Advertisement

ಶಿಡ್ಲಘಟ್ಟ ಶೈಕ್ಷಣಿಕ ಕೇಂದ್ರ ಮಾಡಲು ಕ್ರಮ

09:46 PM Feb 05, 2020 | Lakshmi GovindaRaj |

ಶಿಡ್ಲಘಟ್ಟ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ ಮತ್ತು ಹಾಲು ಉತ್ಪಾದನೆಯಲ್ಲಿ ಅಗ್ರಸ್ಥಾನ ಹೊಂದಿರುವ ಶಿಡ್ಲಘಟ್ಟ ತಾಲೂಕನ್ನು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಲು ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

Advertisement

ತಾಲೂಕಿನ ಅಮರಾವತಿ ಗ್ರಾಮದಲ್ಲಿ ಉದ್ದೇಶಿತ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ಥಳ ಪರಿಶೀಲಿಸಿ ರೈತರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ದೇವನಹಳ್ಳಿ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಸಮೀಪವಿರುವ ಕೋಲಾರ- ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಧ್ಯೆಪ್ರದೇಶದಲ್ಲಿರುವ ಅಮರಾವತಿಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಅತಿ ಶೀಘ್ರದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗುವುದು ಎಂದರು.

ರೈತರ ಸಮಸ್ಯೆಗಳಿಗೆ ಸ್ಪಂದನೆ: ಸ್ಥಳೀಯ ರೈತರಿಗೆ ತೊಂದರೆ ನೀಡಿ ವಿಶ್ವವಿದ್ಯಾಲಯ ಸ್ಥಾಪಿಸುವ ಉದ್ದೇಶ ಸರಕಾರಕ್ಕಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ನಿರೀಕ್ಷೆಯಂತೆ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತದೆ. ಪ್ರಸ್ತುತ ವಿಶ್ವವಿದ್ಯಾಲಯ ನಿರ್ಮಿಸಲು 110 ಎಕರೆ ಜಾಗವನ್ನು ಗುರುತಿಸಿದ್ದು ಇನ್ನೂಳಿದ 60 ಎಕರೆ ಜಮೀನು ಸ್ವಾಧೀನಪಡೆದುಕೊಳ್ಳುವ ಪ್ರಕ್ರಿಯೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ರೇಷ್ಮೆ ಮತ್ತು ಹೈನುಕಾರಿಕೆಯಲ್ಲಿ ಪ್ರಖ್ಯಾತಿ ಹೊಂದಿರುವ ಶಿಡ್ಲಘಟ್ಟ ಮುಂದಿನ ದಿನಗಳಲ್ಲಿ ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದಲಿದೆ ಇದರಿಂದ ಸ್ಥಳೀಯ ರೈತರ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆದುಕೊಂಡು ಅವರ ಭವಿಷ್ಯವನ್ನು ರೂಪಿಸಿಕೊಳ್ಳಲಿದ್ದಾರೆ ಎಂದರು.

ರೈತರಿಗೆ ಪರಿಹಾರ ನೀಡಿ ಜಮೀನು ಸ್ವಾಧೀನ: ಅಮರಾವತಿ ಗ್ರಾಮದಲ್ಲಿ ರೈತರ ಜಮೀನುಗಳನ್ನು ಬಲವಂತವಾಗಿ ವಶಕ್ಕೆ ಪಡೆದುಕೊಳ್ಳುವುದಿಲ್ಲ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ರೈತರಿಗೆ ಪರಿಹಾರ ನೀಡಿ ಜಮೀನು ಸ್ವಾಧೀನ ಮಾಡಿಕೊಂಡು ವಿಶ್ವವಿದ್ಯಾಲಯ ನಿರ್ಮಿಸುತ್ತೇವೆ. ಈ ಭಾಗದಲ್ಲಿ ರೈತರಿಗೆ ಪಿ.ನಂಬರ್‌ ನೀಡಿ ಅವರು ಈ ಹಿಂದೆ ಸದರಿ ಜಾಗದಲ್ಲಿ ರೈತರಿಗೆ ಪಿ.ನಂಬರ್‌ ನೀಡಿರುವುದು ಸೇರಿದಂತೆ ಇನ್ನಿತರೆ ವಿಚಾರಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅವರ ನೇತೃತ್ವದಲ್ಲಿ ಯಾವುದೇ ವಿವಾದ ಇಲ್ಲದೇ ಸುಸಜ್ಜಿತ ವಿಶ್ವವಿದ್ಯಾಲಯ ನಿರ್ಮಿಸಲು ಸರ್ಕಾರ ಬದ್ಧವಾಗಿದ್ದು ಶಾಸಕರು ಸಲಹೆ ಸೂಚನೆಗಳನ್ನು ಪಡೆದುಕೊಂಡು ಮುಂದಿನ ಕ್ರಮ ಜರುಗಿಸುವುದಾಗಿ ಸ್ಪಷ್ಟಪಡಿಸಿದರು.

ಒತ್ತುವರಿ ತೆರವಿಗೆ ಮನವಿ: ಶಾಸಕ ವಿ.ಮುನಿಯಪ್ಪ ಮಾತನಾಡಿ, ಅಮರಾವತಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಸೂಕ್ತ ವ್ಯವಸ್ಥೆಗಳು ಇಲ್ಲದಿರುವುದರಿಂದ ಸುಂಡ್ರಹಳ್ಳಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಈಗಾಗಲೇ ಹಿಂದಿನ ಸರ್ಕಾರದಲ್ಲಿ ಪ್ರಯತ್ನ ನಡೆಸಲಾಗಿತ್ತು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 10 ಕಿ.ಮೀ ದೂರದಲ್ಲಿರುವ ಸಕಲ ಸೌಲಭ್ಯಗಳನ್ನು ಹೊಂದಿರುವ ಸುಂಡ್ರಹಳ್ಳಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿ ರೈತರು ಸೇರಿದಂತೆ ಎಲ್ಲರಿಗೂ ಅನುಕೂಲ ಕಲ್ಪಿಸಬೇಕು ಮತ್ತು ಸುಂಡ್ರಹಳ್ಳಿ ಸುತ್ತಮುತ್ತ ಆಕ್ರಮಿಸಿಕೊಂಡಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಉಪಮುಖ್ಯಮಂತ್ರಿಗಳು ಸಕಾರತ್ಮಕವಾಗಿ ಸ್ಪಂದಿಸಿ ಒತ್ತುವರಿ ತೆರವುಗೊಳಿಸಲಾಗುವುದೆಂದು ಭರವಸೆ ನೀಡಿದರು.

Advertisement

ಜಿಲ್ಲಾಧಿಕಾರಿ ಆರ್‌.ಲತಾ, ಉಪವಿಭಾಗದಲ್ಲಿ ರಘುನಂದನ್‌ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ನಿರ್ಮಿಸಲು ಮೀಸಲಾಗಿರುವ ಜಾಗ ಮತ್ತು ಸ್ಥಳೀಯ ರೈತರ ಸಮಸ್ಯೆಗಳ ಕುರಿತು ಉಪಮುಖ್ಯಮಂತ್ರಿಗಳಿಗೆ ನಕ್ಷೆಯೊಂದಿಗೆ ವಿವರಗಳನ್ನು ನೀಡಿದರು. ಕೋಲಾರ ಜಿಪಂ ಮಾಜಿ ಅಧ್ಯಕ್ಷ ವಿ.ಸುಬ್ರಹ್ಮಣಿ, ತಹಶೀಲ್ದಾರ್‌ ಎಂ.ದಯಾನಂದ್‌, ಕಾಂಗ್ರೆಸ್‌ ಮುಖಂಡರಾದ ವೈ.ಬಿ. ಮಂಜುನಾಥ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಚೀಮಂಗಲ ಮಂಜುನಾಥ್‌, ಎಚ್‌.ಕ್ರಾಸ್‌ ಮಂಜುನಾಥ್‌, ಸೋಮಣ್ಣ, ಅಂಬರೀಶ್‌,ಹಿರೇಬಲ್ಲ ಕೃಷ್ಣಪ್ಪ ಇದ್ದರು.

ಎಲ್ಲ ರೈತರಿಗೂ ಪರಿಹಾರ ನೀಡಿ: ಈ ವೇಳೆ ಅಲ್ಲಿನ ರೈತರು, ಕ್ಯಾಂಪಸ್‌ ನಿರ್ಮಿಸಲು ಗುರುತಿಸಿರುವ ಜಮೀನಿನಲ್ಲಿ ನಾವು ಉಳುಮೆ ಮಾಡಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದೇವೆ. ಸಾಕಷ್ಟು ರೈತರಿಗೆ ಸಾಗುವಳಿ ಚೀಟಿ ವಿತರಿಸಲಾಗಿದೆ. ಇನ್ನೂ ಕೆಲವರಿಗೆ ಸಾಗುವಳಿ ಚೀಟಿ ಬರಬೇಕಿದೆ. ಕಿಮ್ಮತ್ತು ಹಣ ಕಟ್ಟಿದ್ದು ಸಾಗುವಳಿ ಚೀಟಿ ವಿತರಿಸುವುದೊಂದು ಮಾತ್ರ ಬಾಕಿ ಇದೆ. ಹಾಗಾಗಿ ಈ ಜಮೀನು ಬಿಟ್ಟರೆ ನಮಗೆ ಬದುಕಲು ದಾರಿಯೇ ಇಲ್ಲ. ಹಾಗಾಗಿ ಸದರಿ ಎಲ್ಲ ಜಮೀನುಗಳ ರೈತರಿಗೂ ಪರಿಹಾರ ಕೊಡಿ. ಇಲ್ಲವೇ ಕ್ಯಾಂಪಸ್‌ನ್ನು ಬೇರೆ ಕಡೆ ನಿರ್ಮಿಸಿ ಎಂದು ಡಿಸಿಎಂಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next