ಕಟಪಾಡಿ: ಜಿಐ ಮಾನ್ಯತೆ ಯೊಂದಿಗೆ ಪೇಟೆಂಟ್ ಪಡೆದಿರುವ ಮಟ್ಟುಗುಳ್ಳವು ಸಣ್ಣ ಗಾತ್ರದ ಬೇರ್ಪಡಿಕೆಯೊಂದಿಗೆ ನೀಲಿ ಬಣ್ಣದ ಸ್ಟಿಕ್ಕರ್ ಅಳವಡಿಕೆಯೊಂದಿಗೆ (ಗ್ರೇಡಿಂಗ್ 2) ಆಗಿ ಈ ಬಾರಿಯಿಂದ ಮೊದಲ ಬಾರಿಗೆ ಉಡುಪಿ ಮಾರುಕಟ್ಟೆ ಪ್ರವೇಶಿಸಲಿದೆ.
ಈ ಮಟ್ಟುಗುಳ್ಳ ಗಾತ್ರದಲ್ಲಿ ಮಾತ್ರ ಸಣ್ಣದಾಗಿದ್ದು, ಗುಣಮಟ್ಟ, ರುಚಿಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಗ್ರಾಹಕರಿಗೆ ಖರೀದಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮತ್ತು ಮಟ್ಟುಗುಳ್ಳ ಸುಲಭ ವಾಗಿ ಗುರುತಿಸಲು ಸಹಕಾರಿಯಾಗಿ ನೀಲಿ ಬಣ್ಣದ ಸ್ಟಿಕ್ಕರ್ ಅಳವಡಿಸಲಾಗುತ್ತಿದೆ.
ಗ್ರೇಡಿಂಗ್ 2 ಮಟ್ಟುಗುಳ್ಳವು ಮಂಗಳೂರು ಮಾರುಕಟ್ಟೆ ಪ್ರವೇಶಿಸಿದ್ದು ನಿತ್ಯ ಏಳು ಕ್ವಿಂಟಾಲ್ (700 ಕಿಲೋ) ಮಟ್ಟುಗುಳ್ಳ ರವಾನೆ ಮಾಡಲಾಗುತ್ತಿದೆ. ದೊಡ್ಡ ಗಾತ್ರದ ಫಸ್ಟ್ ಗ್ರೇಡ್‌ನ ಮೂರು ಟನ್(3,000 ಕಿಲೋ) ಮಟ್ಟುಗುಳ್ಳ ವ್ಯಾಪಾರವಾಗುತ್ತಿದೆ.
ಮಟ್ಟುಗುಳ್ಳ ಬೆಳೆಗಾರರ ಸಂಘದಿಂದ ಮಾರುಕಟ್ಟೆಗೆ ರವಾನಿಸಲ್ಪಟ್ಟ ಫಸ್ಟ್ ಗ್ರೇಡ್‌ನ ಮಟ್ಟು ಗುಳ್ಳ ಮಾರುಕಟ್ಟೆಯಲ್ಲಿ ಕಿಲೋಗೆ 50ರಿಂದ 55 ರೂ. ವರೆಗೆ ಮಾರಾಟವಾಗುತ್ತಿದ್ದರೆ, ಗ್ರೇಡಿಂಗ್ 2- ಸಣ್ಣ ಗಾತ್ರದ ಮಟ್ಟುಗುಳ್ಳವು ಕಿಲೋಗೆ 30-35 ರೂ. ದರದಲ್ಲಿ ಮಾರಾಟವಾಗುತ್ತಿದೆ.
ಮುಂದಿನ ದಿನಗಳಲ್ಲಿ ಇಳುವರಿ ಕುಂಠಿತವಾಗಿ ದರ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದುಬೆಳೆಗಾರರ ಸಂಘದ ಪ್ರಬಂಧಕ ಲಕ್ಷ್ಮಣ್ ಮಟ್ಟು ಹೇಳಿದ್ದಾರೆ. ಗ್ರಾಹಕರಿಗೆ ಮಟ್ಟುಗುಳ್ಳದ ಆಯ್ಕೆಯಲ್ಲಿ ಗೊಂದಲವಾಗಲೀ, ವಂಚನೆಯಾಗಲಿ ಆಗಬಾರದೆಂಬ ಉದ್ದೇಶದಿಂದ ಗ್ರೇಡಿಂಗ್ ಸ್ಟಿಕ್ಕರ್ ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗುಣಮಟ್ಟದ ಖಾತ್ರಿ
ಗ್ರಾಹಕರಿಗೆ ಗುಣಮಟ್ಟದ, ಕೈಗೆಟಕುವ ದರದಲ್ಲಿ ಒದಗಿಸುವ ಉದ್ದೇಶದಿಂದ ಗ್ರೇಡಿಂಗ್ 2 ಸ್ಟಿಕ್ಕರ್ ಅಳವಡಿಕೆ ಈ ಬಾರಿ ಆರಂಭಿಸಲಾಗಿದೆ
– ನಾಗರಾಜ್ ಮಟ್ಟು, ಕಾರ್ಯದರ್ಶಿ, ಮಟ್ಟುಗುಳ್ಳ ಬೆಳೆಗಾರರ ಸಂಘ
ಗ್ರೇಡಿಂಗ್‌ನಿಂದ ಅನುಕೂಲ
ಗ್ರೇಡಿಂಗ್ 2 ಕೂಡ ಶೇ.100ರಷ್ಟು ಗುಣಮಟ್ಟ ಹೊಂದಿರುವ ಮಟ್ಟುಗುಳ್ಳವಾಗಿದೆ. ಗ್ರೇಡಿಂಗ್‌ನಿಂದಾಗಿ ಮಾರಾಟಗಾರರಿಗೂ ಅನುಕೂಲ.
– ಚಂದ್ರಶೇಖರ್, ತರಕಾರಿ ಮಾರಾಟಗಾರರು.