ಬೆಂಗಳೂರು: ದೇಶಾದ್ಯಂತ 14 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮತಿ ಇರಾನಿ ತಿಳಿಸಿದ್ದಾರೆ.
ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಮಹಿಳಾ ಹಾಗೂ ಮಕ್ಕಳ ಇಲಾಖೆ ಕಾರ್ಯಕ್ರಮಗಳ ಕುರಿತು ಸೋಮವಾರ ಪ್ರಗತಿ ಪರಿಶೀಲನ ಸಭೆ ನಡೆಸಿದ ಅವರು, ಪ್ರಧಾನಿ ಮೋದಿ ಭಾರತ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರು ಅಭಿವೃದ್ಧಿಯಾಗಬೇಕು ಎಂದು ಹೇಳಿದ್ದಾರೆ.
18 ಇಲಾಖೆಗಳ ಜತೆ ಸೇರಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಯೋಜನೆಗಳನ್ನು ರೂಪಿಸಲಾಗಿದೆ. ದೇಶದಲ್ಲಿ 14 ಲಕ್ಷ ಅಂಗನವಾಡಿಗಳ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ 11 ಲಕ್ಷ ಅಂಗನವಾಡಿಗಳು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ 9 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಭೇಟಿ ಬಚಾವ್, ಭೇಟಿ ಪಡಾವ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲೊಂದು ಮಹಿಳಾ ಕೇರ್ ಸೆಂಟರ್ ಇರಬೇಕು ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಅವರ ನಿರ್ದೇಶನದಂತೆ ಈಗಾಗಲೇ ದೇಶಾದ್ಯಂತ 704 ಒನ್ ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿದೆ. ಈ ಸೆಂಟರ್‌ನಿಂದ ದೈಹಿಕವಾಗಿ, ಮಾನಸಿಕವಾಗಿ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಎಲ್ಲ ಆರೋಗ್ಯ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ; ಬೋಟ್‌ನಲ್ಲಿದ್ದವರ ರಕ್ಷಣೆ
ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಬಗ್ಗೆಯೂ ಚರ್ಚೆಯಾಗಿದ್ದು, ಜಿಲ್ಲಾಡಳಿತದ ಮೂಲಕ ಗ್ರಾಮೀಣ ಮಕ್ಕಳ ಅಭಿವೃದ್ಧಿ ಪೌಷ್ಟಿಕಾಂಶ ಹೆಚ್ಚಿಸಲಾಗುತ್ತಿದೆ. ಪ್ರಧಾನಿ ಮೋದಿಯವರ ಕನಸಿನ ಜನಧನ್ ಖಾತೆ ಯೋಜನೆಯಿಂದ 24 ಕೋಟಿ ಮಹಿಳೆಯರು ಮೊದಲ ಬಾರಿಗೆ ಖಾತೆ ತೆರೆದಿದ್ದಾರೆ. ಈ ಯೋಜನೆ ಅಡಿಯಲ್ಲಿ 34 ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ ಎಂದು ಹೇಳಿದರು.