ನೆಲಮಂಗಲ: ಕೇಂದ್ರ ಸರ್ಕಾರ ರಾಜ್ಯದ ನ್ಯಾಯಾಲಯಗಳು ಮತ್ತು ನ್ಯಾಯವಾದಿಗಳ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಬೆಂಗಳೂರು ವಕೀಲರ ಸಂಘದ ನೂತನ ಅಧ್ಯಕ್ಷ ಎ.ಪಿ.ರಂಗನಾಥ್ ಆರೋಪಿಸಿದರು.
ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ವಕೀಲರ ಸಂಘ ಆಯೋಜಿಸಿದ್ದ ಬೆಂಗಳೂರು ವಕೀಲರ ಸಂಘದ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಕಲಾಪ ಬಹಿಷ್ಕರಿಸಿ ಹೋರಾಟ: ರಾಜ್ಯ ಉಚ್ಚ ನ್ಯಾಯಾಲಯದಲ್ಲಿ 65 ನ್ಯಾಯಾಧೀಶರ ಪೈಕಿ ಕೇವಲ 25 ಮಂದಿ ನ್ಯಾಯಾಧೀಶರಿದ್ದಾರೆ.ಇದರಿಂದಾಗಿ ವಕೀಲರು ಮತ್ತು ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಹಿರಿಯ ನ್ಯಾಯವಾದಿಗಳ ನೇತೃತ್ವದಲ್ಲಿ ಸೋಮವಾರದಿಂದ ಸರತಿದಿಯಂತೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಸರ್ಕಾರಗಳು ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ ರಾಜ್ಯ ವ್ಯಾಪ್ತಿ ನ್ಯಾಯಾಲಯಗಳ ಕಲಾಪ ಬಹಿಷ್ಕರಿಸಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು ವಕೀಲರ ಸಂಘಕ್ಕೆ ಅವಿಭಜಿತ ಬೆಂಗಳೂರು ಜಿಲ್ಲಾದ್ಯಂತವಿರುವ ಬಹುತೇಕ ವಕೀಲರು ಸದಸ್ಯತ್ವ ಪಡೆದುಕೊಂಡು ಕೆಲದಿನಗಳ ಹಿಂದೆಯಷ್ಟೇ ನಡೆದ ಸಂಘದ ಚುನಾವಣೆಯಲ್ಲಿ 1000ಕ್ಕೂ ಹೆಚ್ಚು ಮತಗಳ ಅಂತರದಿಂದ ತಮ್ಮನ್ನು ಗೆಲ್ಲಿಸಿದ್ದಾರೆ. ಅವರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಿಳಿಸಿದರು.
ಹೆಚ್ಚವರಿ ನ್ಯಾಯಾಲಯ ಪ್ರಾರಂಭಿಸಲು ಹೋರಾಟ: ನೆಲಮಂಗಲ ವಕೀಲರ ಸಂಘದ ಅಧ್ಯಕ್ಷ ಕೆ.ಕೇಶವಮೂರ್ತಿ ಮಾತನಾಡಿ, ತಾಲೂಕಿ ನಲ್ಲಿ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶೀಘ್ರವೇ ಸಂಘದ ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಕಿರಿಯ ಹಾಗೂ ಹೆಚ್ಚವರಿ ನ್ಯಾಯಾಲಯಗಳನ್ನು ಪ್ರಾರಂಭಿಸಲು ಹೋರಾಟ ಮಾಡಲಾಗುತ್ತದೆಂದರು.
ಅಭಿನಂದನೆ: ಕಾರ್ಯಕ್ರಮದಲ್ಲಿ ಬೆಂಗಳೂರು ವಕೀಲರ ಸಂಘದ ನೂತನ ಅಧ್ಯಕ್ಷ ಎ.ಪಿ.ರಂಗನಾಥ್, ಕಾರ್ಯದರ್ಶಿ ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ, ಪದಾಧಿಕಾರಿಗಳಾದ ಮಂಜುನಾಥ್, ಪ್ರಸಾದ್‌ಗೌಡ, ಕಾಂತರಾಜು, ಶಿವಕುಮಾರ್, ಮಮತಾ, ಗಿರೀಶ್ ಕುಮಾರ್, ಮುನಿಯಪ್ಪಗೌಡ ಮತ್ತಿತರರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ವೇಳೆ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆಂಪಯ್ಯ, ಕಾರ್ಯದರ್ಶಿ ಎನ್.ಪಿ.ರಘುನಾಥ್, ವಕೀಲ ಮುಖಂಡರಾದ ಎನ್.ಎಸ್.ರಾಜು, ಎಚ್.ಆರ್.ಕೃಷ್ಣ, ಶಿವರಾಮಯ್ಯ, ಹನುಮಂತೇ ಗೌಡ, ಹನುಮಂತರಾಯಪ್ಪ, ಬಿ.ಟಿ.ಮೋಹನ್
ಕುಮಾರ್, ಮನುಗೌಡ, ಆನಂದ್ ಇನ್ನಿತರಿದ್ದರು.