ಧಾರವಾಡ: ಆಧುನಿಕ ವೈಜ್ಞಾನಿಕ ಸಂಶೋಧನೆಗಳು ಮಕ್ಕಳಾಗದ ದಂಪತಿಗಳಿಗೆ ತಮ್ಮದೇ ಮಕ್ಕಳನ್ನು ಪಡೆಯುವಲ್ಲಿ ಹಲವು ಆಯ್ಕೆಗಳನ್ನು ಒದಗಿಸುವ ಮೂಲಕ ಹಲವು ಕುಟುಂಬಗಳ ನೆಮ್ಮದಿಗೆ ಕಾರಣವಾಗಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಎಸ್. ರವೀಂದ್ರನ್ ಹೇಳಿದರು.
ನಗರದಲ್ಲಿ ಆಸ್ತಾ ಮಹಿಳಾ ಕೇಂದ್ರ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಂಜೆತನ ನಿವಾರಣೆ ಮತ್ತು ಪ್ರನಾಳ ಶಿಶು ಕುರಿತ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರೂ ಕೂಡ ಆಧುನಿಕ ಸಂಶೋಧನೆಗಳೊಂದಿಗೆ ಹೆಜ್ಜೆ ಹಾಕುವುದು ಅನಿವಾರ್ಯ ಆಗಿರುವುದರಿಂದ ಬಂಡವಾಳದ ಅವಶ್ಯಕತೆ ಅವರಿಗೆ ಹಿಂದೆಂದಿಗಿಂತ ಹೆಚ್ಚಿದೆ. ಇದನ್ನು ಅನುಲಕ್ಷಿಸಿ ನಮ್ಮ ಬ್ಯಾಂಕ್ ವೈದ್ಯರ ತಕ್ಷಣದ ಅವಶ್ಯಕತೆ ಪೂರೈಸಲು ಗರಿಷ್ಠ 25 ಲಕ್ಷ ಸಾಲ ಒದಗಿಸುವ ಓಡಿ ಸೌಲಭ್ಯ ಜಾರಿಗೆ ತಂದಿದೆ. ಪ್ರನಾಳ ಶಿಶು ಮತ್ತು ಬಂಜೆತನ ನಿವಾರಣೆಗೆ ಧಾರವಾಡದಲ್ಲೇ ಅವಕಾಶ ದೊರೆತಿರುವುದಿಂದ ಜನಸಾಮಾನ್ಯರಿಗೂ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜ್ಯೋತಿ ಪ್ರಹ್ಲಾದ ಜೋಶಿ ಮಾತನಾಡಿ, ಮಕ್ಕಳಾಗದ ದಂಪತಿಗಳನ್ನು ಸಮಾಜ ನೋಡುವ ದೃಷ್ಟಿಕೋನವೇ ಭಿನ್ನವಾಗಿದೆ. ವಿಶೇಷವಾಗಿ ಮಹಿಳೆ ಮಾನಸಿಕವಾಗಿ ತುಂಬಾ ತೊಳಲಾಡುತ್ತಾಳೆ. ಬಂಜೆತನ ನಿವಾರಣೆಗೆ ಸಂಬಂಧಿಸಿ ಧಾರವಾಡದಲ್ಲಿ ಆಸ್ಪತ್ರೆ ತೆರೆದ ಡಾ| ಸೌಭಾಗ್ಯ ಕುಲಕರ್ಣಿ ಅವರ ಕಾರ್ಯ ಶ್ಲಾಘನೀಯ ಎಂದರು.
ಖ್ಯಾತ ಸ್ತ್ರೀರೋಗ ತಜ್ಞೆ ಡಾ| ಸೌಭಾಗ್ಯ ಕುಲಕರ್ಣಿ ಮಾತನಾಡಿ, ಆಧುನಿಕ ಜೀವನ ಶೈಲಿ ಪುರುಷ ಮತ್ತು ಮಹಿಳೆಯರನ್ನು ಬಂಜೆತನಕ್ಕೆ ದೂಡುತ್ತಿದ್ದು, ಸೂಕ್ತ ಔಷಧೋಪಚಾರ ಮತ್ತು ಜೀವನ ಶೈಲಿ ಬದಲಾವಣೆಯೊಂದಿಗೆ ಮಕ್ಕಳನ್ನು ಫಲಿಸುವಂತೆ ಮಾಡಬಹುದು. ಅದೂ ಸಾಧ್ಯವಾಗದಿದ್ದರೆ ಪ್ರನಾಳ ಶಿಶು ಪ್ರಯೋಗದ ಮೂಲಕ ಮೂಲಕ ಸಾಫಲ್ಯ ಕಾಣಬಹುದು ಎಂದು ತಿಳಿಸಿದರು.
ಆಸ್ಪತ್ರೆ ಮುಖ್ಯ ವೈದ್ಯೆ ಡಾ| ಕೋಮಲ ಕುಲಕರ್ಣಿ ಮಾತನಾಡಿ, ಪ್ರನಾಳ ಶಿಶು ವ್ಯವಸ್ಥೆ ಅತ್ಯಂತ ಸರಳಗೊಂಡಿದ್ದು ಜನಸಾಮಾನ್ಯರಿಗೂ ಲಭ್ಯವಾಗಬಲ್ಲ ತಂತ್ರಜ್ಞಾನವಾಗಿದೆ ಎಂದರು.
ಮಾಜಿ ಮೇಯರ್ ಪೂರ್ಣಾ ಪಾಟೀಲ, ಅಕ್ಕನ ಬಳಗದ ಅಧ್ಯಕ್ಷೆ ಮೀನಾಕ್ಷಿ ಕೋಟೂರು, ಬರಹಗಾರ್ತಿ ಮಾಲತಿ ಮುದಕವಿ, ರೋಟರಿ ಕ್ಲಬ್ ಉಪ ಗವರ್ನರ್ ಗೌರಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. 150ಕ್ಕೂ ಅಧಿಕ ದಂಪತಿಗಳು ಉಚಿತ ಶಿಬಿರದ ಪ್ರಯೋಜನ ಪಡೆದರು.