Advertisement

ತ್ರಿವಳಿ DCM ಗೆ ಬಿಗಿಪಟ್ಟು- ಖರ್ಗೆ ಎಚ್ಚರಿಕೆಗೂ ಬೆದರದ ಸಚಿವ ರಾಜಣ್ಣ

02:09 AM Jan 11, 2024 | Team Udayavani |

ಬೆಂಗಳೂರು: “ಮೂರು ಡಿಸಿಎಂ ಹುದ್ದೆ ಸೃಷ್ಟಿ’ ವಿಷಯವೇ ನಮ್ಮ ಮುಂದಿಲ್ಲ ಎಂದು ಸ್ವತಃ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯೇ ಹೇಳಿದ್ದಾರೆ. ಈ ಸಂಬಂಧ ಗೊಂದಲ ಅನಗತ್ಯ ಎಂದು ಕೆಲವು ಸಚಿವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಇದಕ್ಕೆ ಸಡ್ಡು ಹೊಡೆಯುವ ರೀತಿಯಲ್ಲಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ, “ಸಮುದಾಯವಾರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ’ ತಮ್ಮ ಪಟ್ಟನ್ನು ಮುಂದುವರಿಸಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲ ನೇತೃತ್ವದಲ್ಲಿ ಬುಧವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ; ಭಾಗವಹಿಸುವ ಮುನ್ನ ಅವರು ಡಿಸಿಎಂ ಹುದ್ದೆಗಾಗಿ ಆಗ್ರಹಿಸಿದ್ದಾರೆ!

Advertisement

ಸಭೆಗೂ ಮುನ್ನ ಮಾತನಾಡಿದ ಸಚಿವ ರಾಜಣ್ಣ, “ಯಾರು ಏನೇ ಹೇಳಲಿ. ಸಮುದಾಯವಾರು ಇನ್ನೂ ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎನ್ನುವ ನನ್ನ ಅನಿಸಿಕೆ ಅಥವಾ ಬೇಡಿಕೆ ಮಾತ್ರ ಸದಾ ಇರುತ್ತದೆ. ಯಾರೋ ನನ್ನಿಂದ ಹೇಳಿಸುತ್ತಿದ್ದಾರೆಂಬ ಊಹಾಪೋಹಗಳು ಬೇಡ. ಅದು ಸತ್ಯಕ್ಕೆ ದೂರವಾದುದು’ ಎಂದರು.

“ಅಷ್ಟಕ್ಕೂ ಇನ್ನೂ 3 ಉಪ ಮುಖ್ಯಮಂತ್ರಿ ಹುದ್ದೆಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರೋಧ ಇಲ್ಲ. ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂಬಂಧ ಪ್ರಸ್ತಾವ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ ಹೊರತು, ಮಾಡುವುದಿಲ್ಲ ಎಂದಿಲ್ಲ.

ಹಾಗಾಗಿ ಈ ವಿಚಾರವನ್ನು ಖರ್ಗೆ ತಳ್ಳಿಹಾಕಿಲ್ಲ. ಬದಲಿಗೆ ಈ ಸಮಯದಲ್ಲಿ ಗೊಂದಲ ಮಾಡುವುದು ಬೇಡ ಅಂದಿದ್ದಾರಷ್ಟೇ’ ಎಂದೂ ಸಮಜಾಯಿಷಿ ನೀಡಿದರು.

ಹೈಕಮಾಂಡ್‌ ನಿಮ್ಮ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದಾಗ, “ಹೈಕಮಾಂಡ್‌ ಗಂಭೀರವಾಗಿ ತೆಗೆದುಕೊಳ್ಳುವುದು ಬೇರೆ; ನಾನು ಹೇಳುವುದು ಬೇರೆ’ ಎಂದರು. ಡಿಸಿಎಂ ಪ್ರಸ್ತಾವ ಇಲ್ಲ ಎಂದು ಸುರ್ಜೇವಾಲ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, “ಅವರು ಹೇಳಿದ್ದು ಸರಿ ಇದೆ ಅಥವಾ ಸರಿ ಇಲ್ಲ ಅಂತಲೂ ಹೇಳಲಾಗದು’ ಎಂದಷ್ಟೇ ಹೇಳಿದರು.

Advertisement

20 ಕ್ಷೇತ್ರ ಗೆಲ್ಲದಿದ್ದರೆ ನಮಗೆ ಯಾವ ನೈತಿಕತೆ ಇರುತ್ತೆ?: ರಾಜಣ್ಣ
ಹಿಂದಿನ ಬಿಜೆಪಿ ಸರಕಾರದಲ್ಲಿ ಮೂವರು ಡಿಸಿಎಂ ಆಗಿದ್ದರು. ಅಷ್ಟೇ ಯಾಕೆ, ಈಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೂರು ರಾಜ್ಯಗಳಲ್ಲೂ ಬೇರೆ ಬೇರೆ ಸಮುದಾಯಗಳಿಗೆ ನ್ಯಾಯ ದೊರಕಿಸಲು ಸಮುದಾಯವಾರು ಉಪಮುಖ್ಯಮಂತ್ರಿಗಳನ್ನು ಮಾಡಿದ್ದಾರೆ. ಅದೇ ರೀತಿ, ನಮ್ಮ ರಾಜ್ಯದಲ್ಲೂ ಹಾಗೆ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಫ‌ಲಿತಾಂಶ ಉತ್ತಮವಾಗಿರಲಿದೆ; ಇಲ್ಲದಿದ್ದರೆ, ಹಿನ್ನಡೆ ಆಗುವ ಸಾಧ್ಯತೆ ಇದೆ. ರಾಜ್ಯದ ಒಟ್ಟಾರೆ 28 ಕ್ಷೇತ್ರಗಳಲ್ಲಿ ಕನಿಷ್ಠ 20 ಗೆಲ್ಲದಿದ್ದರೆ ನಮಗೆ ಯಾವ ನೈತಿಕತೆ ಇರುತ್ತದೆ ಎಂದು ರಾಜಣ್ಣ ಸಮರ್ಥನೆ ನೀಡಿದರು.

ಡಿಸಿಎಂ ಹುದ್ದೆ ಕುರಿತು ಇದುವರೆಗೂ ನನ್ನೊಂದಿಗೆ ಯಾರೊಬ್ಬರೂ ಸಮಾಲೋಚಿಸಿಲ್ಲ, ಇಂದಿನ ಸಭೆಯಲ್ಲೂ ಚರ್ಚೆಯಾಗಿಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ರಾಜಣ್ಣ ವಿರುದ್ಧ ಡಿಕೆಶಿ ಗರಂ?
ಮೂರು ಡಿಸಿಎಂ ಮಂತ್ರ ಪಠಿಸುತ್ತಿರುವ ಸಚಿವ ರಾಜಣ್ಣರೊಂದಿಗೆ ಡಿ.ಕೆ. ಶಿವಕುಮಾರ್‌ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಪದಾಧಿ ಕಾರಿಗಳ ಸಭೆ ಮುಗಿಯುತ್ತಿದ್ದಂತೆ ರಾಜಣ್ಣರನ್ನು ಕರೆದು ಶಿವಕುಮಾರ್‌ ಚರ್ಚಿಸಿದ್ದಾರೆ. ಇದು ಸಂಪೂರ್ಣ ಡಿಸಿಎಂ ಹುದ್ದೆ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದ್ದಾಗಿತ್ತು ಹಾಗೂ ಘಟನೆ ಬಗ್ಗೆ ಡಿಕೆಶಿ ಸಿಟ್ಟಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next