Advertisement

ಕೇಂದ್ರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ

09:39 PM Apr 03, 2019 | Team Udayavani |

ಹನೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು ಬರ ನಿರ್ವಹಣೆಗಾಗಿ ನೆರೆಯ ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ ರೂ. ನೀಡಿ ಕರ್ನಾಟಕ ರಾಜ್ಯಕ್ಕೆ ಕೇವಲ 200 ಕೋಟಿ ನೆರವು ನೀಡಿದ್ದಾರೆ ಎಂದು ಸಂಸದ ಧ್ರುವನಾರಾಯಣ್‌ ಆರೋಪಿಸಿದರು.

Advertisement

ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, 2008-09ನೇ ಸಾಲಿನಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ಸಿಂಗ್‌ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ಆದರೆ ಮೋದಿ ಅವರು ದೇಶದ ಒಬ್ಬನೇ ಒಬ್ಬ ರೈತನ ಸಾಲವನ್ನೂ ಮನ್ನಾ ಮಾಡಲಿಲ್ಲ, ಬದಲಾಗಿ ಉದ್ಯಮಿಗಳ, ವ್ಯಾಪಾರಿಗಳ , ಧನಿಕರ 3 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು ಎಂದು ದೂರಿದರು.

ಚರ್ಚಿಸಲು ಸವಾಲ್‌: ಕಳೆದ 5 ವರ್ಷದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ವಿಫ‌ಲವಾಗಿರುವ ನರೇಂದ್ರಮೋದಿ ಅವರು ಅಡುಗೆ ಅನಿಲ ಸಿಲಿಂಡರ್‌ನ ಬೆಲೆ 382 ರಿಂದ 900 ರೂ.ಗೆ ಏರಿಕೆ ಮಾಡಿದ್ದಾರೆ. ದಿನನಿತ್ಯ ಬಳಕೆಯ ಪೆಟ್ರೋಲ್‌, ಡೀಸೆಲ್‌ ಬೆಲೆ ದುಪ್ಪಟ್ಟಾಗಿದ್ದರೂ ಬೆಲೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಆಹಾರ ಭದ್ರತೆ ಕಾಯ್ದೆ, ಕಡ್ಡಾಯ ಶಿಕ್ಷಣ ನೀತಿಯಂಥ ಹತ್ತು ಹಲವಾರು ಯೋಜನೆ ಜಾರಿಗೊಳಿಸಲಾಗಿತ್ತು. ಆದರೆ ಮೋದಿ ನೇತೃತ್ವದ ಸರ್ಕಾರ ಯಾವುದೇ ಜನಪರ ಕಾರ್ಯಕ್ರಮವನ್ನು ನೀಡಿಲ್ಲ. ಯಾವುದಾದರೂ ಕಾರ್ಯಕ್ರಮಗಳ ಪಟ್ಟಿ ಇದ್ದಲ್ಲಿ ವೇದಿಕೆಯಲ್ಲಿ ಚರ್ಚಿಸೋಣ ಬನ್ನಿ ಎಂದು ಬಹಿರಂಗ ಸವಾಲು ಹಾಕಿದರು.

ಮಲತಾಯಿ ಧೋರಣೆ: ನರೇಂದ್ರ ಮೋದಿಯವರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಭವಿಸುತ್ತಿದ್ದು ರಾಜ್ಯದ 21 ಜಿಲ್ಲೆಗಳಲ್ಲಿ ಬರಪರಿಸ್ಥಿತಿ ಇದ್ದು ನೆರವಿನ ಹಸ್ತ ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಮಾಡಿದರೆ ಕೇವಲ 200 ಕೋಟಿ ನೆರವು ನೀಡಿದ್ದಾರೆ. ಅದೇ ನೆರೆಯ ಮಹಾರಾಷ್ಟ್ರಕ್ಕೆ 4ಸಾವಿರ ಕೋಟಿ ನೆರವು ನೀಡಿದ್ದಾರೆ. ಮಹಾತ್ಮಗಾಂಧಿ ನರೇಗಾ ಯೋಜನೆಯ 2, 500 ಕೋಟಿ ಅನುದಾನ ಬಾಕಿಯಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಕಳೆದ 5 ವರ್ಷದಲ್ಲಿ ಒಂದೇ ಒಂದು ರೂಪಾಯಿ ಅನುದಾನ ನೀಡಿಲ್ಲ ಎಂದು ಟೀಕಿಸಿದರು.

Advertisement

ಕೊಟ್ಟ ಭರವಸೆ ಮರೆತ ಮೋದಿ: ಶಾಸಕ ನರೇಂದ್ರ ಮಾತನಾಡಿ, ಕಳೆದ 5 ವರ್ಷದಲ್ಲಿ ನರೇಂದ್ರ ಮೋದಿ ದೇಶಕ್ಕಾಗಿ ಏನನ್ನೂ ಮಾಡಿಲ್ಲ. ಪ್ರಪಂಚದ ಎಲ್ಲಾ ದೇಶಗಳನ್ನು ಸುತ್ತುತ್ತಾ ಅಲ್ಲಿನ ರಾಷ್ಟ್ರಾಧ್ಯಕ್ಷರ ಜೊತೆ ಭಾವಚಿತ್ರಗಳನ್ನು ತೆಗೆಸಿ ಕೊಳ್ಳುತ್ತಾ ಚೀನಾದಲ್ಲಿ ಹೋಗಿ ಟೀ ಕುಡಿದಿದ್ದು, ಪಾಕಿಸ್ತಾನದ ನವಾಜ್‌ ಷರೀಫ್ ಭೇಟಿ ಮಾಡಿ ಬಿರಿಯಾನಿ ತಿಂದಿದ್ದೇ ಅವರ ಸಾಧನೆಯಾಗಿದೆ. ಚುನಾವಣಾ ಪೂರ್ವದಲ್ಲಿ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಹಣ ಜಮೆ ಮಾಡುವುದಾಗಿ ತಿಳಿಸಿದ್ದರು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆ ನೀಡಿದ್ದರು ಇನ್ನೂ ಕೂಡ ನಯಾಪೈಸೆ ಹಣ ಜನತೆಯ ಖಾತೆಗೆ ಬಂದಿಲ್ಲ ಎಂದು ಟೀಕಿಸಿದರು.

ನುಡಿದಂತೆ ನಡೆದ ಸಿದ್ದು ಸರ್ಕಾರ: ರಾಜ್ಯದಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚುನಾವಣಾ ಪೂರ್ವದಲ್ಲಿ 165 ಭರವಸೆಗಳನ್ನು ನೀಡಲಾಗಿತ್ತು. ಈ ಎಲ್ಲಾ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಪರಿಶಿಷ್ಠ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಜನಸಂಖ್ಯೆಗನುಗುಣವಾಗಿ ಅನುದಾನ ಮೀಸಲಿಡುವ ಕಾನೂನ‌ನ್ನು ಜಾರಿಗೊಳಿಸಿ ವಾರ್ಷಿಕ 25 ಸಾವಿರ ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ಹೇಳಿಕೊಳ್ಳಲು ಏನೂ ಇಲ್ಲ: ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಹೇಳಿಕೊಳ್ಳಲು ಮತ್ತು ಮತದಾರರ ಬಳಿ ಮತ ಕೇಳಲು ಯಾವುದೇ ಸಾಧನೆಗಳಿಲ್ಲ, ಆದರೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಕಳೆದ 10 ವರ್ಷದ ಅವಧಿಯಲ್ಲಿ ಸಂಸದರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿನ ಜನಪರ ಕಾರ್ಯಕ್ರಮಗಳು ಮತ್ತು ಕಳೆದ ಒಂದು ವರ್ಷದಲ್ಲಿ ಸಮ್ಮಿಶ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಮುಂದಿಟ್ಟು ಮತಯಾಚನೆ ಮಾಡಬಹುದು.

ಅಲ್ಲದೆ ಸಂಸದರಾದ ಧ್ರುವನಾರಾಯಣ್‌ ಅವರು ಉತ್ತಮ ಸಂಸದೀಯ ಪಟುವಾಗಿದ್ದು ದೇಶದಲ್ಲಿಯೇ 4ನೇ ಮತ್ತು ರಾಜ್ಯದಲ್ಲಿ ಪ್ರಥಮ ಸಂಸದೀಯ ಪಟುವಾಗಿದ್ದಾರೆ. ಈ ಎಲ್ಲಾ ಅಂಶಗಳನ್ನು ಮತದಾರರ ಮುಂದಿಟ್ಟು ಅತಿ ಹೆಚ್ಚು ಮತ ಮೈತ್ರಿ ಅಭ್ಯರ್ಥಿ ಪರ ಚಲಾವಣೆಯಾಗಬೇಕು ಎಂದು ಮನವಿ ಮಾಡಿದರು.

ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಚಾಮುಲ್‌ ಅಧ್ಯಕ್ಷ ಗುರುಮಲ್ಲಪ್ಪ, ಜಿ.ಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ, ಸದಸ್ಯರಾದ ಬಸವರಾಜು, ಮರುಗದಮಣಿ, ತಾಪಂ ಅಧ್ಯಕ್ಷ ರಾಜೇಂದ್ರ, ಸದಸ್ಯರಾದ ನಟರಾಜು, ಶಿವಮ್ಮ, ಗ್ರಾಪಂ ಅಧ್ಯಕ್ಷ ರಂಗಶೆಟ್ಟಿ, ಉಪಾಧ್ಯಕ್ಷೆ ಶಿವಮ್ಮ, ಮುಖಂಡರಾದ ಪಾಳ್ಯ ಕೃಷ್ಣ, ಕೊಪ್ಪಾಳಿ ಮಹಾದೇವ ನಾಯ್ಕ, ಗುಂಡಾಪುರ ಜಯರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next