Advertisement

ಗ್ರೀನ್‌ ಆ್ಯಪ್‌ ಜತೆ ಪಾಲಿಕೆಯ ಹಸಿರೀಕರಣದ ಹೆಜ್ಜೆ

12:42 PM May 22, 2017 | Team Udayavani |

ಬೆಂಗಳೂರು: ಸಾರ್ವಜನಿಕರಿಗೆ ಉಚಿತವಾಗಿ ಗಿಡಗಳನ್ನು ಪೂರೈಸಲು ಅನುಕೂಲ ವಾಗುವ “ಗ್ರೀನ್‌ ಆ್ಯಪ್‌’ಗೆ ಬಿಬಿಎಂಪಿ ಭಾನುವಾರ ಚಾಲನೆ ನೀಡಿದೆ. ತಮ್ಮ ಮನೆ ಆವರಣ ಅಥವಾ ಸುತ್ತಲಿನ ಖಾಲಿ ಜಾಗದಲ್ಲಿ ಗಿಡ ಬೆಳೆಸಲು ಮುಂದಾಗುವ ನಾಗರಿಕರು ಈ ಆ್ಯಪ್‌ ಮೂಲಕ ಮಾಹಿತಿ ನೀಡಿದರೆ ಅವರಿಗೆ ಬಿಬಿಎಂಪಿ ಉಚಿತವಾಗಿ ಗಿಡ ಒದಗಿಸಲಿದೆ. ಈ ಮೂಲಕ ಸುಮಾರು 10 ಲಕ್ಷ ಗಿಡಗಳನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.

Advertisement

ಬಿಬಿಎಂಪಿ ವತಿಯಿಂದ ಕಬ್ಬನ್‌ಪಾರ್ಕ್‌ ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಚಿತ್ರನಟ ಯಶ್‌ ಗ್ರೀನ್‌ ಆ್ಯಪ್‌ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,ನಗರದಲ್ಲಿ ಹಸಿರು ಮಾಯವಾಗುತ್ತಿದೆ. ಪರಿಸರ ಮಾಲಿನ್ಯ ಹೆಚ್ಚುತ್ತಿದ್ದು, ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ ತಡೆಗೆ ಗಿಡ-ಮರಗಳನ್ನು ಬೆಳೆಸಲು ಸಾರ್ವಜನಿಕರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಮೇಯರ್‌ ಜಿ.ಪದ್ಮಾವತಿ ಮಾತನಾಡಿ, ಸಾರ್ವಜನಿಕರು ತಮ್ಮ ಸುತ್ತಮುತ್ತಲ ಖಾಲಿ ಪ್ರದೇಶಗಳಲ್ಲಿ ಗಿಡ-ಮರ ಬೆಳೆಸುವ ಮಾಹಿತಿಯನ್ನು ಆ್ಯಪ್‌ ಮೂಲಕ ನೀಡಿದರೆ ಅವರ ಮನೆ ಬಾಗಿಲಿಗೆ ಸಸಿಗಳನ್ನು ಸರಬರಾಜು ಮಾಡಲಾಗುವುದು. ಅದ ಕ್ಕಾಗಿ ನಗರದ ವಿವಿಧೆಡೆ 16ಕ್ಕೂ ಹೆಚ್ಚು ಪ್ರಭೇದಗಳ ಗಿಡಗಳನ್ನು ಬೆಳೆಸಲಾಗಿದೆ. ಪಾಲಿಕೆ ವ್ಯಾಪ್ತಿಯ 198 ವಾರ್ಡ್‌ಗಳಿಗೆ ಅಗತ್ಯವಾದೆಡೆಗೆ ಸರಬರಾಜು ಮಾಡಲಾಗುವುದು.

ನಾಗರಿಕರು ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಮಾಲಿನ್ಯ ಮುಕ್ತ ನಗರದ ನಿರ್ಮಾಣಕ್ಕೆ ಕೈಜೋಡಿಸಬೇಕು. ಗ್ರೀನ್‌ ಆ್ಯಪ್‌ ಸಾರ್ವಜನಿಕ ಸ್ನೇಹಿಯಾಗಿದ್ದು, ಪ್ರತಿಯೊಬ್ಬರು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.  ಪಾಲಿಕೆಯೂ ತನ್ನ ವ್ಯಾಪ್ತಿಯ ಉದ್ಯಾನ ವನ, ಕೆರೆ ಅಚ್ಚುಕಟ್ಟು ಸೇರಿದಂತೆ ಖಾಲಿ ಪ್ರದೇಶಗಳಲ್ಲಿ ಗಿಡ, ಮರಗಳನ್ನು ಬೆಳೆಸಲಿದೆ. ಸಾರ್ವಜನಿಕರು ಕೂಡ ಈ ಯೋಜನೆ ಸಹಕಾರ ನೀಡುವ ಮೂಲಕ ಪುನಃ ಬೆಂಗಳೂರಿಗೆ ಉದ್ಯಾನ ನಗರಿ ಖ್ಯಾತಿಗೆ ಕಾಯಂಗೊಳಿಸಬೇಕು.

ಮಕ್ಕಳು, ಯುವಕರಿಗೆ ಈ ಯೋಜನೆ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮಹೇಂದ್ರ ಜೈನ್‌  ಮತ್ತಿತರರು ಹಾಜರಿದ್ದರು.

Advertisement

ಯಾವ್ಯಾವ ಗಿಡಗಳು?
ಹೊಂಗೆ, ಮಹಾಗನಿ, ನೇರಳೆ, ನೆಲ್ಲಿ, ಹೊಳೆದಾಸವಾಳ, ಕಾಡುಬಾದಾಮಿ, ತಪಸಿ, ಬೇವು, ಹೂವರಸಿ, ತಬೂಬಿಯಾ, ಚೆರ್ರಿ, ಬಸವನಪಾದ, ಸಂಪಿಗೆ, ಜಕರಾಂಡ, ಶಬೂಬಿಯಾ ಗೈಕಾನಾ, ಸೀಮಾರೂಬಾ ಸಸಿಗಳು ಬಿಬಿಎಂಪಿಯಲ್ಲಿ ಲಭ್ಯವಿದೆ. ಸಾರ್ವಜನಿಕರು ಅಗತ್ಯ ಸಸಿಗಳನ್ನು ಪಡೆಯಬಹುದು. ಅತ್ಯುತ್ತಮವಾಗಿ ಸಸಿಗಲನ್ನು ಬೆಳೆಸಿ ಪ್ರೋತ್ಸಾಹಿಸುವ ನಾಗರಿಕರಿಗೆ ಮತ್ತು ಸಂಘ, ಸಂಸ್ಥೆಗಳಿಗೆ  ಪಾಲಿಕೆಯಿಂದ ಪ್ರಮಾಣಪತ್ರ ನೀಡಲು ಉದ್ದೇಶಿಸಲಾಗಿದೆ.

ಯಶ್‌ ಪ್ರತಿಷ್ಠಾನದಿಂದ 10 ಲಕ್ಷ 
ಸಿಲಿಕಾನ್‌ ಸಿಟಿಯನ್ನು ಹಸಿರುಗೊಳಿಸಲು ಮುಂದಾಗಿರುವ ಬಿಬಿಎಂಪಿ ಕಾರ್ಯಕ್ಕೆ ಯಶ್‌ ಪ್ರತಿಷ್ಠಾನ ಕೈ ಜೋಡಿಸಲಿದೆ ಎಂದು ಚಿತ್ರನಟ ಯಶ್‌ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ನಗರವನ್ನು ಹಸಿರುಮಯಗೊಳಿಸಲು ಶ್ರಮಿಸಲಿರುವ ಪಾಲಿಕೆ ಕ್ರಮ ಸ್ವಾಗತಾರ್ಹ. ಈ ಕಾರ್ಯದಲ್ಲಿ ನಾನು ಕೂಡ ಕೈ ಜೋಡಿಸುತ್ತೇನೆ ಎಂದರು. ಅಲ್ಲದೆ, “ಗ್ರೀನ್‌ ಆ್ಯಪ್‌’ ಮೂಲಕ ಬಿಬಿಎಂಪಿ ಸಾರ್ವಜನಿಕರಿಗೆ ಉಚಿತವಾಗಿ 10 ಲಕ್ಷ ಗಿಡಗಳನ್ನು ಹಂಚಿಕೆ ಮಾಡಲು ಪ್ರತಿಷ್ಠಾನದಿಂದ ಗಿಡ ಬೆಳೆಸುವ ಕಾರ್ಯಕ್ಕೆ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು. 

ಬಿಡಿಎ ಮತ್ತು ಜಿಲ್ಲಾಧಿಕಾರಿಯವರು ಸರ್ಕಾರಿ ಸ್ಥಳಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಈ ವರ್ಷ ನಗರದಲ್ಲಿ 15 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಈ ಕಾರ್ಯದಲ್ಲಿ ಸಂಘ, ಸಂಸ್ಥೆಗಳು ಕೂಡ ಪಾಲ್ಗೊಳ್ಳಲಿವೆ. 
-ಕೆ.ಜೆ.ಜಾರ್ಜ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next