Advertisement

ಮಳೆ ಆರಂಭಕ್ಕೂ ಮೊದಲು ಮನೆ ಹಸ್ತಾಂತರಕ್ಕೆ ಕ್ರಮ : ಜಿಲ್ಲಾಧಿಕಾರಿ

01:00 AM Mar 04, 2019 | Team Udayavani |

ಮಡಿಕೇರಿ: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮಳೆಗಾಲ ಆರಂಭವಾಗುವುದಕ್ಕೆ ಮೊದಲು ಮನೆಗಳನ್ನು ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ತಿಳಿಸಿದ್ದಾರೆ.   

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮದೆ ಮತ್ತು ಕರ್ಣಂಗೇರಿಯಲ್ಲಿ 55 ಮನೆಗಳ ನಿರ್ಮಾಣ ಕಾಮಗಾರಿ ಮೇಲ್ಛಾವಣಿ ಹಂತ ತಲುಪಿದೆ ಎಂದು ಅನೀಸ್‌ ಕಣ್ಮಣಿ ಜಾಯ್‌ ಅವರು ವಿವರಿಸಿದರು.  

ಪ್ರಥಮ ಹಂತದಲ್ಲಿ ಮನೆ ಕಳೆದುಕೊಂಡ 840 ನಿರಾಶ್ರಿತರನ್ನು ಗುರಿತಿಸಲಾಗಿತ್ತು, ಬಳಿಕ ಕೆಲವರ ಹೆಸರು ಕೈಬಿಟ್ಟಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆ, ಕೈಬಿಟ್ಟಿರುವವರನ್ನು ಸೇರ್ಪಡೆ ಮಾಡಲು ಕ್ರಮವಹಿಸಲಾಗಿದೆ. ಈಗಾಗಲೇ ಜಂಬೂರು ಮದೆ, ಕರ್ಣಂಗೇರಿ ಮತ್ತಿತರ ಕಡೆಗಳ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.  

 ಮೊದಲ ಆದ್ಯತೆಯಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಸಂತ್ರಸ್ತರಿಗೆ ಮನೆ ನಿರ್ಮಿಸುವುದು, ಎರಡನೇ ಆದ್ಯತೆಯಲ್ಲಿ ಸಂತ್ರಸ್ತರು ಸ್ವತಃ ಮನೆ ಕಟ್ಟಿಕೊಳ್ಳಲು ಮುಂದೆ ಬಂದವರಿಗೆ ಹಣ ಪಾವತಿಸುವುದು, ಮೂರನೇ ಆದ್ಯತೆ ಸಂತ್ರಸ್ತರ ಜಾಗದಲ್ಲಿ ಏಜೆನ್ಸಿಗಳ ಮೂಲಕ ಮನೆ ನಿರ್ಮಾಣಕ್ಕೆ ಕ್ರಮವಹಿಸುವುದು. 

ಸರ್ಕಾರಿ ಭೂಮಿಯಲ್ಲಿ ಏಜೆನ್ಸಿಗಳಿಂದ ಮನೆ ನಿರ್ಮಿಸಿ ಕೊಡುವುದು. ಈ ಕಾರ್ಯಗಳು ನಡೆದಿದ್ದು, ಇನ್ಫೋಸಿಸ್‌ ಮತ್ತು ಪಿಟ್ಟೂಸ್‌ ಸಂಸ್ಥೆಗಳು ಮುಂದೆ ಬಂದಿವೆ. ಇವರಲ್ಲಿ ಈಗಾಗಲೇ ಇನ್ಫೋಸಿಸ್‌ ಸಂಸ್ಥೆಗೆ ಜಂಬೂರಿನಲ್ಲಿ ಜಾಗ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.   

Advertisement

 ಪರಿಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೀವ ಹಾನಿಯಾದ 19 ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರದ ಚೆಕ್‌ ನೀಡಲಾಗಿದೆ. ಗೃಹ ಉಪಯೋಗಿ ವಸ್ತುಗಳನ್ನು ಕಳೆದುಕೊಂಡ 4,564 ಕುಟುಂಬದವರಿಗೆ ಮೊದಲ ಕಂತಿನಲ್ಲಿ 3,800 ರೂ ನಂತೆ 173 ಲಕ್ಷ ರೂ ಪರಿಹಾರ ಪಾವತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

 ಭಾಗಶಃ ಮನೆ ಹಾನಿಯಾದ 2871 ಕುಟುಂಬಗಳಿಗೆ ಒಟ್ಟು 429.88 ಲಕ್ಷಗಳ ಪರಿಹಾರವನ್ನು ವಿತರಿಸಲಾಗಿದೆ. ಸಂಪೂರ್ಣ ಹಾಗೂ ತೀವ್ರ ಮನೆ ಹಾನಿಯಾದ 1045 ಕುಟುಂಬಗಳಿಗೆ ತಲಾ 1.03 ಲಕ್ಷದಂತೆ ಒಟ್ಟು 631.06 ಲಕ್ಷಗಳು ಹಾಗೂ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಕುಟುಂಬಕ್ಕೆ ರೂ 50 ಸಾವಿರ ರೂಪಾಯಿಗಳಂತೆ ಒಟ್ಟು 510.50 ಲಕ್ಷಗಳ ಹೆಚ್ಚುವರಿ ಪರಿಹಾರವನ್ನು ಸಂತ್ರಸ್ತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಎನ್‌ಇಎಫ್ಟಿ ಮೂಲಕ ಜಮಾ ಮಾಡಲಾಗಿರುತ್ತದೆ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ತಿಂಗಳಿಗೆ ರೂ.10 ಸಾವಿರದಂತೆ ಮನೆ ಬಾಡಿಗೆಯನ್ನು ನೀಡಲಾಗುತ್ತಿದೆ.

ಸಂಪೂರ್ಣ ಮನೆ ಹಾನಿಯಾದ 1020 ಕುಟುಂಬದವರಿಗೆ ತಲಾ 50 ಸಾವಿರ ರೂ ಪಾವತಿಸಲಾಗಿದೆ. 470 ಕುಟುಂಬಗಳಿಗೆ ಬಾಡಿಗೆ ಭರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.   

ಬೆಳೆ ಪರಿಹಾರಕ್ಕೆ 133 ಕುಟುಂಬಗಳ ಬ್ಯಾಂಕ್‌ ಖಾತೆಯ ರೆಸಿಪೆಂಟ್‌ ಐಡಿ, ಐಎಫ್ಎಸ್‌ಸಿ ಕೋಡ್‌ ವ್ಯತ್ಯಾಸವಾಗಿರುವುದು ತಿಳಿದುಬಂದಿತ್ತು, ಇದರಲ್ಲಿ 63 ಕುಟುಂಬಗಳ ರೆಸಿಪೆಂಟ್‌ ಐಡಿ, ಐಎಫ್ಎಸ್‌ಸಿ ಕೋಡ್‌ ಸರಿಪಡಿಸಲಾಗಿದೆ. ಉಳಿದವನ್ನು ಒಂದೆರಡು ದಿನಗಳಲ್ಲಿ ಸರಿಪಡಿಸಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದರು.   

 ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರಿಂದ ಸಾಕಷ್ಟು ಪರಿಹಾರ ಸಾಮಾಗ್ರಿಗಳು ಕೊಡಗು ಜಿಲ್ಲೆಗೆ ಹರಿದುಬಂದವು. ಈಗಾಗಲೇ ಸಾಮಾ ಗ್ರಿಗಳನ್ನು ಸಂತ್ರಸ್ತರಿಗೆ ಒದಗಿಸಲಾಗಿದೆ. 

ಉಳಿದಂತೆ ಗೋದಾಮಿನಲ್ಲಿ ಇರುವ ಸಾಮಗ್ರಿಗಳನ್ನು ಎರಡು ವಾರದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. 

ಪ್ರಕೃತಿ ವಿಕೋಪದಿಂದಾಗಿ 29,266 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಸೇರಿದಂತೆ ವಿವಿಧ ಬೆಳೆಗಳ ಹಾನಿಯಾಗಿದ್ದು, ಈಗಾಗಲೇ 14,609 ಹೆಕ್ಟೇರ್‌ ಪ್ರದೇಶಕ್ಕೆ ಪರಿಹಾರ ಪಾವತಿಸಲಾಗಿದೆ ಎಂದು ಅನೀಸ್‌ ಕಣ್ಮಣಿ ಜಾಯ್‌ ಅವರು ಹೇಳಿದರು.  ಸುಮಾರು 34 ಸಾವಿರ ರೈತ ಕುಟುಂಬಗಳಲ್ಲಿ 28,208 ರೈತರು ಹೆಸರು ನೋಂದಾಯಿಸಿದ್ದಾರೆ. ಶೇ.64 ರಷ್ಟು ಕುಟುಂಬಗಳು ಹೆಸರು ನೋಂದಾಯಿಸಿದ್ದು, 17 ಕೋಟಿ ರೂ ಪರಿಹಾರ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.     

 ಪ್ರಕೃತಿ ವಿಕೋಪದಿಂದಾಗಿ ಸುಮಾರು 1,309 ಹೆಕ್ಟೇರ್‌ ಪ್ರದೇಶದಲ್ಲಿ ಭೂಮಿ ಹಾನಿಯಾಗಿದ್ದು (ಭೂ ಕುಸಿತ, ಬರೆ ಕುಸಿತ, ಭೂಮಿ ಕೊಚ್ಚಿಕೊಂಡು ಹೋಗಿರುವುದು) ಒಂದು ಹೆಕ್ಟೇರ್‌ ಪ್ರದೇಶಕ್ಕೆ 18 ಸಾವಿರ ರೂ ಪರಿಹಾರ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

ಕೊಡಗು ಜಿಲ್ಲೆ ಬೆಟ್ಟಗುಡ್ಡಗಳಿಂದ ಆವೃತ್ತವಾಗಿದ್ದು ಭೂಕುಸಿತ ಉಂಟಾಗುವ ಪ್ರದೇಶಗಳನ್ನು ಗುರ್ತಿಸಿ ಮುನ್ನೆಚ್ಚರಿಕೆ ವಹಿಸುವಂತಾಗಬೇಕು ಎಂಬ ಮಾಹಿತಿ ಕೇಳಿ ಬರುತ್ತಿರುವ ಹಿನ್ನೆಲೆ, ಭಾರತೀಯ ಭೂವಿಜ್ಞಾನ ಸಂಸ್ಥೆಯು (ಜಿಐಎಸ್‌) ಜಿಲ್ಲೆಯ ನಾನಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮಾರ್ಚ್‌ 30 ರೊಳಗೆ ವರದಿ ನೀಡಲಿದ್ದಾರೆ ಎಂದರು. 

ಕೃಷಿ 
ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ 7,109 ಹೆಕ್ಟೇರ್‌ ಪ್ರದೇಶದಲ್ಲಿ ಶೇ. 133 ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆ. 

695  ಹೆಕ್ಟೇರ್‌ ಪ್ರದೇಶದಲ್ಲಿ ಹೂಳು ತುಂಬಿ ಬೆಳೆ ಹಾನಿಯಾಗಿದೆ. 68,092 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳಾದ ಕಾಫಿ, ಕರಿಮೆಣಸು, ಬಾಳೆ, ಶುಂಟಿ ಮತ್ತು ಏಲಕ್ಕಿ ಬೆಳೆಗಳಲ್ಲಿ ಶೇ.33 ಕ್ಕಿಂತ ಹೆಚ್ಚು ಹಾನಿಯಾಗಿದೆ. 
ಮೊಬೈಲ್‌ ಆಪ್‌ ಬಳಕೆ ಮಾಡಿ ಜಿಲ್ಲೆಯಾದ್ಯಂತ ಬೆಲೆ ನಷ್ಟದ ಬಗ್ಗೆ ಸರ್ವೆ ಪೂರ್ಣಗೊಳಿಸಿದ್ದು ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದು ಪರಿಹಾರ ವಿತರಣಾ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ 1,785 ಲಕ್ಷ ರೂ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಪಾವತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next