗ್ರಹಿಸಿದ್ದ ಕಾಳು ಕಡ್ಡಿಗಳು ನೆಲಕ್ಕೆ ಚೆಲ್ಲಿ ಮಣ್ಣುಪಾಲಾದವು. ಸಮುರ ಪಕ್ಷಿಗೆ ತುಂಬಾ ನೋವಾಯಿತು. “ಛೇ, ನಾನು ಮಾಡಿದ ಶ್ರಮವೆಲ್ಲ ವ್ಯರ್ಥವಾಯಿತಲ್ಲ’ ಎಂದು ನೊಂದುಕೊಂಡಿತು. ಗಾಯದ ಮೇಲೆ ಬರೆ ಎಳೆಯುವಂತೆ ಬಲಿಜ ಪಕ್ಷಿಯು “ನನ್ನ ಮಾತನ್ನು ನೀನೆಲ್ಲಿ ಕೇಳುತ್ತೀಯಾ. ಈಗ ನೋಡು ನೀನು ಸಂಗ್ರಹಿಸಿದ್ದ ಎಲ್ಲಾ ಕಾಳುಗಳು ಮಣ್ಣು ಸೇರಿವೆ. ನಿನ್ನ ಶ್ರಮವೆಲ್ಲಾ ವ್ಯರ್ಥವಾಯಿತು’ ಎಂದು ಅಣಕಿಸಿತು. ಆದರೂ ಸಮುರ ತಾನು ಕಾಳು ಕಡ್ಡಿ ಸಂಗ್ರಹಿಸುವ ಅಭ್ಯಾಸವನ್ನು ಬಿಡಲಿಲ್ಲ.
ಕೆಲವು ದಿನಗಳ ಅಚ್ಚರಿ ಜರುಗಿತು. ಮಣ್ಣು ಸೇರಿದ್ದ ಕಾಳು ಕಡ್ಡಿಗಳೆಲ್ಲಾ ಚಿಗುರೊಡೆದು ಸಸಿಗಳಾಗಿದ್ದವು. ತಿಂಗಳುಗಳು ಕಳೆಯುತ್ತಿದ್ದಂತೆಯೇ ಅವು ಮರವಾಗಿ ಬೆಳೆದು ನಿಂತವು. ಬಿರುಗಾಳಿ ಮಳೆ ಬಂದಾಗಲೂ ಬಲಿಜ, ಸಮುರ ವಾಸವಿದ್ದ ಅರಳಿ ಮರಕ್ಕೆ ಅದು ಸೋಕಲಿಲ್ಲ. ಬೆಳೆದಿದ್ದ ಮರಗಳು ರಕ್ಷಣೆಯನ್ನು ಒದಗಿಸಿದವು. ಸಮುರ ಪಕ್ಷಿಗೆ ಇದನ್ನು ಕಂಡು ತುಂಬಾ ಸಂತೋಷವಾಯಿತು. ತನ್ನ ಶ್ರಮ ವ್ಯರ್ಥವಾಗಲಿಲ್ಲ ಎಂದುಕೊಂಡಿತು. ಬಲಿಜ ಪಕ್ಷಿಗೂ ಕೂಡಿಡುವಿಕೆಯ ಮಹತ್ವ ಅರ್ಥವಾಯಿತು. ಅದು “ಶ್ರಮಕ್ಕೆ ಯಾವತ್ತೂ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದನ್ನು ನೀನು ಸಾಬೀತು ಮಾಡಿದೆ’ ಎಂದು ಸಮುರ ಪಕ್ಷಿಯನ್ನು ಅಭಿನಂದಿಸಿತು.
– ವೆಂಕಟೇಶ ಚಾಗಿ