Advertisement

ಏಪ್ರಿಲ್‌ನಲ್ಲಿ 24×7 ನೀರು ಪೂರೈಸಲು ಕ್ರಮ

06:28 PM Mar 09, 2022 | Team Udayavani |

ಹಾವೇರಿ: ವಿವಿಧ ಕಾರಣಗಳಿಂದ ವಿಳಂಬವಾಗಿದ್ದ 24×7 ಕುಡಿಯುವ ನೀರು ಪೂರೈಸುವ ಕಾಮಗಾರಿ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಕಾಮಗಾರಿ ತೃಪ್ತಿಕರವಾಗಿದ್ದರೆ ಏಪ್ರಿಲ್‌ ಮೊದಲ ವಾರದಲ್ಲಿ ನಗರದ ನಾಲ್ಕು ವಿಭಾಗಗಳಲ್ಲಿ ಯೋಜನೆಯಡಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯ ಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

Advertisement

ಸ್ಥಳೀಯ ನಗರಸಭೆ ಸಭಾಭವನದಲ್ಲಿ ಮಂಗಳವಾರ ವಿಶೇಷ ಬಜೆಟ್‌ ಸಭೆಯಲ್ಲಿ ಅವರು ಮಾತನಾಡಿದರು. ಐದಾರು ವರ್ಷ ಕಳೆದರೂ ನಗರದಲ್ಲಿ 24×7 ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಮಧ್ಯೆ ಗುತ್ತಿಗೆದಾರರು ಬದಲಾಗಿ ವಿಳಂಬವಾಗಿತ್ತು. ಈಗಿನ ಗುತ್ತಿಗೆದಾರರು ಕೆಲಸವನ್ನು ತ್ವರಿತವಾಗಿ ಮಾಡುತ್ತಿದ್ದಾರೆ.

ನಾಲ್ಕು ಝೋನ್‌ಗಳಲ್ಲಿ ಶೇ. 90ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ಈ ತಿಂಗಳ ಅಂತ್ಯದೊಳಗೆ ಮತ್ತೂಮ್ಮೆ ಸಭೆ ನಡೆಸಿ ಕಾಮಗಾರಿ ತೃಪ್ತಿಕರವಾಗಿದ್ದಲ್ಲಿ ನೀರು ಪೂರೈಕೆ ಯೋಜನೆಯನ್ನು ನಾಲ್ಕು ಝೋನ್‌ ಗಳಲ್ಲಿ ಆರಂಭಿಸಲಾಗುವುದು. ಹಳೆಯ ಪೈಪ್‌ಲೈನ್‌ ಸಂಪೂರ್ಣವಾಗಿ ಬಂದ್‌ ಮಾಡಲಾಗುವುದು. ಕಾಮಗಾರಿ ನಡೆಯುತ್ತಿರುವುದರಿಂದ ಕೆಲವು ವಾರ್ಡ್ ಗಳಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ.ಇದೊಂದು ತಿಂಗಳ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಯೋಜನೆ ಹಸ್ತಾಂತರ ಆಗುವುದರಿಂದ ನಗರಸಭೆಗೆ ನಿರ್ವಹಣೆ ಖರ್ಚು ಉಳಿಯಲಿದೆ. ಇಲ್ಲದಿದ್ದರೆ ಪ್ರತಿದಿನ ಕಂಚಾರಗಟ್ಟಿ ಬಳಿ ಪಂಪ್‌ ಹಾಳಾಗಿದೆ, ಪೈಪ್‌ಲೈನ್‌ ಒಡೆದಿದೆ ಇತ್ಯಾದಿ ಸಮಸ್ಯೆ ಇರುವುದಿಲ್ಲ. ಎಲ್ಲವನ್ನೂ ಗುತ್ತಿಗೆದಾರ ಸಂಸ್ಥೆಯವರೇ ನಿರ್ವಹಣೆ ಮಾಡುತ್ತಾರೆ ಎಂದರು.

ಸಾರ್ವಜನಿಕರು ತಮ್ಮ ಆಸ್ತಿಗಾಗಿ ಇ-ಸ್ವತ್ತು ಪಡೆಯಲು ಪರದಾಡುವಂತಾಗಿದ್ದು, ಏಜೆಂಟರ ಹಾವಳಿ ಹೆಚ್ಚಾಗಿದೆ. ಜನಸಾಮಾನ್ಯರು ಇ-ಸ್ವತ್ತಿಗಾಗಿ ನಗರಸಭೆಗೆ ಅಲೆದಾಡುವಂತಾಗಿದೆ ಎಂದು ಸದಸ್ಯರು ಆರೋಪಿಸಿದರು. ಈ ವೇಳೆ ಪೌರಾಯುಕ್ತ ವಿ.ಎಂ. ಪೂಜಾರ ಮಾತನಾಡಿ, ಇನ್ನು ಮುಂದೆ ನಗರಸಭೆ ಸದಸ್ಯರು ಯಾರೂ ಫೈಲ್‌ ಹಿಡಿದುಕೊಂಡು ಬರಬೇಡಿ. ಏನೇ ಕೆಲಸ ಇದ್ದರೂ ನೇರವಾಗಿ ನನ್ನನ್ನು ಸಂಪರ್ಕಿಸಿ.

Advertisement

ಇದರಿಂದ ಮಧ್ಯವರ್ತಿಗಳ ಹಾವಳಿ ತಡೆಯಬಹುದು ಎಂದು ಹೇಳಿದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲ ಸದಸ್ಯರು, ನಾವು ನಮ್ಮ ಜನರಿಗಾಗಿ ಫೈಲ್‌ ತರುತ್ತೇವೆ. ನೀವು ಹೀಗೆ ಹೇಳಿದರೆ ಹೇಗೆ ಎಂದ ವಾಗ್ಧಾಳಿ ನಡೆಸಿದರು.

ಆಗ ಮಧ್ಯ ಪ್ರವೇಶಿಸಿದ ಅಧ್ಯ ಕ್ಷ ಸಂಜೀವಕುಮಾರ ನೀರಲಗಿ, ನಗರಸಭೆಯ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಇ-ಸ್ವತ್ತು ಪಡೆಯುವುದೆಂದರೆ ಎಂಎಲ್‌ಎ ಟಿಕೆಟ್‌ ಪಡೆದಷ್ಟು ಕಷ್ಟವಾಗುತ್ತಿದೆ. ಆದ್ದರಿಂದ ಪ್ರತಿ ಮನೆಗೆ ನಗರಸಭೆ ನಂಬರ್‌ ಅಳವಡಿಸುವ ವಿಶೇಷ ಆಂದೋಲನವನ್ನು ಏಪ್ರಿಲ್‌ ತಿಂಗಳಲ್ಲಿ ನಡೆಸಲಾಗುವುದು. ಈ ಜವಾಬ್ದಾರಿಯನ್ನು ಪೌರಾಯುಕ್ತರಿಗೆ ನೀಡುತ್ತಿದ್ದೇವೆ. ಇ-ಸ್ವತ್ತು ಸೇವಾ ಕೇಂದ್ರಗಳಲ್ಲೂ ದೊರೆಯುವಂತಾಗಬೇಕು. ವ್ಯವಸ್ಥೆ ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸದಸ್ಯರಾದ ಐ.ಯು. ಪಟಾಣ ಮಾತನಾಡಿ, ಆಸ್ತಿ ದಾಖಲೆಗಳಲ್ಲಿ ಲೋಪದೋಷವಾಗಲು ಸಾರ್ವಜನಿಕರು ಕಾರಣರಲ್ಲ. ನಗರಸಭೆ ಸಿಬ್ಬಂದಿಯೇ ಇದಕ್ಕೆ ಜವಾಬ್ದಾರರು. ಆದ್ದರಿಂದ ದಾಖಲೆಗಳಲ್ಲಿ ತಪ್ಪಾಗಿ ಹೆಸರು ನಮೂದಿಸುವವರ ಇನ್‌ಕ್ರಿಮೆಂಟ್‌ ತಡೆಯಬೇಕು ಎಂದು ಆಗ್ರಹಿಸಿದರು. ಇದಕ್ಕೆ ಹಲವು ಸದಸ್ಯರು ಬೆಂಬಲ ಸೂಚಿಸಿದರು. ಫಿಲ್ಟರ್‌ಹೌಸ್‌ನಿಂದ ಟ್ಯಾಂಕರ್‌ನಲ್ಲಿ ಕೆಲವರು ನೀರು ಒಯ್ಯುತ್ತಿರುವ ಬಗ್ಗೆಯೂ ಚರ್ಚೆ ನಡೆಯಿತು. ಹಬ್ಬ, ಜಾತ್ರೆ, ವಿವಾಹ ಮುಂತಾದ ಸಂದರ್ಭ ಹೊರತುಪಡಿಸಿ ಉಳಿದವರಿಗೆ ಒಂದು ಟ್ಯಾಂಕರ್‌ಗೆ 200 ರೂ. ಶುಲ್ಕ ವಿಧಿಸಲು ಅವಕಾಶ ನೀಡುವಂತೆ ಪೌರಾಯುಕ್ತರು ಕೋರಿದರು. ಜಾಹೀರಾಬಾನು, ವಿ.ಎಂ. ಪೂಜಾರ ಇದ್ದರು.

20 ಲಕ ರೂ. ಉಳಿತಾಯ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು 2022-23ನೇ ಸಾಲಿಗಾಗಿ 20.30 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡಿಸಿದರು. ಬರುವ ಆರ್ಥಿಕ ಸಾಲಿನಲ್ಲಿ ರಾಜಸ್ವ ಖಾತೆಯಲ್ಲಿ 32.32 ಕೋಟಿ, ಬಂಡವಾಳ ಖಾತೆಯಲ್ಲಿ 16.47 ಕೋಟಿ ಹಾಗೂ ಅಸಾಧಾರಣ ಖಾತೆಯಲ್ಲಿ 15.85 ಕೋಟಿ ರೂ. ಸೇರಿದಂತೆ 64.64 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಅದೇ ರೀತಿ ರಾಜಸ್ವ ಖಾತೆಯಲ್ಲಿ 29.43 ಕೋಟಿ ರೂ. ವೆಚ್ಚ, ಬಂಡವಾಳ ಖಾತೆಯಲ್ಲಿ ಆಸ್ತಿ ನಿರ್ಮಾಣಕ್ಕಾಗಿ 19.15 ಕೋಟಿ ವೆಚ್ಚ ಮೀಸಲಿರಿಸಲಾಗಿದೆ. ಅಸಾಧಾರಣ ಖಾತೆಯಲ್ಲಿ 15.85 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ. ಒಟ್ಟಾರೆ 64.64 ಕೋಟಿ ರೂ. ಆದಾಯದಲ್ಲಿ 64.44 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದ್ದು, 20.30 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next