ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗಾವಸ್ಕರ್ ಟ್ರೋಫಿ (Border Gavaskar Trophy) ಈ ವರ್ಷದ ಅಂತ್ಯದಲ್ಲಿ ನಡೆಯಲಿದೆ. ಎರಡು ಬಲಾಢ್ಯ ತಂಡಗಳ ನಡುವಿನ ಹೆವಿವೇಟ್ ಟೆಸ್ಟ್ ಸರಣಿಗೆ ಈಗಾಗಲೇ ಹೈಪ್ ಆರಂಭವಾಗಿದೆ. ಸ್ಟಾರ್ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರು ಭಾರತದ ಉದಯೋನ್ಮುಖ ತಾರೆಯೊಬ್ಬ ವಿಶ್ವ ಕ್ರಿಕೆಟ್ ನಲ್ಲಿ ಪ್ರಾಬಲ್ಯ ಸಾಧಿಸುವ ಮುಂದಿನ ದೊಡ್ಡ ಹೆಸರು ಎಂದು ನೇಮಿಸಿದ್ದಾರೆ.
ಭಾರತ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರು ಮುಂದಿನ ದಿನಗಳಲ್ಲಿ ವಿಶ್ವ ಕ್ರಿಕೆಟ್ ನಲ್ಲಿ ದೊಡ್ಡ ಹೆಸರು ಮಾಡಲಿದ್ದಾರೆ ಎಂದು ಆಸೀಸ್ ಸ್ಟಾರ್ ಆಟಗಾರರು ಅಭಿಪ್ರಾಯ ಪಟ್ಟಿದ್ದಾರೆ.
22 ವರ್ಷದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು 2023ರ ಜುಲೈನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ವಿಂಡೀಸ್ ವಿರುದ್ದದ ಚೊಚ್ಚಲ ಇನ್ನಿಂಗ್ಸ್ ನಲ್ಲಿಯೇ 171 ರನ್ ಗಳಿಸಿ ಮಿಂಚಿದ್ದರು. ಬಳಿಕ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಐದು ಪಂದ್ಯಗಳಲ್ಲಿ 712 ರನ್ ಗಳಿಸಿದ್ದರು. ಟೆಸ್ಟ್ ಸರಣಿಯಲ್ಲಿ 700 ಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಕ್ರಿಕೆಟಿಗರಾದರು.
ಮುಂಬೈ ಮೂಲದ ಪ್ರತಿಭಾವಂತ ಕ್ರಿಕೆಟಿಗ ಟಿ20 ಕ್ರಿಕೆಟ್ ನಲ್ಲಿಯೂ ಮಿಂಚು ಹರಿಸಿದ್ದಾರೆ. ಕೇವಲ 23 ಟಿ20 ಪಂದ್ಯಗಳಲ್ಲಿ ಜೈಸ್ವಾಲ್ 723 ರನ್ ಗಳನ್ನು ಗಳಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ವಿಡಿಯೋದಲ್ಲಿ ಅಗ್ರ ಆಸ್ಟ್ರೇಲಿಯನ್ ಆಟಗಾರರನ್ನು ಮುಂದಿನ ಪೀಳಿಗೆಯ ಸೂಪರ್ ಸ್ಟಾರ್ ಆಗಬಹುದಾದ ಭಾರತೀಯ ಕ್ರಿಕೆಟಿಗನನ್ನು ಹೆಸರಿಸಲು ಕೇಳಲಾಯಿತು. ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ನಾಥನ್ ಲಿಯಾನ್ ಮತ್ತು ಅಲೆಕ್ಸ್ ಕ್ಯಾರಿ ಎಲ್ಲರೂ ಯಶಸ್ವಿ ಜೈಸ್ವಾಲ್ ಅವರನ್ನು ತಮ್ಮ ಆಯ್ಕೆ ಎಂದು ಹೆಸರಿಸಿದ್ದಾರೆ.
“ಜೈಸ್ವಾಲ್ ಜನರೇಶನ್ ನ ಸೂಪರ್‌ಸ್ಟಾರ್ ಆಗಿರಬಹುದು” ಎಂದು ಸ್ಮಿತ್ ವಿಶ್ವಾಸದಿಂದ ಹೇಳಿದರು. “ಜೈಸ್ವಾಲ್ ಬಹುಶಃ ಮುಂದಿನ ದೊಡ್ಡ ಸೂಪರ್‌ಸ್ಟಾರ್ ಎಂದು ನಾನು ಭಾವಿಸುತ್ತೇನೆ” ಎಂದು ಸ್ಟಾರ್ಕ್ ಹೇಳಿದರು. “ಜೈಸ್ವಾಲ್ ಎಲ್ಲಾ ಫಾರ್ಮ್ಯಾಟ್ ಗಳಿಗೆ ಸರಿಯಾದ ಕ್ರಿಕೆಟಿಗನಂತೆ ಕಾಣುತ್ತಾರೆ” ಎಂದು ಹ್ಯಾಜಲ್‌ವುಡ್ ಹೇಳಿದರು.