ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಿತ್ತೂರು ರಾಣಿ ಚೆನ್ನಮ ಮೂರ್ತಿ ದೆಹಲಿಯಲ್ಲಿದೆ. ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ದೆಹಲಿಯಲ್ಲಿ ಸ್ಥಾಪಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಈ ಬಗ್ಗೆ ಸಂಬಂಧಿಸಿದವರಿಗೆ ಪತ್ರ ಬರೆಯುತ್ತೇನೆ. ಸೂಕ್ತ ಸ್ಥಳ ಹುಡುಕುತ್ತೇವೆ. ರಾಯಣ್ಣ ಪ್ರತಿಮೆ ದೆಹಲಿಯಲ್ಲಿ ಸ್ಥಾಪಿಸುತ್ತೇವೆ. ಎಲ್ಲೆಲ್ಲಿ ಕಿತ್ತೂರು ರಾಣಿ ಪ್ರತಿಮೆಗಳಿವೆಯೋ ಅಲ್ಲೆಲ್ಲ ರಾಯಣ್ಣ ಪ್ರತಿಮೆಗಳನ್ನು ನಿರ್ಮಿಸುತ್ತೇವೆ ಎಂದರು.
ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ನಿರ್ಮಾಣಕ್ಕೆ ಸರ್ಕಾರ 55 ಕೋಟಿ ರೂ ಬಿಡುಗಡೆ ಮಾಡಿದೆ. ರಾಯಣ್ಣನ ಹೆಸರಲ್ಲಿ ಬೃಹತ್ ಮಿಲಿಟರಿ ಸ್ಕೂಲ್ ಮಾಡ್ತೇವೆ. ಒಟ್ಟು 185 ಕೋಟಿ ರೂ ಖರ್ಚಾಗಲಿದೆ ಎಂದರು.
100 ಎಕರೆಯಲ್ಲಿ ಮಿಲಿಟರಿ ಸ್ಕೂಲ್ ನಿರ್ಮಿಸಲಾಗುತ್ತಿದೆ. ಮಿಲಿಟರಿ ಶಾಲೆಯನ್ನು ರಕ್ಷಣಾ ಇಲಾಖೆಗೆ ನೀಡಲಾಗುವುದು. ನಂದಗಡದಲ್ಲಿ ರಾಯಣ್ಣ ಅವರ ಸ್ಮಾರಕ ನಿರ್ಮಿಸಲಾಗುವುದು. ಸಂಗೊಳ್ಳಿಯಲ್ಲೂ ರಾಯಣ್ಣನ ಸ್ಮರಣೆಗೆ ರಾಕ್ ಗಾರ್ಡನ್ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ನನಗೆ ರಾಜಕೀಯ ಬದ್ಧತೆಯಿದೆ, ಬೇರೆ ಪಕ್ಷಕ್ಕೆ ಹೋಗಲ್ಲ: ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ
ಎಲ್ಲ ಶಾಲಾ ಕಾಲೇಜುಗಳಲ್ಲೂ ರಾಯಣ್ಣನ ಭಾವಚಿತ್ರ ಹಾಕಲು ಆದೇಶ ಮಾಡುತ್ತೇವೆ. ಇವತ್ತೇ ಈ ಆದೇಶ ಮಾಡುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.