ತುಳು ರಂಗಭೂಮಿಯಲ್ಲಿ ಸಾಧನೆಯ ಮೈಲಿಗಲ್ಲು ಬರೆದ ಹಾಗೂ ತುಳು-ಕನ್ನಡ ಸಿನೆಮಾದ ಮೂಲಕ ಮನೆಮಾತಾದ ಕುಸೇಲ್ದರಸೆ ನವೀನ್ ಡಿ. ಪಡೀಲ್ ಕರಾವಳಿಯ ಮಾಣಿಕ್ಯ. ಸದ್ಯ ಸುವರ್ಣ ವರ್ಷದ ಸಂಭ್ರಮದಲ್ಲಿರುವ ಪಡೀಲ್, ತುಳು ರಂಗಭೂಮಿಯಲ್ಲಿ ಮೂರು ದಶಕಗಳಿಂದ ತನ್ನ ಅಭಿನಯ ಚಾತುರ್ಯದ ಮೂಲಕ ಶ್ಲಾಘನೆ-ಸಮ್ಮಾನದ ಮೂಲಕ ಗೌರವಕ್ಕೆ ಪಾತ್ರರಾಗಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಪಡೀಲ್ ಇಂದಿಗೂ ಕುಸೇಲ್ದರಸೆ.
“ಅರ್ಧ ನಿದ್ರೆ’ ಎಂಬ ನಾಟಕದ ಮುಖೇನ ತುಳುರಂಗಭೂಮಿಯಲ್ಲಿ ಮೊದಲ ಹೆಜ್ಜೆ ಇಟ್ಟ ಪಡೀಲ್ ಅನಂತರ ಯಾರೂ ಮಾಡದ ಸಾಧನೆಯ ಮೂಲಕ ಕರಾವಳಿಯಾದ್ಯಂತ ಅಭಿಮಾನಿಗಳ ಪಾಲಿಗೆ ನೆಚ್ಚಿನ ನಟನಾಗಿ ಬದಲಾಗಿದ್ದು ಇತಿಹಾಸ. ಕಾಮಿಡಿ ಗೆಟಪ್‌ನಲ್ಲಿ ಕಾಣಿಸಿಕೊಂಡ ಪಡೀಲ್ ಪೋಷಕ ಪಾತ್ರದ ಮೂಲಕವೂ ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟವರು.
ದೇವದಾಸ್ ಕಾಪಿಕಾಡ್, ವಿಜಯ್ ಕುಮಾರ್ ಕೊಡಿಯಾಲಬೈಲ್, ಕಿಶೋರ್ ಡಿ. ಶೆಟ್ಟಿ ಮುಂತಾದ ಖ್ಯಾತನಾಮರ ನಾಟಕ ತಂಡಗಳಲ್ಲಿ ನಾಟಕ ಮಾಡಿರುವ ನವೀನ್ ಡಿ. ಪಡೀಲ್ ಹಲವಾರು ಖ್ಯಾತನಾಮರನ್ನು ತುಳುರಂಗಭೂಮಿಗೆ ಪರಿಚಯಿಸಿದ್ದಾರೆ. “ಒರಿಯರ್ದೊರಿ ಅಸಲ್’ ನಾಟಕ ಹಾಗೂ ಸಿನೆಮಾದಲ್ಲಿ “ಭಜನೆ ಬಸಪ್ಪ’ನ ಪಾತ್ರ, “ಪುದರ್ ದೀತಿಜಿ’ ನಾಟಕದ ಕಿವುಡ “ಬೂಬಣ್ಣ’ನ ಪಾತ್ರದಲ್ಲಿ ಪಡೀಲ್ ಅಭಿನಯ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ. “ಗಂಗುನ ಗಮ್ಮತ್ತ್’ ನಾಟಕದಲ್ಲಿನ ಪಡೀಲ್ ಅಭಿನಯ ಇಂದಿಗೂ ಪ್ರೇಕ್ಷಕರ ಕಣ್ಣಾಲಿಗಳನ್ನು ತೇವ ಮಾಡಿಸುತ್ತದೆ. ಹಲವು ನಾಟಕ ತಂಡಗಳಿಗೆ ನಿರ್ದೇಶನವನ್ನು ಮಾಡಿದ ಪಡೀಲ್ ಅಕ್ಷರಶಃ ತುಳುರಂಗಭೂಮಿಗೆ ಬಹುದೊಡ್ಡ ಆಸ್ತಿ. ಪ್ರತೀ ವರ್ಷ 200ಕ್ಕೂ ಅಧಿಕ ನಾಟಕಗಳಂತೆ, ಸುಮಾರು 30 ವರ್ಷಗಳ ಕಾಲ ಇವರು ಮಾಡಿದ ನಾಟಕದ ಸಂಖ್ಯೆ ಎಷ್ಟಿರಬಹುದು.. ನೀವೇ ಊಹಿಸಿ..
ಅಂದಹಾಗೆ, ತುಳುರಂಗಭೂಮಿಯಲ್ಲಿ ಅತ್ಯುತ್ತಮ ಪಾತ್ರದಲ್ಲಿ ಮಿಂಚಿದ ಪಡೀಲ್ ಮೊದಲು ಸಿನೆಮಾ ಮಾಡಿದ್ದು ಮಲಯಾಳಂನಲ್ಲಿ. ನಾ.ದಾ. ಶೆಟ್ಟಿ ಅವರು ಮೂಲಕ ಮಲಯಾಳದ ಖ್ಯಾತ ನಟ ಮಮ್ಮುಟ್ಟಿ ಜತೆಗೆ “ವಿಧೇಯನ್’ ಎಂಬ ಸಿನೆಮಾದಲ್ಲಿ ಪಡೀಲ್ ಮೊದಲಿಗೆ ಕಾಣಿಸಿಕೊಂಡರು. 1998ರಲ್ಲಿ “ಒಂತೆ ಅಡ್ಜಸ್ಟ್ ಮಲ್ಪಿ’ ತುಳು ಸಿನೆಮಾದ ಮೂಲಕ ಪಡೀಲ್ ಕೋಸ್ಟಲ್‌ವುಡ್‌ನಲ್ಲಿ ಕಾಣಿಸಿಕೊಂಡರು. ಅನಂತರ ಒಂದೊಂದೇ ತುಳು ಸಿನೆಮಾಗಳಲ್ಲಿ ಕಾಣಿಸಿಕೊಂಡ ಪಡೀಲ್ ಕೋಸ್ಟಲ್‌ವುಡ್‌ನ ಹಲವು ಸಿನೆಮಾಗಳಲ್ಲಿ ಅಭಿನಯಿಸಿದರು. ಇತ್ತೀಚೆಗೆ ಬಂದ “ಗಿರಿಗಿಟ್’ ಸಿನೆಮಾದವರೆಗೆ ಪಡೀಲ್ ಗಮನಸೆಳೆದಿದ್ದಾರೆ. ಮುಂದೆ ಪೆಪ್ಪೆರೆರೆರೆರೆರೆ, ಆಟಿಡೊಂಜಿ ದಿನ, ಗಂಟ್ ಕಲ್ವೆರ್, ಕುದ್ಕನ ಮದ್ಮೆ, 2 ಎಕ್ರೆ, ಇಂಗ್ಲೀಷ್ ಸಹಿತ ಹಲವು ತುಳು ಸಿನೆಮಾಗಳು ರಿಲೀಸ್‌ನ ಹೊಸ್ತಿಲಲ್ಲಿವೆ.
ಜತೆಗೆ 20ಕ್ಕೂ ಅಧಿಕ ಕನ್ನಡ ಸಿನೆಮಾದಲ್ಲಿ ಪಡೀಲ್ ನಟಿಸಿದ್ದಾರೆ. “ಸೀತಾರಾಮ ಕಲ್ಯಾಣ’, “ಅನಂತು ವರ್ಸಸ್ ನುಸ್ರತ್’, “ಬೆಲ್ ಬಾಟಮ್’ ಸೇರಿದಂತೆ ಹಲವು ಸಿನೆಮಾದಲ್ಲಿ ಸ್ಯಾಂಡಲ್‌ವುಡ್‌ನ ಮನಗೆದ್ದಿದ್ದಾರೆ. ಪಡೀಲ್ ಅಭಿನಯದ ದರ್ಶನ್ ಅವರ “ರಾಬರ್ಟ್’, ನೆನಪಿರಲಿ ಪ್ರೇಮ್ ಅವರ “ಪ್ರೇಮ ಪೂಜ್ಯ’ ಹಾಗೂ “ವಿಷ್ಣು ಪ್ರಿಯ’ ಸಿನೆಮಾ ಕೂಡ ತೆರೆಕಾಣಲು ರೆಡಿಯಾಗಿದೆ. ಸೃಜನ್ ಲೋಕೇಶ್ ಅವರ “ಮಜಾ ಟಾಕೀಸ್’ನಲ್ಲಿಯೂ ಪಡೀಲ್ ಮೋಡಿ ಮಾಡಿದ್ದಾರೆ. ಪಡೀಲ್ ಅವರಿಗೆ 2016ನೇ ಸಾಲಿನ ರಾಜ್ಯ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರಕಿದೆ.
ದಿನೇಶ್ ಇರಾ