ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ, ತಮ್ಮ ನಾಯಕತ್ವದ ಶಕ್ತಿಯಿಂದಲೇ ವಿಶ್ವವಿಖ್ಯಾತರಾಗಿರುವ ಸ್ಟೀವ್ ವಾ, ಎಲ್ಲರೂ ವಾಹ್ ಎನ್ನುವಂತಹ ಒಂದು ಕೆಲಸ ಮಾಡಿದ್ದಾರೆ.
ಅವರು ಭಾರತದ ಮೂಲೆ ಮೂಲೆಗಳನ್ನು18 ದಿನಗಳ ಕಾಲ ಸುತ್ತಿದ್ದಾರೆ. ಭಾರತದ ಗಲ್ಲಿಗಳನ್ನು, ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ವಾಸಿಸುತ್ತಿರುವ ಸನ್ಯಾಸಿಗಳನ್ನು, ಅವರ ಕ್ರಿಕೆಟ್ ಪ್ರೀತಿಯನ್ನು ಕಣ್ಣಾರೆ ಕಂಡಿದ್ದಾರೆ. ಅವೆಲ್ಲವನ್ನೂ ಸೇರಿಸಿ ಕ್ಯಾಪ್ಚರಿಂಗ್ ಕ್ರಿಕೆಟ್ ಎಂಬ ಸಾಕ್ಷ್ಯ ಚಿತ್ರವನ್ನು ಸಿದ್ಧಪಡಿಸಿದ್ದಾರೆ.
ಅದು ನವೆಂಬರ್ 17ರಂದು ಎಬಿಸಿ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಸ್ಟೀವ್ ವಾ ಆಸೀಸ್ ಕ್ರಿಕೆಟಿಗನಾಗಿದ್ದರೂ, ಅವರ ಭಾರತದ ಮೇಲಿನ ಪ್ರೀತಿ ಅನನ್ಯ. ಭಾರತ ತನಗೆ ಮರೆಯಲಾಗದ ನೆನಪುಗಳನ್ನುಕೊಟ್ಟಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಅನಿಲ್ ಕುಂಬ್ಳೆಗೆ 50ನೇ ಜನ್ಮದಿನದ ಸಂಭ್ರಮ : ಶುಭಾಶಯ ಕೋರಿದ ಅಭಿಮಾನಿಗಳು
ಮುಂಬೈನ ಗಲ್ಲಿಗಳಿಂದ ಹಿಡಿದು ಜೋಧಪುರ, ಕೋಲ್ಕತ್ತಾ, ರಾಜಸ್ಥಾನದ ಮರುಭೂಮಿ, ಹಿಮಾಲಯದ ಶಿಖರಗಳಲ್ಲಿ ಸ್ಟೀವ್ ತಮ್ಮ ಕ್ಯಾಮರಾದೊಂದಿಗೆ ಸುತ್ತಾಡಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಯಾಕೆ ಧರ್ಮವಾಗಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ ಎಂದು ಸ್ಟೀವ್ ವಾ ಹೇಳಿದ್ದಾರೆ.