ಲಂಡನ್: ಇಲ್ಲಿನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಎರಡನೇ ದಿನದಾಟ ಆರಂಭವಾಗಿದೆ. ದಿನದ ಮೊದಲ ಓವರ್ ನಲ್ಲೇ ಸ್ಟೀವ್ ಸ್ಮಿತ್ ಅವರು ತಮ್ಮ ಶತಕ ಪೂರೈಸಿ ಸಂಭ್ರಮಿಸಿದರು.
ಮೊದಲ ದಿನದಾಟದ ಅಂತ್ಯಕ್ಕೆ 227 ಎಸೆತ ಎದುರಿಸಿ 95 ರನ್ ಗಳಿಸಿ ಅಜೇಯರಾಗಿದ್ದ ಸ್ಟೀವ್ ಸ್ಮಿತ್ ತಾನೆದುರಿಸಿದ ಮೊದಲೆರಡು ಎಸೆತಗಳನ್ನೇ ಬೌಂಡರಿಗೆ ಬಾರಿಸಿ ತಮ್ಮ ಶತಕ ಪೂರೈಸಿದರು. ಟೆಸ್ಟ್ ಬಾಳ್ವೆಯ 31ನೇ ಶತಕ ಬಾರಿಸಿದರು.
ಈ ಶತಕದ ವೇಳೆ ಸ್ಮಿತ್ ಹಲವು ದಾಖಲೆಗಳನ್ನು ಮುರಿದರು. ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಸ್ಮಿತ್ ಮೂರನೇ ಸ್ಥಾನಕ್ಕೆ ಜಿಗಿದರು. 30 ಶತಕ ಬಾರಿಸಿದ ಮ್ಯಾಥ್ಯೂ ಹೇಡನ್ ಮೂರನೇ ಸ್ಥಾನಕ್ಕೆ ಇಳಿದರು. ಸ್ಮಿತ್ ಗಿಂತ ಹೆಚ್ಚು ಟೆಸ್ಟ್ ಶತಕ ಗಳಿಸಿದವರೆಂದರೆ ಸ್ಟೀವ್ ವಾ (32) ಮತ್ತು ರಿಕಿ ಪಾಂಟಿಂಗ್ (41)
ಭಾರತದ ವಿರುದ್ಧ ಅತೀ ಹೆಚ್ಚು ಟೆಸ್ಟ್ ಶತಕ ಗಳಿಸಿದವರ ಪಟ್ಟಿಯಲ್ಲೂ ಸ್ಮಿತ್ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಜೋ ರೂಟ್ ಮತ್ತು ಸ್ಮಿತ್ ಭಾರತದ ವಿರುದ್ಧ ತಲಾ ಒಂಬತ್ತು ಶತಕ ಬಾರಿಸಿದ್ದಾರೆ. ರಿಕಿ ಪಾಂಟಿಂಗ್ ಮತ್ತು ವಿವಿಯನ್ ರಿಚರ್ಡ್ ತಲಾ ಎಂಟು ಶತಕ ಗಳಿಸಿದ್ದರು.
ಇಂಗ್ಲೆಂಡ್ ನೆಲದಲ್ಲಿ ಅತೀ ಹೆಚ್ಚು ಟೆಸ್ಟ್ ಶತಕ ಗಳಿಸಿದ ವಿದೇಶಿ ಆಟಗಾರರ ಪಟ್ಟಿಯಲ್ಲಿ ಸ್ಮಿತ್ ಮೂರನೇ ಸ್ಥಾನಕ್ಕೇರಿದರು. (7 ಶತಕ) 11 ಶತಕ ಬಾರಿಸಿದ್ದ ಡಾನ್ ಬ್ರಾಡ್ಮನ್ ಮತ್ತು 7 ಶತಕ ಗಳಿಸಿದ ಸ್ಟೀವ್ ವಾ ಮೊದಲೆರಡು ಸ್ಥಾನದಲ್ಲಿದ್ದಾರೆ. ರಾಹುಲ್ ದ್ರಾವಿಡ್ 6 ಶತಕ ಬಾರಿಸಿದ್ದರು.